ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ 19ನೇ ವರ್ಷದ ಗಣೇಶೋತ್ಸವವನ್ನು #Ganeshothsava ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಕೃಷ್ಣಮೂರ್ತಿ ಭಾವೆ ತಿಳಿಸಿದರು.
ಶನಿವಾರ ಪಟ್ಟಣದ ಚಿಕ್ಕಪೇಟೆಯಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗಣೇಶೋತ್ಸವ ನಿಮಿತ್ತ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಚತುರ್ಥಿ ದಿನವಾದ ಸೆ.7ರಂದು ಬೆಳಗ್ಗೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನೆರವೇರಲಿದೆ. ಸೆ.9ರಂದು ಸಂಜೆ 7ಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಲಾಗುವುದು. ಸಾರ್ವಜನಿಕರು, ರೈತರು, ಪುರ ನಾಗರೀಕರು ಸಹಕರಿಸಬೇಕು ಎಂದು ವಿನಂತಿಸಿದರು.
ಸಮಿತಿಯ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಮಾತನಾಡಿ, ಸೆ. 9ರಂದು ಸಂಜೆ 7ಕ್ಕೆ ಪ್ರತಿ ವರ್ಷದಂತೆ ಗೋಪಾಲಕರ ಸನ್ಮಾನ ನಡೆಯಲಿದೆ. ಈ ಬಾರಿ ಗೆಂಡ್ಲಾ ಹೊಸೂರು ಗ್ರಾಮದ ಗೋಪಾಲಕ ಕುಂಬ್ರಿ ಕೆರಿಯಪ್ಪ ಅವರನ್ನು ಸನ್ಮಾನಿಸಲಾಗುವುದು. ಜೊತೆಗೆ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದ್ದು, ಪ್ರಯುಕ್ತ ಕರಸೇವಕರಾದ ಹಾಗೂ ಸಾರ್ವಜನಿಕ ಸೇವೆಯಲ್ಲಿ ಸುಮಾರು 40 ವರ್ಷಗಳಿಂದ ತೊಡಗಿಸಿಕೊಂಡಿರುವ ಕೆ. ಪ್ರಭಾಕರ ರಾಯ್ಕರ್, ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಸುಮಾರು 30 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಸೇವಕ ಡಿ. ಪರಸಪ್ಪ, ಪುರಸಭೆಯಲ್ಲಿ ಸುಮಾರು 20 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಆರ್. ಷಫಿವುಲ್ಲಾ ಷರೀಫ್ ಅವರನ್ನು ಸನ್ಮಾನಿಸಲಾಗುವುದು ಎಂದರು.
Also read: ಮಲೆನಾಡು ಸುಸ್ಥಿರ ಅಭಿವೃದ್ಧಿಗಾಗಿ ಸಮಗ್ರ ನೀತಿ | ಸೆ.2ರಂದು ರಾಜ್ಯಮಟ್ಟದ ಕಾರ್ಯಾಗಾರ
ಸಭಾ ಕಾರ್ಯಕ್ರಮದ ನಂತರ ರಾತ್ರಿ 9ಕ್ಕೆ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ 21 ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ, ಪಟ್ಟಣದ ಚಿಕ್ಕಪೇಟೆ ಹಾಗೂ ಮುಖ್ಯ ರಸ್ತೆ ಮಾರ್ಗವಾಗಿ ಭಜನಾ ತಂಡಗಳೊಂದಿಗೆ ಮೆರವಣಿಗೆ ಸಲ್ಲಿಸುವ ಮೂಲಕ ಶ್ರೀ ಗಣೇಶ ಮೂರ್ತಿಯನ್ನು ಪಟ್ಟಣದ ಪವಿತ್ರ ನದಿ ದಂಡಾವತಿಯಲ್ಲಿ ವಿಸರ್ಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ ಜೇಡಗೇರಿ, ಉಪಾಧ್ಯಕ್ಷ ದತ್ತಾತ್ರೇಯ, ಖಜಾಂಚಿ ರಾಜೇಂದ್ರ ಜೈನ್, ಸಂಘಟನಾ ಕಾರ್ಯದರ್ಶಿ ಯು.ಎಸ್. ಶರತ್ ಸ್ವಾಮಿ ಸೇರಿದಂತೆ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post