ಕಲ್ಪ ಮೀಡಿಯಾ ಹೌಸ್ | ಸೊರಬ | ವರದಿ: ಮಧುರಾಮ್ |
ಮಳೆ ಕೊರತೆಯಿಂದ (Rainfall deficit) ಬೆಳೆಗಳು ಒಣಗುತ್ತಿರುವ ಸಂದರ್ಭದಲ್ಲೇ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿರುವುದು ಸೊರಬ (Soraba) ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಡಾ. ಜ್ಞಾನೇಶ್ ಅಭಿಮಾನಿ ಬಳಗ ಆಗ್ರಹಿಸಿದೆ.
ಬಳಗದ ಅಧ್ಯಕ್ಷ ವಿಶ್ವನಾಥ್ ತುಮರಿಕೊಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಡಾ. ಜ್ಞಾನೇಶ್, ತಾಲೂಕಿನಲ್ಲಿ ಯಾವುದೇ ಪ್ರಮುಖ ನೀರಾವರಿ ವ್ಯವಸ್ಥೆ ಇಲ್ಲ. ಹಳ್ಳ-ಹೊಳೆ ಹಾಗೂ ಅಂತರ್ಜಲವನ್ನೇ ನಂಬಿ ರೈತರು ಕೃಷಿ ಮಾಡುತ್ತಿದ್ದಾರೆ. ಮಳೆ ಕೈಕೊಟ್ಟಿರುವುದರಿಂದ ಈಗಾಗಲೇ ಗದ್ದೆಗಳು ಬಿರುಕು ಬಿಡುತ್ತಿದ್ದು, ಬೆಳೆಗಳು ಕುಗ್ಗುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯವಾಗಿರುವುದು ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದರು.
ಹಿಂದೆ ರೈತರಿಗೆ ಸುಮಾರು ಎಂಟು ಗಂಟೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಇದೀಗ ಎರಡು ಗಂಟೆಯಷ್ಟೇ ವಿದ್ಯುತ್ ನೀಡಲಾಗುತ್ತಿದೆ. ಮಧ್ಯರಾತ್ರಿ ವಿದ್ಯುತ್ ಪೂರೈಕೆ ಮಾಡುವುದರಿಂದ ರೈತರಿಗೆ ನೀರು ಹಾಯಿಸುವುದು ಸೇರಿದಂತೆ ಕೃಷಿ ಚಟುವಟಿಕೆಗಳನ್ನು ನಿರ್ವಹಿಸುವುದು ಕಷ್ಟವಾಗಿದೆ. ಮಳೆ ಕೊರತೆಯಿಂದ ಎದುರಾಗಬಹುದಾದ ಬರ ಪರಿಸ್ಥಿತಿಯ ಮುನ್ಸೂಚನೆ ಇದ್ದರೂ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿತ್ತು ಎಂದು ಹೇಳಿದರು.
Also Read>> ಗಣೇಶೋತ್ಸವ ರಾಷ್ಟ್ರೀಯತೆ, ಸಾಮಾಜಿಕ ಏಕತೆಗೆ ಶಕ್ತಿ ನೀಡಿದ ಪರಂಪರೆ: ಸುರೇಶ್ ಋಗ್ವೇದಿ
ಸದ್ಯದಲ್ಲೇ ಸಮಸ್ಯೆ ಪರಿಹಾರ: ಮೆಸ್ಕಾಂ
ಎರಡು-ಮೂರು ದಿನಗಳ ಹಿಂದೆ ಶರಾವತಿ ವಿದ್ಯುತ್ಗಾರದಲ್ಲಿ ಸಮಸ್ಯೆ ಉಂಟಾಗಿತ್ತು. ಸದ್ಯ ಆ ಸಮಸ್ಯೆ ಬಗೆಹರಿದಿದೆ. ರಾಜ್ಯದಲ್ಲಿ ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದನೆಯಲ್ಲೂ ವ್ಯತ್ಯಯ ಉಂಟಾಗಿದೆ. ರಾಯಚೂರು ಹಾಗೂ ಬಳ್ಳಾರಿ ಭಾಗದಲ್ಲಿ ವಿದ್ಯುತ್ ವಾಹಕಗಳಲ್ಲಿ ದೋಷ ಉಂಟಾಗಿದ್ದು, ಅವುಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ದುರಸ್ತಿ ಪೂರ್ಣಗೊಳ್ಳುವವರೆಗೆ ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಯವಾಗಬಹುದು. ಸಮಸ್ಯೆ ಪರಿಹರಿಸುವ ಕುರಿತು ಮೇಲ್ಮಟ್ಟದ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿದ್ದಾರೆ. ಸದ್ಯದಲ್ಲೇ ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ಬರಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
-ಸತ್ಯಪ್ರಕಾಶ್, ಮೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ತಾಲೂಕಿನ ಜನರು ಶಾಸಕ ಹಾಗೂ ಸಚಿವ ಮಧು ಬಂಗಾರಪ್ಪ ಅವರು ಎರಡನೇ ಬಾರಿ ಸಚಿವರಾಗಿರುವುದರಿಂದ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ರೈತರ ಮೂಲಭೂತ ಸಮಸ್ಯೆಗಳಿಗೆ ಆದ್ಯತೆ ದೊರೆಯುತ್ತಿಲ್ಲ. ರಸ್ತೆ, ಚರಂಡಿಯಂತಹ ಸಮಸ್ಯೆಗಳನ್ನು ಜನರು ಸಹಿಸಿಕೊಂಡು ಹೋಗಬಹುದು. ಆದರೆ ಕೃಷಿ, ಅನ್ನ ಮತ್ತು ಬದುಕಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದರು.
ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುವ ಭರವಸೆ ಇದ್ದರೂ, ರೈತರಿಗೆ ಅಗತ್ಯ ಸಂದರ್ಭದಲ್ಲಿ ಸಮರ್ಪಕ ವಿದ್ಯುತ್ ದೊರೆಯದಿದ್ದರೆ ಯೋಜನೆಯ ಪ್ರಯೋಜನವೇನು ಎಂಬ ಪ್ರಶ್ನೆ ಮೂಡುತ್ತದೆ. ವಿದ್ಯುತ್ ಸಮಸ್ಯೆಯನ್ನು ತಕ್ಷಣ ಪರಿಹರಿಸದಿದ್ದರೆ ರೈತರನ್ನು ಸಂಘಟಿಸಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
Soraba : ಮಳೆ ಆಧಾರಿತ ಕೃಷಿಯನ್ನೇ ಅವಲಂಬನೆ
ತಾಲೂಕಿನಲ್ಲಿ ದೀರ್ಘಕಾಲದಿಂದ ನೀರಾವರಿ ಯೋಜನೆ ಇಲ್ಲದಿರುವುದರಿಂದ ಪ್ರತಿವರ್ಷ ಮಳೆ ಆಧಾರಿತ ಕೃಷಿಯನ್ನೇ ಅವಲಂಬಿಸಬೇಕಾಗಿದೆ. ಮಳೆ ಕೊರತೆ ಮತ್ತು ವಿದ್ಯುತ್ ವ್ಯತ್ಯಯ ಎರಡೂ ಒಟ್ಟಾಗಿ ರೈತರ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ಅಭಿಮಾನಿ ಬಳಗದ ಸ್ವರೂಪ್, ಪುನೀತ್, ರಮೇಶ್ ಹಸ್ವಿ, ನಿತಿನ್, ಕೈಫ್ ಹಾಗೂ ಮುಖಂಡರಾದ ಪಾಣಿ ರಾಜಪ್ಪ, ರಾಜು ಕೆಂಚಿಕೊಪ್ಪ, ಗುರು ಗೌಡ ಹೆಸರಿ, ವಿನಯ ಶೇವಿರ್, ರಾಜು ಮಾವಿನಬಳ್ಳಿಕೊಪ್ಪ, ಯಶವಂತ್ ನೆಲ್ಲಿಕೊಪ್ಪ, ಮಣ್ಣತ್ತಿ ಪರಮೇಶ್, ಯಶೋಧರ, ಶಿವಾನಂದ, ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









