ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಚುರುಕುಗೊಳಿಸಲು ಕ್ರಮಕೈಗೊಳ್ಳಲಾಗಿದ್ದು, ನಿಗದಿತ ಅವಧಿಯ ಒಳಗಾಗಿ ಗುಣಮಟ್ಟದ ಕಾಮಗಾರಿಯನ್ನು ನಡೆಸಲು ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ತಿಳಿಸಿದರು.
ಅವರು ಮಂಗಳವಾರ ಸ್ಮಾರ್ಟ್ ಸಿಟಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಶಿವಮೊಗ್ಗ ಮಾದರಿ ನಗರವಾಗಿ ಅಭಿವೃದ್ಧಿಗೊಳ್ಳುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ನಗರದಲ್ಲಿರುವ ಎಲ್ಲಾ ಬೀದಿ ದೀಪಗಳನ್ನು ಬದಲಾಯಿಸಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ ಪ್ರಥಮ ಹಂತದಲ್ಲಿ 22 ಸಾವಿರ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಪಿಪಿಪಿ ಮಾದರಿಯ ಈ ಯೋಜನೆಯಿಂದಾಗಿ ವಿದ್ಯುತ್ ಗಣನೀಯ ಪ್ರಮಾಣದಲ್ಲಿ ಉಳಿತಾಯವಾಗಲಿದ್ದು, 7ವರ್ಷಗಳ ಉಚಿತ ನಿರ್ವಹಣೆ ಇರಲಿದೆ ಎಂದರು.
ಅಕ್ರಮ ಸಕ್ರಮ
ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳ ಸಕ್ರಮಗೊಳಿಸುವ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ಸಕ್ರಮಗೊಳಿಸುವ ಕುರಿತು ಸ್ಪಷ್ಟವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದ್ದು, ಸಂಪುಟದ ಅನುಮೋದನೆಯೊಂದಿಗೆ ಇದನ್ನು ಅನುಷ್ಟಾನಗೊಳಿಸಲಾಗುವುದು. ಅಕ್ರಮ ನಿರ್ಮಾಣಗಳ ಪಟ್ಟಿಯನ್ನು ಸಿದ್ಧಪಡಿಸಲು ಸಮೀಕ್ಷೆ ನಡೆಸಲು ಸೂಚಿಸಲಾಗಿದ್ದು, ನಿಗದಿತ ಸಮಯದ ಒಳಗಾಗಿ ಸಕ್ರಮೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ವಾಜಪೇಯಿ ಬಡಾವಣೆ ಸಮಸ್ಯೆ
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಾಜಪೇಯಿ ಬಡಾವಣೆ ಸಮಸ್ಯೆಗೆ ಮುಕ್ತಿ ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಈಗಾಗಲೇ ಅಡ್ವಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಪ್ರಕರಣ ಹಿಂತೆಗೆದುಕೊಳ್ಳಲು ಮನವಿ ಮಾಡಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ಮೇಯರ್ ಸುವರ್ಣಾ ಶಂಕರ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮತ್ತಿತರರು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post