ಬೆಂಗಳೂರು: ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ವಸತಿಸಹಿತ ಪಿಯುಸಿ ಹಾಗೂ ಪ್ರತಿಷ್ಠಿತ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ರಾಷ್ಟ್ರೋತ್ಥಾನ ಪರಿಷತ್ ನ ಯೋಜನೆಯಾದ ‘ತಪಸ್’(ಹುಡುಗರಿಗೆ) ಹಾಗೂ ‘ಸಾಧನಾ’ (ಹುಡುಗಿಯರಿಗೆ) ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ರಾಷ್ಟ್ರ ಸೇವೆಗಾಗಿ ಮುಡಿಪಾಗಿರುವ ರಾಷ್ಟ್ರೋತ್ಥಾನ ಪ್ರತಿಷ್ಠಾನದ ವತಿಯಿಂದ ಇಂತಹ ಉಚಿತ ಯೋಜನೆಯ ಸದುಯೋಗ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಅರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಕುಟುಂಬದ ಪ್ರತಿಭಾವಂತ ಮಕ್ಕಳಿಗೆ ಪಿಯುಸಿ ಶಿಕ್ಷಣದ ಜೊತೆಗೆ ಉನ್ನತ ಶಿಕ್ಷಣಕ್ಕೆ ಅರ್ಹ ತರಬೇತಿ ನೀಡುವ ಸಲುವಾಗಿ ರಾಷ್ಟ್ರೋತ್ಥಾನ ಪರಿಷತ್ ತಪಸ್ ಹಾಗೂ ಸಾಧನಾ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತದೆ.
ಬಾಲಕರಿಗಾಗಿ ಇರುವ ತಪಸ್ ಯೋಜನೆಯ ಮೂಲಕ ಪಿಯುಸಿ ಹಾಗೂ ಪ್ರತಿಷ್ಠಿತ ಐಐಟಿ-ಜೆಇಇ ಮುಂತಾದ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಬಾಲಕಿಯರಿಗಾಗಿ ಸಾಧನಾ ಯೋಜನೆಯ ಮೂಲಕ ಪಿಯುಸಿ ಹಾಗೂ NEET, CET, KVPY ಮುಂತಾದ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಅಗತ್ಯ ತರಬೇತಿ ನೀಡಲಾಗುತ್ತದೆ.
ಹೀಗಿದೆ ನಿಬಂಧನೆಗಳು
ಪ್ರಸ್ತುತ 10ನೆಯ ತರಗತಿ ಓದುತ್ತಿರುವ ಹಾಗೂ 9ನೆಯ ತರಗತಿಯಲ್ಲಿ ಶೇ.80ಕ್ಕಿಂತಲೂ ಅಧಿಕ ಅಂಕಗಳನ್ನು ಪಡೆದ ಆರ್ಥಿಕವಾಗಿ ಹಿಂದುಳಿದ (ಪೋಷಕರ ವಾರ್ಷಿಕ ವರಮಾನ 1,50,000 ಮೀರಿರಬಾರದು) ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು. ಬಾಲಕರು ತಪಸ್‌ನ ವೆಬ್‌ಸೈಟ್ (www.tapasedu.org) ಹಾಗೂ ಬಾಲಕಿಯರು ಸಾಧನಾದ ವೆಬ್‌ಸೈಟ್ (www.rpsaadhana.org)ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಮುಖ್ಯೋಪಾಧ್ಯಾಯರ ಸಹಿಯೊಂದಿಗೆ ಕೆಳಕಂಡ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 10.
ಎಲ್ಲಿ ಪರೀಕ್ಷಾ ಕೇಂದ್ರಗಳು?
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಡಿಸೆಂಬರ್ 25ರಂದು ಆಯಾ ಜಿಲ್ಲೆಗಳ ಜಿಲ್ಲಾಕೇಂದ್ರದಲ್ಲಿ ಅರ್ಹತಾ ಪರೀಕ್ಷೆ ನಡೆಯಲಿದೆ. ಈ ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಡಿಸೆಂಬರ್ ಮೊದಲ ವಾರದಲ್ಲಿ ಆಯಾ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗುವುದು. ಅರ್ಹತಾ ಪರೀಕ್ಷೆಗೆ ಅಗತ್ಯ ಮಾದರಿ ಪ್ರಶ್ನೆ ಪತ್ರಿಕೆಗಳು ಆಯಾ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಸಂಯೋಜಕರು
ತಪಸ್/ಸಾಧನಾ ಪ್ರಕಲ್ಪ
ರಾಷ್ಟ್ರೋತ್ಥಾನ ಪರಿಷತ್
ಕೇಶವಶಿಲ್ಪ, ಕೆಂಪೇಗೌಡ ನಗರ
ಬೆಂಗಳೂರು – 560 019
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ರುಕ್ಮಿಣಿ (ಯೋಜನೆಯ ಸಂಯೋಜಕರು): 94812 01144
Discussion about this post