ಕಲ್ಪ ಮೀಡಿಯಾ ಹೌಸ್ | ಸೊರಬ |
ಪುರಾಣ ಪ್ರಸಿದ್ಧ ಚಂದ್ರಗುತ್ತಿ ಕ್ಷೇತ್ರಕ್ಕೆ ಬೆತ್ತಲೆ ಸೇವೆ ಆದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಯನ್ನ ಜೊತೆಗೂಡಿಸಿಕೊಂಡೆ ಬಂದಿದ್ದು, ಸದಾ ಅವ್ಯವಸ್ಥೆಯ ಆಗರವಾಗಿ ಗೋಚರಿಸುತ್ತಿದೆ. ಸಹಸ್ರಾರು ಭಕ್ತಾದಿಗಳನ್ನು ಹೊಂದಿ, ಜಾತ್ರೆಯೇ ಅಲ್ಲದ ಪ್ರತಿ ಮಂಗಳವಾರ, ಪ್ರತಿ ಶುಕ್ರವಾರ ಮತ್ತು ವಿಶೇಷ ದಿನಗಳಲ್ಲಿ ಗಿಜಿಗುಟ್ಟುವ, ಮುಜರಾಯಿ ಇಲಾಖೆಗೆ ಪ್ರತಿ ವರ್ಷ ದೊಡ್ಡ ಪ್ರಮಾಣದ ಆದಾಯ ತರುವ ಈ ಕ್ಷೇತ್ರ ಸದಾ ದುರ್ನಾತ ಬೀರುವ ಅಸ್ವಚ್ಛತೆಯ ಕೊಂಪೆಯಾಗಿದೆ.
ಇದೇ ತಿಂಗಳ 10ನೇ ತಾರೀಖು ಶ್ರೀ ರೇಣುಕಾಂಬ ಜಾತ್ರೆ ಆರಂಭವಾಗಲಿದ್ದು 10ಕ್ಕೆ ಸಣ್ಣ ತೇರು, 11ಕ್ಕೆ ದೊಡ್ಡ ತೇರು ನಡೆಯುತ್ತದೆ. ಜಾತ್ರೆ ಕೇವಲ ಬೆರಳೆಣಿಕೆ ದಿನದಲ್ಲಿ ಜರುಗಲಿದೆಯಾದರೂ ಕ್ಷೇತ್ರದಲ್ಲಿ ಕೊರತೆಯ ಪಟ್ಟಿ ಇಲ್ಲಿನ ಬೆಟ್ಟದಷ್ಟೆ ದೊಡ್ಡದಿದೆ.ಕೊರತೆ
ದೇವಸ್ಥಾನದ ಸಿಬ್ಬಂದಿ ಕೊರತೆ, ಈಗ ಇರುವ ಸ್ವಚ್ಛತಾ ಸಿಬ್ಬಂದಿ ಎಜೆನ್ಸಿ ಮುಖಾಂತರ ನೇಮಕವಾಗಿದ್ದು, ಎಜೆನ್ಸಿಗೆ ಹೆಚ್ಚಿನ ಹಣ ಸಂದಾಯವಾಗುತ್ತಿದ್ದು, 6 ಜನ ಸಿಬ್ಬಂದಿಗೆ ತಲಾ 15 ಸಾವಿರ ಸಂಬಳ ನೀಡಲಾಗುತ್ತಿದ್ದೆ, ಸ್ವಚ್ಚತೆಯ ಕೆಲಸಕ್ಕಿಂತ ಅವರನ್ನು ಬೇರೆಬೇರೆ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ದೇವಸ್ಥಾನದ ರಸ್ತೆಯಲ್ಲಿನ ಅಂಗಡಿ ಮುಂಗಟ್ಟುಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆಯಾಗುತ್ತಿರುವುದರಿಂದ ಕಸದ ರಾಶಿ ತುಂಬಿ ತುಳುಕಾಡುತ್ತಿದೆ. ಕಲ್ಯಾಣ ಮಂಟಪ ಇದೆಯಾದರೂ ಇಲ್ಲಿ ಬರುವ ಭಕ್ತಾದಿಗಳಿಗೆ ಊಟ ಮತ್ತು ವಸತಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿಲ್ಲ.
ಸೇವೆ
ಜಾತ್ರೆಯನ್ನು ಮುಕ್ತವಾಗಿ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಿದ್ದು ಕೋವಿಡ್ ನಿಯಾಮಾವಳಿಗನುಗುಣವಾಗಿ ಜಾತ್ರೆ ನಡೆಸಲು ಸಜ್ಜಾಗಿದೆ. ನೀರು, ತಂಗುವ ವ್ಯವಸ್ಥೆ ಇತ್ಯಾದಿಗೆ ತುರ್ತು ನಿಗಾವಹಿಸಿದ್ದು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗಿದೆ. ಮೆಡಿಕಲ್ ಕ್ಯಾಂಪ್ ಇದ್ದು ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ. ಜಾತ್ರೆ ನಂತರದ ಗ್ರಾಮ ಸ್ವಚ್ಛತೆಗೂ ಕೂಡ ಈ ಬಾರಿ ವ್ಯವಸ್ಥೆ ಮಾಡಲಾಗಿದೆ. ಅಡ್ಡಾದಿಡ್ಡಿ ರಸ್ತೆಯಲ್ಲಿನ ಅಂಗಡಿಗಳಿಗೆ ಕಡಿವಾಣ ಹಾಕಲಾಗುತ್ತದೆ. ಕುಡಿಯುವ ನೀರೂ ಸೇರಿದಂತೆ, ಗ್ರಾಮದ ಸ್ವಚ್ಛತೆಗೆ ಪ್ರಸ್ತುತ ಜಾತ್ರಾ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ, ಪದಾಧಿಕಾರಿಗಳು ಸೇರಿದಂತೆ ಗ್ರಾಮದ ಅನೇಕರು ಪಾಲ್ಗೊಂಡಿದ್ದಾರೆ. ಜಾತ್ರೆ ಉತ್ಸವಕ್ಕೆ ಗ್ರಾಮಸ್ಥರು ಸಹಕರಿಸುತ್ತಿದ್ದಾರೆ.
-ರಂಗಪ್ಪ, ಮುಜಾರಾಯಿ ಇಲಾಖೆ ಇಒ ಸೊರಬ
ಅಸ್ವಚ್ಛತೆ
ಅತಿ ಮುಖ್ಯವಾಗಿ ದೇವಸ್ಥಾನವೂ ಸೇರಿದಂತೆ ಇಡೀ ಕ್ಷೇತ್ರದ ವಾತಾವರಣ ತೀರಾ ಗಲೀಜಿನಿಂದ ಕೂಡಿದೆ. ಅಕ್ಕಪಕ್ಕದ ಖಾಸಗಿ ಜಮೀನಿಗೂ ಇಲ್ಲಿನ ತ್ಯಾಜ್ಯ ಸೇರುತ್ತಿದ್ದು, ಕೃಷಿ ಕಾರ್ಯಕ್ಕೂ ತೊಡಕಾಗುತ್ತಿದೆ. ನೀರಿನ ಮಾಲಿನ್ಯ ಎದುರಾಗಿದೆ. ಚರಂಡಿಗಳು ಇಂತಹ ತ್ಯಾಜ್ಯದಿಂದ ತುಂಬಿದ್ದು ಕೊಳೆತು ನಾರುತ್ತಿದೆ.
ಆಗಬೇಕಾದ್ದು
ಇರುವ ಸ್ವಚ್ಛತಾ ಸಿಬ್ಬಂದಿಯನ್ನು ದೇವಸ್ಥಾನದ ಎಲ್ಲಾ ಕೆಲಸಗಳಿಗೂ ಬಳಸಿಕೊಳ್ಳುತ್ತಿದ್ದು ತುರ್ತು ಒಬ್ಬ ನಿರುಗಂಟಿ, ಎರಡು ಜನ ವಾಚ್ ಮ್ಯಾನ್ ಮತ್ತು ಆನ್ಲೈನ್ ಸೇವೆ ಮಾಹಿತಿ ಕೇಂದ್ರ ಆಗಬೇಕು, ದೇವಸ್ಥಾನಕ್ಕೆ ಸಂಬಂಧ ಪಟ್ಟಹಾಗೆ ಎಕ್ಯೂಟಿವ್ ಆಫೀಸರ್ ಇದ್ದು ಅವರ ಅಧಿಕಾರದಲ್ಲಿ ಅವಶ್ಯಕತೆ ಇದ್ದಾಗ ದಿನಗೂಲಿ ಮೇಲೆ ಕೆಲಸಗಾರರನ್ನು ತೆಗೆದುಕೊಳ್ಳಲು ಅವರಿಗೆ ಅಧಿಕಾರ ಕೊಡಬೇಕು, ಸಿಬ್ಬಂದಿಗೆ ಇಂತದೆ ಕೆಲಸ ಎಂದು ಜವಾಬ್ದಾರಿ ನೀಡಿ ಅವರು ಪ್ರತಿದಿನ ಆ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುವಂತೆ ಸೂಚಿಸಬೇಕು.ಪೂಜಾ ಸಮಯ ಬೆಳಿಗ್ಗೆ 10ರಿಂದ ಸಂಜೆ 6.30ರ ವರೆಗೆ ಪ್ರತಿ ನಿತ್ಯ ಪೂಜಾ ವ್ಯವಸ್ಥೆ ಆಗಬೇಕು, ಈಗ ಮಂಗಳವಾರ ಶುಕ್ರವಾರ ಮತ್ತು ವಿಶೇಷ ದಿನ ಹೊರತು ಪಡಿಸಿ 10ರಿಂದ 2 ಮತ್ತು ಸಂಜೆ 5:30ರಿಂದ 6:30ರ ವರೆಗೆ ಪೂಜೆ ಇರುತ್ತದೆ. ದೇವಸ್ಥಾನದ ಎದುರು ಇರುವ ಯಾಗ ಹಳೆ ಯಾಗಶಾಲೆ ಬೀಳುವ ಹಂತದಲ್ಲಿದೆ. ಬೇರೆ ಯಾಗ ಶಾಲೆ ನಿರ್ಮಾಣವಾಗಬೇಕು. ಒಂದು ಚಿಕ್ಕ ಆಫೀಸ್ ಮತ್ತು ಗೊಡೋನ್ ಅಗತ್ಯವಿದೆ. ಕಲ್ಯಾಣ ಮಂಟಪದ ಆವರಣವನ್ನು ಭಕ್ತಾದಿಗಳಿಗೆ ಉಳಿಯಲು, ಊಟೋಪಚಾರಕ್ಕೆ ಅನುಕೂಲ ಕಲ್ಪಿಸಬೇಕು. ಕ್ಷೇತ್ರ ಸುವ್ಯವಸ್ಥೆಗೆ ಸ್ಥಳೀಯ ದೇಗುಲ ಆಡಳಿತ ಸಮಿತಿಯಾಗಬೇಕು.
ಮುಜರಾಯಿ ಇಂದ ಬರಬೇಕಾದ ಅನುದಾನಗಳ ಕೊರತೆಯಿಂದಾಗಿ ಸಮರ್ಪಕ ಕಾರ್ಯನಿರ್ವಹಿಸಲು ತೊಡಕಾಗಿದೆ, ನಮ್ಮ ಗ್ರಾಪಂ ಮಿತಿಯಲ್ಲಿ ಸುರಳಿತ ಜಾತ್ರೆಯ ಬಗ್ಗೆ ಶ್ರಮ ವಹಿಸಲಾಗುತ್ತಿದೆ. ಗ್ರಾಮದ ಜಾತ್ರೆ ಆಗಿರುವುದರಿಂದ ಗ್ರಾಪಂ ಆಸಕ್ತಿಯಿಂದ ಕಾರ್ಯ ನಿರ್ವಹಿಸುತ್ತಿದ್ದು, ವಾಹನ ಸಂಚಾರದ ಸುಗಮಕ್ಕೆ ನಿರ್ಧಿಷ್ಟ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ನೀರಿನ ವ್ಯವಸ್ಥೆಗೆ ಮುಂದಾಗಿದೆ. ಗ್ರಾಪಂ ಸಹಕಾರದಿಂದ ಇಲ್ಲಿ ನಿರಂತರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಆಗಿದೆ.
-ಈಶ್ವರಪ್ಪ ಪಿಡಿಒ ಗ್ರಾಪಂ ಚಂದ್ರಗುತ್ತಿ
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post