ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಗಣೇಶೋತ್ಸವದ (Ganeshotsava) ಮೂಲಕ ದೇಶ-ವಿದೇಶಗಳಲ್ಲಿ ರಾಷ್ಟ್ರೀಯತೆಯ ಭಾವನೆ ಮೂಡಿಸಿ ಬೆಳೆಸಿದ ಬಾಲ ಗಂಗಾಧರ ತಿಲಕ್ ಅವರ ಚಿಂತನೆ ಮತ್ತು ಪರಂಪರೆ ಇಂದಿಗೂ ಅಮರವಾಗಿದೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್. ಋಗ್ವೇದಿ ಚಾಮರಾಜನಗರದಲ್ಲಿ (Chamarajanagara) ಹೇಳಿದರು.
ನಗರದಲ್ಲಿ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವ ಹಾಗೂ ಬಾಲ ಗಂಗಾಧರ ತಿಲಕ್ ಅವರ ಚಿಂತನೆ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ಮನೆಯಲ್ಲೂ ಗಣೇಶೋತ್ಸವವನ್ನು ಆಚರಿಸಲಾಗುತ್ತಿದ್ದು, ಗಣೇಶ ಭಾರತೀಯರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾನೆ. ಗಣೇಶೋತ್ಸವದ ಮೂಲಕ ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ತಾತ್ವಿಕ ಹಾಗೂ ವೈಜ್ಞಾನಿಕ ವಿಚಾರಗಳನ್ನು ಅರಿಯಲು ಸಾಧ್ಯವಿದೆ ಎಂದು ಅವರು ಹೇಳಿದರು.
ಗಣೇಶೋತ್ಸವವು ದೇಶದ ಜನರನ್ನು ಒಗ್ಗೂಡಿಸುವುದರ ಜೊತೆಗೆ ಪರಸ್ಪರ ಪ್ರೀತಿ, ಸಾಮಾಜಿಕ ಏಕತೆ ಹಾಗೂ ಭಾವೈಕ್ಯತೆಯನ್ನು ಬೆಳೆಸುತ್ತದೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ಜನಪದ ಕ್ಷೇತ್ರಗಳಿಗೂ ಇದು ಹೊಸ ಶಕ್ತಿ ನೀಡುತ್ತದೆ. ವ್ಯಾಪಾರ, ವಾಣಿಜ್ಯ, ಕೈಗಾರಿಕೆ ಹಾಗೂ ಗುಡಿ ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೂ ಗಣೇಶೋತ್ಸವದ ಪ್ರಭಾವವನ್ನು ಕಾಣಬಹುದು ಎಂದರು.
Also read>> ಹುಲಿ ದಾಳಿ: ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿದ್ದ ರೈತ ಸಾವು
ಗಣೇಶೋತ್ಸವ : ಆಧ್ಯಾತ್ಮಿಕ ಶಕ್ತಿಯ ಜೊತೆ ಸಾಮಾಜಿಕ ಏಕತೆಯ ಶಕ್ತಿ
ಗಣೇಶೋತ್ಸವವನ್ನು ಆಧ್ಯಾತ್ಮಿಕ ಶಕ್ತಿಯ ಜೊತೆಗೆ ಸಾಮಾಜಿಕ ಏಕತೆಯ ಶಕ್ತಿಯಾಗಿ ರೂಪಿಸಿದ ಕೀರ್ತಿ ಬಾಲ ಗಂಗಾಧರ ತಿಲಕ್ ಅವರಿಗೆ ಸಲ್ಲುತ್ತದೆ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಜನರನ್ನು ಸಂಘಟಿಸಿ, ಒಗ್ಗಟ್ಟಿನ ಭಾವನೆ ಮೂಡಿಸುವ ಉದ್ದೇಶದಿಂದ ಆರಂಭವಾದ ಗಣೇಶೋತ್ಸವ ಇಂದು ಗಲ್ಲಿ-ಗಲ್ಲಿಗಳಲ್ಲೂ ಯುವಶಕ್ತಿಯನ್ನು ಒಗ್ಗೂಡಿಸುತ್ತಿದೆ ಎಂದು ಸುರೇಶ್ ಎನ್. ಋಗ್ವೇದಿ ತಿಳಿಸಿದರು.
ಭಾರತಕ್ಕೆ ಮಾತ್ರ ಸೀಮಿತವಾಗದೆ ವಿಶ್ವದ ವಿವಿಧ ದೇಶಗಳಲ್ಲೂ ಗಣೇಶೋತ್ಸವ ಆಚರಿಸಲಾಗುತ್ತಿರುವುದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಜಾಗತಿಕ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ತಿಲಕ್ ಅವರ ದೂರದೃಷ್ಟಿಯ ಚಿಂತನೆ ಪ್ರಮುಖ ಕಾರಣವಾಗಿದೆ ಎಂದರು.
ಗಣೇಶ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯರಾದ ಸರೋಜಮ್ಮ ಮಾತನಾಡಿ, ಗಣೇಶೋತ್ಸವವು ಪ್ರತಿ ಮನೆಯಲ್ಲೂ ಸಂಭ್ರಮ ಮೂಡಿಸುವ ಹಬ್ಬವಾಗಿದೆ. ಹಿರಿಯರು ಹಾಗೂ ಕಿರಿಯರು ಒಟ್ಟಾಗಿ ಸೇರಿ ಕಲೆ, ಸಾಹಿತ್ಯ ಮತ್ತು ಸಂಗೀತದ ವಾತಾವರಣ ನಿರ್ಮಿಸಲು ಗಣೇಶೋತ್ಸವ ಸಹಕಾರಿಯಾಗಿದೆ ಎಂದರು.
ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷೆ ಶರಣ್ಯ ಎಸ್. ಋಗ್ವೇದಿ ಮಾತನಾಡಿ, ಗಣೇಶೋತ್ಸವ ಪ್ರತಿಯೊಬ್ಬರಲ್ಲೂ ಸಂತೋಷ ಮೂಡಿಸುತ್ತದೆ. ಗಣೇಶೋತ್ಸವದ ಆಯೋಜನೆ ಹಾಗೂ ವಿಸರ್ಜನಾ ಕಾರ್ಯಕ್ರಮಗಳು ಹೊಸತನಕ್ಕೆ ಸಾಕ್ಷಿಯಾಗಿದ್ದು, ಸಮಾಜದ ವಿವಿಧ ಆಯಾಮಗಳನ್ನು ಅರಿಯಲು ಸಹಕಾರಿಯಾಗಿವೆ ಎಂದರು.
ಬಾಲ ಗಂಗಾಧರ ತಿಲಕ್ ಅವರು ಸ್ವರಾಜ್ಯ ಪರಿಕಲ್ಪನೆಯ ಹರಿಕಾರರಾಗಿದ್ದು, ಸ್ವದೇಶಿ ವಸ್ತುಗಳು ಹಾಗೂ ಭಾರತೀಯ ಸನಾತನ ಧರ್ಮದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ತಿಳಿಯಲು ಗಣೇಶೋತ್ಸವಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ, ಶ್ರಾವ್ಯ, ಸುಹಾಸ್, ರವಿ, ಸುಂದರ್, ಸಾನಿಕ, ಮಾಲಾ, ಮುರುಗೇಶ್, ವಾಣಿಶ್ರೀ ಹಾಗೂ ಸರಸ್ವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






