ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಜಾಗವನ್ನು “ಅಶುದ್ಧʼವಾಗಿದೆ ಎಂದು ಶುದ್ಧಿಕರಣ ಮಾಡಿರುವುದನ್ನು ವಿರೋಧಿಸಿ ಇಂದು ಶಿವಮೊಗ್ಗ ಗ್ರಾಮಾಂತರ ಯುವ ಕಾಂಗ್ರೆಸ್ ಘಟಕ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿತು.
ಬಲಪಂಥೀಯ ಕೋಮುವಾದಿ ಶಕ್ತಿಗಳು, ಗಂಗಾಜಲದ ಮೂಲಕ ಅದನ್ನು ಶುದ್ಧಿಕರಣ ಮಾಡಿದ ಘಟನೆಯು ದಲಿತ ಸಮುದಾಯದ ಧೀಮಂತ ನಾಯಕ ಖರ್ಗೆ ಅವರಿಗೆ ಹಾಗೂ ಸಂವಿಧಾನಿಕ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದ್ದು, ಇದನ್ನು ಗ್ರಾಮಾಂತರ ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳ ನಂತರವೂ ಜಾತೀಯತೆ ಹಾಗೂ ಸಾಮಾಜಿಕ ತಾರತಮ್ಯವನ್ನು ಘೋಷಣೆ ಮಾಡುತ್ತಾ ಬರುತ್ತಿರುವ ಮನುವಾದಿ ಸಿದ್ಧಾಂತದ ಸಂಘ ಪರಿವಾರದ ಕೋಮುವಾದಿ ಶಕ್ತಿಗಳು, ಈ ದೇಶದ ಸಂವಿಧಾನವನ್ನು ಎಂದಿಗೂ ಒಪ್ಪಿಕೊಂಡಿಲ್ಲ, ಇಲ್ಲಿನ ಕಾನೂನಿಗೂ ಅವರಿಗೆ ಭಯವಿಲ್ಲ ಎನ್ನುವುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಅಷ್ಟು ಮಾತ್ರವಲ್ಲ, ಅಸ್ಪೃಶ್ಯತೆ ಆಚರಣೆ ಮತ್ತು ಜಾತಿ ತಾರತಮ್ಯದ ಕೆಟ್ಟ ಮನಸ್ಥಿತಿಯನ್ನು ತೋರಿಸಿದೆ ಎಂದರು.
Also read>> ನಕಲಿ ಔಷಧಿ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ಜಿ.ಎಸ್. ನಾರಾಯಣ ರಾವ್ ಆಗ್ರಹ
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರು, ರಾಜ್ಯ ಸಭೆಯ ವಿರೋಧ ಪಕ್ಷ ನಾಯಕರು ಮಾತ್ರವಲ್ಲ, ಈ ದೇಶದ ಹಿರಿಯ ಮುತ್ಸದ್ದಿ ರಾಜಕಾರಣಿ, ದಲಿತ ಸಮುದಾಯದ ಧೀಮಂತ ನಾಯಕ. ಅಂತಹ ನಾಯಕ ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿ, ಬಂದ ಎರಡು ದಿನಗಳ ಬಳಿಕ ಆ ಜಾಗ ಅಶುದ್ಧವಾಗಿದೆ ಎಂದು ಗಂಗಾಜಲದ ಮೂಲಕ ಶುದ್ಧೀಕರಣ ಮಾಡುವ ಕೋಮುವಾದಿಗಳು, ಈ ದೇಶದ ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಭಾರತ ದೇಶ ಸರ್ವರೀತಿಯಲ್ಲೂ ವಿಶ್ವ ಗುರುವಾಗಿದೆ ಎಂದು ಭಾಷಣ ಬಿಗಿಯುವ ಪ್ರಧಾನಿ ಮೋದಿ ಅವರು, ದೇಶದ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎನ್ನುವ ಗೃಹ ಸಚಿವ ಅಮಿತಾ ಷಾ ಅವರು, ದೇಶದ ಸಂವಿಧಾನ ಮತ್ತು ದಲಿತ ಸಮುದಾಯಕ್ಕೆ ಆದ ಈ ಅವಮಾನದ ಘಟನೆಗೆ ಉತ್ತರ ನೀಡಬೇಕು ಎಂದು ಗ್ರಾಮಾಂತರ ಯುವ ಕಾಂಗ್ರೆಸ್ ಘಟಕ ಒತ್ತಾಯಿಸುತ್ತದೆ.
ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ವೇದಿಕೆಯ ‘ಶುದ್ಧೀಕರಣ’ ಹೆಸರಿನಲ್ಲಿ ನಡೆದಿರುವ ಕೃತ್ಯವು ಇಡೀ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಘಟನೆಗೆ ಕಾರಣರಾದವರನ್ನು ತಕ್ಷಣ ಗುರುತಿಸಿ, ಅನ್ವಯಿಸುವ ಕಾನೂನುಗಳಡಿ ಪ್ರಕರಣ ದಾಖಲಿಸಬೇಕು.ಸಂವಿಧಾನ ವಿರೋಧಿ ಹಾಗೂ ಜಾತೀಯ ಮನೋಭಾವದ ಇಂತಹ ಕೃತ್ಯಗಳನ್ನು ಯಾವುದೇ ಸರ್ಕಾರ ಸಹಿಸಬಾರದು ಎಂದು ಪ್ರತಿಭಟನೆಯ ಮೂಲಕ ಗ್ರಾಮಾಂತರ ಯುವ ಕಾಂಗ್ರೆಸ್ ಆಗ್ರಹಿಸುತ್ತದೆ.
ಈ ಸಂದರ್ಭದಲ್ಲಿ ಮುಖಂಡರಾದ ಮಧುಸೂದನ್, ಗಿರೀಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷಿತ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್, ಬ್ಲಾಕ್ ಅಧ್ಯಕ್ಷರಾದ ಶಶಿಕುಮಾರ್, ಪ್ರವೀಣ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್, ಮಲಗಪ್ಪ ಶಿವು, ಆಕಾಶ್, ಬಾಬು,ತೌಫಿಕ್, ಸಚಿನ್, ಸಾಯಿ ಕುಮಾರ್, ನಾಗೇಂದ್ರ ಆಟೋಕಾ, ಕುಮಾರ್ ಹಾಗೂ ಸಾಕಷ್ಟು ಯುವಕರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


