ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಯಾವುದೇ ಭಾಗದಲ್ಲಿ ರಾಜಕಾಲುವೆ ಒತ್ತುವರಿಯಾಗಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಎಂದು ಸಚಿವ ಬಿ.ಎ. ಬಸವರಾಜು ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಮಳೆಗಾಲದಲ್ಲಿ ಎಲ್ಲಿಯೂ ನೀರು ಕಟ್ಟಿ ನಿಂತು ಕೃತಕ ನೆರೆ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ರಾಜಕಾಲುವೆ ಒತ್ತುವರಿಯಾಗಿದ್ದರೆ ಅದನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಎಂದು ಸೂಚನೆ ನೀಡಿದರು.
ಸ್ಥಳ ಪರಿಶೀಲನೆ
ಸಚಿವರು ಶಿವಮೊಗ್ಗ ನಗರದ ಬಸ್ ನಿಲ್ದಾಣದಿಂದ ಆಲ್ಕೊಳ ವೃತ್ತದವರೆಗೆ ನಡೆಯುತ್ತಿರುವ ಮಾದರಿ ರಸ್ತೆ ಕಾಮಗಾರಿ, ವಿನೋಬಾ ನಗರದ ರಸ್ತೆ ಬದಿ ಪಾದಚಾರಿ ರಸ್ತೆ ಕಾಮಗಾರಿ, ಪುರಲೆ ಒಳಚರಂಡಿ ಕಾಮಗಾರಿ, ಲಕ್ಷ್ಮೀ ಥಿಯೇಟರ್ ವೃತ್ತ ಅಭಿವೃದ್ಧಿ ಕಾಮಗಾರಿ, ರಾಜೇಂದ್ರ ನಗರದಲ್ಲಿ ನಡೆಯುತ್ತಿರುವ ಉದ್ಯಾನವನ, ಒಳಾಂಗಣ ಕ್ರೀಡಾಂಗಣ ಸಮುಚ್ಛಯ, ಜಿಲ್ಲಾ ಪಂಚಾಯತ್ ಮುಂಭಾಗ ನೀರಿನ ಟ್ಯಾಂಕ್ ನಿರ್ಮಾಣ, ಬೊಮ್ಮನಕಟ್ಟೆ ಕೆರೆ ಅಭಿವೃದ್ಧಿ, ಆದಿಚುಂಚನಗಿರಿ ಬಳಿ ಸಮುಚ್ಛಯ ನಿರ್ಮಾಣ ಕಾಮಗಾರಿಗಳನ್ನು ವೀಕ್ಷಿಸಿದರು.
ಜನರ ಸಹಭಾಗಿತ್ವ ಅತಿ ಅಗತ್ಯ
ಜನರ ಸಹಭಾಗಿತ್ವ ಇದ್ದರೆ ಮಾತ್ರ ಯಾವುದೇ ಕಾಮಗಾರಿ ಯಶಸ್ವಿಯಾಗಲು ಸಾಧ್ಯವಿದೆ. ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಲಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಸಂಘ ರಚಿಸಿ ಅವುಗಳ ಮೇಲುಸ್ತುವಾರಿ ನೋಡಿಕೊಳ್ಳಬೇಕು. ರಾಜೇಂದ್ರ ನಗರದಲ್ಲಿ ನೀರಿನ ಕಾಲುವೆಗೆ ತ್ಯಾಜ್ಯ ವಸ್ತುಗಳನ್ನು ಹಾಕದಂತೆ ಸ್ಥಳೀಯರೇ ಕ್ರಮ ಕೈಗೊಳ್ಳಬೇಕು. ಇಲ್ಲಿರುವ ಮನೆಗಳ ತ್ಯಾಜ್ಯ ನೀರು ನೇರವಾಗಿ ಕಾಲುವೆ ಸೇರುವಂತೆ ಸಂಪರ್ಕ ಕಲ್ಪಿಸಿದ್ದರೆ ಅದನ್ನು ತೆರವುಗೊಳಿಸಿ ನಿವಾಸಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
Get in Touch With Us info@kalpa.news Whatsapp: 9481252093
Discussion about this post