ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಸದ ಬಿ.ವೈ.ರಾಘವೇಂದ್ರ ಅವರು ಇಂದು ಪ್ರವಾಸಿ ಮಂದಿರದಲ್ಲಿ ಕಳೆದ ಜೂನ್ 12 ರಂದು ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ಅರಳಗೋಡು, ಚೆನ್ನಗೊಂಡ, ಭಾನುಕುಳ್ಳಿ ಮತ್ತು ತಲವಾಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಹಾಗೂ ರೈತ ಬಾಂಧವರಿಗಾಗಿ ಹಮ್ಮಿಕೊಳ್ಳಲಾಗಿದ್ದ ಜನಸಂಪರ್ಕ ಸಭೆಯ ಮುಂದುವರಿದ ಭಾಗವಾಗಿ, ಅಂದು ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಅನುಷ್ಠಾನ ಹಾಗೂ ಪ್ರಗತಿಯ ಕುರಿತು ಇಂದು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ನೀಡಿದ ದೂರುಗಳು ಮತ್ತು ಮನವಿಗಳಿಗೆ ಕೇವಲ ಭರವಸೆ ನೀಡದೇ, ಅವುಗಳನ್ನು ತಳಮಟ್ಟದಲ್ಲಿ ತ್ವರಿತವಾಗಿ ಅನುಷ್ಠಾನಕ್ಕೆ ತರುವುದೇ ನಮ್ಮ ಈ ಸಭೆಯ ಮುಖ್ಯ ಉದ್ದೇಶವಾಗಿದೆ.
ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ: ಕಾನೂರುಕೋಟೆ, ಭೀಮೇಶ್ವರ, ಉರುಳಗಲ್ಲು, ಮೇಘಾನೆ ಹಾಗೂ ಮುಪ್ಪಾನೆ ಜನವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಹೊರತುಪಡಿಸಿ, ಬಾಕಿ ಉಳಿದಿರುವ ಕಂದಾಯ ಭೂಮಿ ಮತ್ತು ಬಗರ್‍ಹುಕಂ ಸಾಗುವಳಿ ಜಮೀನುಗಳ ನಿಖರ ಗುರುತಿಸುವಿಕೆಗಾಗಿ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಜಂಟಿ ಸರ್ವೆ ನಡೆಸುವಂತೆ ಆದೇಶಿಸಲಾಯಿತು.
ಬಿಎಸ್‍ಎನ್‍ಎಲ್ ಟವರ್ ಕಾಮಗಾರಿ ಪ್ರಗತಿ : ಬರಂಗಿ ಹೋಬಳಿಯಲ್ಲಿ ನಿರ್ಮಾಣವಾಗುತ್ತಿರುವ ಬಿಎಸ್‍ಎನ್‍ಎಲ್ ಟವರ್‍ಗಳ ಕಾಮಗಾರಿಯನ್ನು ತ್ವರಿತವಾಗಿ ಮತ್ತು ಗುಣಮಟ್ಟದಿಂದ ಪೂರ್ಣಗೊಳಿಸಲು ಸೂಚಿಸಲಾಯಿತು. ಹೊಸ ಟವರ್ ನಿರ್ಮಾಣವಾಗಬೇಕಿರುವ ಗ್ರಾಮಗಳ ಸರ್ವೆ ನಡೆಸಿ ವಿವರವಾದ ಪಟ್ಟಿಯನ್ನು ಸಂಸದರ ಕಚೇರಿಗೆ ಸಲ್ಲಿಸಲು ತಿಳಿಸಲಾಯಿತು. ಮಳೆಗಾಲ ಹತ್ತಿರವಿರುವುದರಿಂದ ನೆಟ್‍ವರ್ಕ್ ಅಡೆತಡೆಯಿಲ್ಲದೆ ಸಿಗಲು ಸೋಲಾರ್ ಬದಲು ವಿದ್ಯುತ್ ಸಂಪರ್ಕ ಕಲ್ಪಿಸಲು ತಕ್ಷಣ ಕ್ರಮ ಜರುಗಿಸಲು ಸೂಚಿಸಲಾಯಿತು.
ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಮಾಜಿ ಸಚಿವರಾದ ಹರತಾಳು ಹಾಲಪ್ಪ, ದಿಶಾ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಹಕ್ರೆ, ಪ್ರಮುಖರಾದ ಟಿ.ಡಿ. ಮೇಘರಾಜ್, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಬರಂಗಿ ಹೋಬಳಿಯ ವಿವಿಧ ಗ್ರಾಮಗಳ ಜನಪ್ರತಿನಿಧಿಗಳು ಮತ್ತು ರೈತ ಮುಖಂಡರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


Comments 1