ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿದ್ದ ರೈತನ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿರುವ ಘಟನೆ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ನಡೆದಿದೆ.
ಹುಲಿ ದಾಳಿಯಲ್ಲಿ ಬಸವಣ್ಣ (60) ಮೃತಪಟ್ಟಿದ್ದು, ಬಸವಣ್ಣ ಅವರ ದೇಹದ ಕಾಲಿನ ಭಾಗವನ್ನು ಹುಲಿ ತಿಂದು ಹಾಕಿದೆ ಎನ್ನಲಾಗಿದೆ. ಘಟನೆಯಿಂದ ಬಡಗಲಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ.
ಹುಲ್ಲು ಕೊಯ್ಯಲು ಜಮೀನಿಗೆ ತೆರಳಿದ್ದ ಬಸವಣ್ಣ ಕತ್ತಲಾದರೂ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರನ್ನು ಹುಡುಕಿಕೊಂಡು ಜಮೀನಿಗೆ ತೆರಳಿದ್ದರು. ಈ ವೇಳೆ ಬಸವಣ್ಣ ಹುಲಿ ದಾಳಿಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ.
ಘಟನೆ ತಿಳಿದು ಕುಟುಂಬಸ್ಥರು ಜಮೀನಿನಲ್ಲೇ ಶವದ ಬಳಿ ಕುಳಿತು ಅರಣ್ಯಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಬೇಕು ಎಂದು ಆಗ್ರಹಿಸಿದ್ದಾರೆ. ಬಿಳಿಗಿರಿ ಹುಲಿ ಸಂರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸದಿರುವುದಕ್ಕೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಲಿ ದಾಳಿಯಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟಾಗಿದ್ದು, ಅರಣ್ಯ ಇಲಾಖೆ ಕೂಡಲೇ ಸ್ಥಳಕ್ಕೆ ಆಗಮಿಸಿ ಹುಲಿಯನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








