ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಕೌಸಲ್ಯಾ ರಾಮ |
ಸಾಂಸ್ಕೃತಿಕ ರಾಜಧಾನಿ ಮೈಸೂರಿನ ನಾದ ವಿದ್ಯಾಲಯ ಅಕಾಡೆಮಿ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆಯ ವಿದುಷಿ ಮಿತ್ರಾ ನವೀನ್ ಅವರ ಶಿಷ್ಯೆ ಸುನಿತಾ ರತೀಶ್ ಭರತನಾಟ್ಯ #Bharatanatya ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ.
ಮೈಸೂರಿನ ಜಗನ್ಮೋಹನ ಅರಮನೆ #JaganmanaPalace ಸಭಾಂಗಣದಲ್ಲಿ ಜ. 14ರ ಸಂಜೆ 5ಕ್ಕೆ ಆಯೋಜನೆಗೊಂಡಿರುವ ರಂಗಪ್ರವೇಶ ಕಾರ್ಯಕ್ರಮಕ್ಕೆ ಮೈಸೂರು #Mysore ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಶಾಸಕ ಜಿ.ಟಿ. ದೇವೇಗೌಡ, ಶಾಸಕ ಹರೀಶ ಗೌಡ, ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಡಾ. ಎಂ.ಕೆ. ಪೋತರಾಜ್, ಮೈಸೂರು ಮೆಡಿಕಲ್ ಕಾಲೇಜು ನಿರ್ದೇಶಕಿ ಡಾ. ಆರ್.ಕೆ. ದಾಕ್ಷಾಯಿಣಿ, ನೂಪುರ ಟ್ರಸ್ಟ್ ನಿರ್ದೇಶಕ ಮತ್ತು ನಾಟ್ಯಾಚಾರ್ಯ ಪ್ರ. ಕೆ. ರಾಮಮೂರ್ತಿ ರಾವ್ ಮತ್ತು ಉದ್ಯಮಿ ರತೀಶ್ ಸಾಕ್ಷಿಯಾಗಲಿದ್ದಾರೆ.
ಹಿಮ್ಮೇಳ: ಕಲಾವಿದೆ ಸುನಿತಾ ರತೀಶ್ ಭರತನಾಟ್ಯ ರಂಗಪ್ರವೇಶವು #Rangapravesha ಗುರು ಮಿತ್ರಾ ನವೀನ್ ಅವರ ಪರಿಕಲ್ಪನೆ, ನಿರ್ದೇಶನದಲ್ಲಿ ಮೂಡಿಬರಲಿರುವುದು ವಿಶೇಷ. ವಿದ್ವನ್ಮಣಿಗಳ ತಂಡವೇ ಹಿಮ್ಮೇಳದಲ್ಲಿ ವಿಶೇಷ ಸಹಕಾರ ನೀಡಲಿದೆ. ಗುರು ಮಿತ್ರಾ ನವೀನ್ ನಟುವಾಂಗ, ವಿದ್ವಾನ್ ಎಂ. ಎಸ್. ನವೀನ್ ಅಂದಗಾರ್ ಗಾಯನ, ವಿದ್ವಾನ್ ಜಿ.ಎಸ್. ನಾಗರಾಜ್ ಮೃದಂಗ ಮತ್ತು ವಿದ್ವಾನ್ ವಿವೇಕ ಕೃಷ್ಣ ಕೊಳಲು ಪಕ್ಕವಾದ್ಯಗಳು ನೃತ್ಯ ಪ್ರಸ್ತುತಿಯ ಅಂದವನ್ನು ನೂರ್ಮಡಿಸಲಿವೆ.
ವೃತ್ತಿಯೊಂದಿಗೆ ಪ್ರವೃತ್ತಿ
ಸುನಿತಾ ರತೀಶ್ ಕೇವಲ ಒಬ್ಬ ಕಲಾವಿದೆ ಮಾತ್ರವಲ್ಲ. ಬಹುಶ್ರುತ ಪ್ರತಿಭಾನ್ವಿತೆ ಎಂದರೆ ಅತಿಶಯೋಕ್ತಿ ಆಗಲಾರದು. ಸಾಮಾನ್ಯವಾಗಿ ಒಬ್ಬರಿಗೆ ಒಂದು ಅಥವಾ ಎರಡು ಕಲೆಗಾರಿಕೆಗಳು ಒಲಿಯುವುದು ಎಂದರೆ ಅದು ಪುಣ್ಯವೇ ಸರಿ. ಆದರೆ ಕಲಾ ಸರಸ್ವತಿ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಂಡು ಅವರಿಗೆ ಬಹುಮುಖೀ ಪ್ರತಿಭೆಗಳನ್ನು ದಯಪಾಲಿಸಿರುತ್ತಾಳೆ. ಅಂಥವರ ಸಾಲಿನಲ್ಲಿ ನಿಲ್ಲುವ ಯೋಗ ಮತ್ತು ಯೋಗ್ಯತೆ ಎರಡಕ್ಕೂ ಭಾಜನರಾಗಿರುವುದು ಸುನೀತಾ ವಿಶೇಷತೆ.
ಹೌದು. ಸುನಿತಾ ಸದ್ಯ ತ್ರಿಶೂರ್ ಮೂಲದ ಜಿ.ಡಬ್ಲುೃ. ಇನ್ನೋವೇಷನ್ಸ್ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್. ಆನ್‌ಲೈನ್ ವೃತ್ತಿಯ ನಡುವೆಯೇ ಪ್ರವೃತ್ತಿಯನ್ನು ಜತನವಾಗಿ ಕಾಪಾಡಿಕೊಂಡ ಚಾಣಾಕ್ಷೆ. ವೃತ್ತಿಪರತೆ ಮತ್ತು ಕಲಾ ನೈಪುಣ್ಯವನ್ನು ಹದವಾಗಿ ಕಾಪಾಡಿಕೊಂಡು ಬರುವುದು ಒಂದು ಛಾಲೆಂಜ್. ಅದರಲ್ಲಿ ಸಮತ್ವ ಪಾಲಿಸಿಕೊಂಡು ಬಂದಿರುವುದು ಸುನಿತಾ ಹೆಗ್ಗಳಿಕೆ. ಭರತನಾಟ್ಯ #Bharatanatya ಪ್ರೀ ವಿದ್ವತ್ ಪರೀಕ್ಷೆಗೆ ತಾಲೀಮು ನಡೆಸುತ್ತಿರುವ ಸಂದರ್ಭದಲ್ಲೇ ಈಕೆ ಮೈಸೂರಿನಲ್ಲಿ ರಂಗ ಪ್ರವೇಶಕ್ಕೂ ಸಿದ್ಧವಾಗುತ್ತಿರುವುದು ಗಮನಾರ್ಹ.
ವ್ಯಕ್ತಿತ್ವ ಪರಿಚಯ
ಮೈಸೂರು ಮೂಲದ ಅನಿತಾ ಮತ್ತು ಸುರೇಶ ಬಾಬು ಅವರ ಹೆಮ್ಮೆಯ ಪುತ್ರಿ ಸುನಿತಾಗೆ ಬಾಲ್ಯದಿಂದಲೂ ಕಲಾಸಕ್ತಿ ಹೆಚ್ಚು. ಅಮ್ಮ ಅನಿತಾಗೆ ನೃತ್ಯ ಕಲಿಯುವ ಆಸಕ್ತಿ ಇತ್ತಾದರೂ ಅದು ಸಾಧ್ಯವಾಗಲಿಲ್ಲ. ಮಗಳು ಕಲಿಯಲೇಬೇಕು ಎಂಬ ಒತ್ತಾಸೆ ಅವರಲ್ಲಿದ್ದ ಕಾರಣ ಈಕೆ ಕಲಾರಂಗಕ್ಕೆ ಹೆಜ್ಜೆ ಇಡಲು ಮೂಲ ಸ್ಫೂರ್ತಿ ಆಗಿ ನೆಲೆಯಾಯಿತು. ಮೈಸೂರಿನ ಆಳ್ವಾರ್ ಕಲಾಭವನದಲ್ಲಿ ಅಮ್ಮನೊಂದಿಗೆ ಎಳವೆಯಲ್ಲಿ ನೋಡಿದ ಭರತನಾಟ್ಯ ಪ್ರದರ್ಶನವೊಂದು ಕಲಿಕಾಸಕ್ತಿ ಹೊಮ್ಮಿಸಿತು ಎಂದು ನೆನಪಿಸಿಕೊಳ್ಳುತ್ತಾರೆ ಸುನಿತಾ.
ಹಿಂದಿರುಗಿ ನೋಡಿದ್ದೇ ಇಲ್ಲ
ವಿದುಷಿ ನಯನಾ ಶಿವರಾಂ ಬಳಿ ಎಳವೆಯಲ್ಲೇ ನೃತ್ಯಾಭ್ಯಾಸ ಆರಂಭಿಸಿ ಜ್ಯೂನಿಯರ್ ಪರೀಕ್ಷೆ ಉತ್ತೀರ್ಣರಾದ ಸುನಿತಾ ಹಿಂದಿರುಗಿ ನೋಡಿದ್ದೇ ಇಲ್ಲ. ಸಮಯ ಮತ್ತು ಶ್ರಮ ಎರಡನ್ನೂ ಕಲೆಗೆ ಮೀಸಲಿಟ್ಟ ಸುನಿತಾ, ಎಸ್‌ಬಿಆರ್‌ಆರ್ ಮಹಾಜನ ಕಾಲೇಜಿನಲ್ಲಿ ಬಿಎಸ್ಸಿ ಪೂರ್ಣಗೊಳಿಸಿ, ಮೈಸೂರಿನ ವಿಟಿಯು ಕಾಲೇಜಿನಲ್ಲಿ ಎಂಸಿಎ ಸ್ನಾತಕೋತ್ತರ ಪದವಿ ವಿಭೂಷಿತರಾದರು. ವಿದುಷಿ ಮಿತ್ರಾ ನವೀನ್ ಅವರಲ್ಲಿ ನರ್ತನ ಪಾಠ ಮುಂದುವರಿಸಿ, ಸೀನಿಯರ್ ಪರೀಕ್ಷೆ, ತದನಂತರ ಪ್ರೀ ವಿದ್ವತ್ ವರೆಗೆ ಅಭ್ಯಾಸ ಮುನ್ನಡೆಸಿದ್ದಾರೆ. ಗಾಯನದಲ್ಲೂ ಆಸಕ್ತಿ ಹೊಂದಿದ್ದ ಈಕೆ ವಿದುಷಿ ಮೇಘಮಾಲಾ ಸ್ವಾಮಿ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತು, ಜೂನಿಯರ್ ಪರೀಕ್ಷೆಯಲ್ಲೂ ಪಾರಮ್ಯ ಮೆರೆದಿದ್ದಾರೆ. ಸದ್ಯ ಪೃಥ್ವಿ ಭಾರದ್ವಾಜ್ ಶಿಷ್ಯತ್ವ ಪಡೆದು ಸೀನಿಯರ್ ಹಂತದ ಗಾಯನಾಭ್ಯಾಸ ನಡೆಸುತ್ತಿದ್ದಾರೆ. ಆಕಾಶವಾಣಿ ಮೈಸೂರು ಸೇರಿದಂತೆ ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ಇವರ ಕಂಠಸಿರಿ ವಿಜೃಂಭಿಸಿದೆ. ಅನೇಕ ಸ್ಪರ್ಧೆಗಳಲ್ಲಿ ಬಹುಮಾನವೂ ಸಂದಿದೆ.
ವಿವಿಧ ಉತ್ಸವಗಳಲ್ಲಿ ಕಲಾಭಿವ್ಯಕ್ತಿ
ಶಾಲಾ, ಕಾಲೇಜು ಹಂತದಲ್ಲಿ (ನಿರ್ಮಲಾ ಶಾಲೆ, ಸದ್ವಿದ್ಯಾ ಮತ್ತು ಮಹಾಜನ್ಸ್ ಶಿಕ್ಷಣ ಸಂಸ್ಥೆ) ಸುನಿತಾ ಅವರ ನೃತ್ಯಾಭಿನಯಕ್ಕೆ ಹಲವು ವೇದಿಕೆ ದೊರೆತು, ಬಹುಮಾನ ಮತ್ತು ಪುರಸ್ಕಾರ ಒಲಿದು ಬಂದಿವೆ. ರೋಟರಿ, ಸಿಎಫ್‌ಟಿಆರ್‌ಐ, ರೈಲ್ವೆ ವಿಭಾಗೀಯ ಸಮ್ಮೇಳನ, ಟಿ.ನರಸೀಪುರದ ಕುಂಭಮೇಳ, ಮಲೆ ಮಹದೇಶ್ವರ ಬೆಟ್ಟದ ಉತ್ಸವ, ಮೈಸೂರು ಯುವ ದಸರಾ, ಹನುಮ ಜಯಂತಿ, ಜನ್ಮಾಷ್ಟಮಿ ವಿಶೇಷ ಸಂದರ್ಭದ ಕಾರ್ಯಕ್ರಮದಲ್ಲಿ ಸುನಿತಾ ಅವರ ನೃತ್ಯಾಭಿನಯ ಧನ್ಯತೆ ಮೆರೆದಿದೆ. ನೂಪುರ ಉತ್ಸವ, ದಾಂಡಿಯಾ ಮತ್ತು ನಾದ ನೃತ್ಯೋಪಾಸನಾ ಇವರ ಕಲಾಭಿವ್ಯಕ್ತಿಯನ್ನು ವಿಜೃಂಭಿಸಿದೆ.
ಗುರುವಿನ ಅನುಸರಣೆ
ಗುರು ಮಿತ್ರಾ ಅವರ ಮಾರ್ಗದರ್ಶನದಲ್ಲಿ ಇವರು ಹತ್ತಾರು ನೃತ್ಯ ನಾಟಕದಲ್ಲಿ ಅಭಿನಯಿಸಿ ಪ್ರೇಕ್ಷಕರಿಂದ ಶಹಬ್ಬಾಸ್ ಗಿರಿ ಪಡೆದಿದ್ದಾರೆ. ಆದಿಪೂಜ್ಯದ್ಲಿ ಕುಬೇರನಾಗಿ, ಸಪ್ತ ತಾಂಡವದಲ್ಲಿ ಮೋಹಿನಿಯಾಗಿ, ವಿಲಾಸದಲ್ಲಿ ಕೃಷ್ಣನಾಗಿ ದಶಾವತಾರದಲ್ಲಿ ರಾಮನಾಗಿ, ಶಬ್ದಂ ಮತ್ತು ವಸುದೈವ ಕುಟುಂಬಕಂ ದಲ್ಲಿ ಮಲಯಾಧ್ವಜ ಪಾಂಡ್ಯನಾಗಿ ಅಮೋಘ ಅಭಿನಯ ತೋರಿದ್ದು ಉಲ್ಲೇಖನೀಯ. ಇವೆಲ್ಲವೂ ಗುರು ಮಿತ್ರಾ ಅವರೊಂದಿಗಿನ ಅನುಸರಣೆ, ಸಖ್ಯಭಾವ ಮತ್ತು ಕಲಾಬದ್ಧತೆಗೆ ಸಾಕ್ಷಿಯಾಗಿವೆ.
ವಿನಯವೇ ಭೂಷಣ
ಇಷ್ಟು ಮಾತ್ರವಲ್ಲ, ಚಿತ್ರಕಲೆ, ಗಿಟಾರ್ ಮತ್ತು ವಯೋಲಿನ್ ವಾದನ, ಯೋಗ, ನಿರೂಪಣೆ ಮತ್ತು ಫೋಟೋಗ್ರಾಫಿ- ಇತ್ಯಾದಿ ಸುನಿತಾ ಅವರ ಬಿಡುವಿನ ವೇಳೆಯ ಹವ್ಯಾಸಗಳು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಪೂಜಾ ಕುಣಿತ, ಜಾನಪದ ನೃತ್ಯ ಪ್ರಸ್ತುತಿ ಪ್ಯಾಷನ್ ಆಗಿವೆ. ಜೀವನದ ಒಂದು ಘಳಿಗೆಯನ್ನೂ ಇವರು ವ್ಯರ್ಥ ಮಾಡಲೇ ಜೇನ್ನೊಣದಂತೆ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡು ‘ಮಧು’ ಸಂಗ್ರಹಿಸಿ, ಆತ್ಮಾನಂದ ಹೊಂದುವ ಪ್ರವೃತ್ತಿ ರೂಢಿಸಿಕೊಂಡಿದ್ದಾರೆ. ಇದರ ಕೀರ್ತಿ ಹೆತ್ತವರಿಗೆ ಮತ್ತು ಗುರುಗಳಿಗೆ ಸಮರ್ಪಣೆ ಮಾಗಬೇಕು ಎಂದು ಧನ್ಯತೆಯಿಂದ ಹೇಳುತ್ತಾರೆ. ಒಲಿದ ಹತ್ತಾರು ವಿದ್ಯೆಗೆ ಇಂತಹಾ ‘ವಿನಯ’ವೇ ಭೂಷಣವಾಗಿದೆ.
ತುಂಬು ಕುಟುಂಬದ ಗೃಹಿಣಿ
ಪ್ರಸ್ತುತ ದಿನಮಾನದಳಲ್ಲಿ ಪತಿ-ಪತ್ನಿ ಜತೆಗಿರುವುದೇ ಜಾಯಿಂಟ್ ಫ್ಯಾಮಿಲಿ ಎಂಬಂತಾಗಿದೆ! ಆದರೆ ಸುನಿತಾ ಬಾಲ್ಯದಿಂದಲೂ ಒಟ್ಟು ಕುಟುಂಬದ ಜೀವನ ಪದ್ಧತಿಯಲ್ಲಿ ಬೆಳೆದುಬಂದವರು. ಫಾರ್ಮಸಿ ಉದ್ಯಮಿ ರತೀಶ್ ಅವರನ್ನು ವಿವಾಹವಾದ ನಂತರವೂ ಅವರು ತುಂಬು ಕುಟುಂಬದಲ್ಲೇ ವಾಸವಿದ್ದಾರೆ. ಭಾರತೀಯ ಪರಂಪರೆಯ ದ್ಯೋತಕವಾದ ಇಂಥ ತುಂಬು ಕುಟುಂಬಗಳನ್ನು ಇಂದು ಕಾಣುವುದೇ ಅಪರೂಪ ಆಗಿರುವಾಗ ಅತ್ತೆ, ಮಾವ, ಮೈದುನ, ನಾದಿನಿಯವರೊಂದಿಗೆ ಸಹಬಾಳ್ವೆ ನಡೆಸುತ್ತಲೇ ಸೈ ಎನಿಸಿಕೊಂಡು ಕಲಾಸಾಧನೆ ಮಾಡುತ್ತಿರುವುದು ಸುನಿತಾ ಅವರ ಅಹೋಭಾಗ್ಯ. ಹತ್ತು ಹಲವು ಸ್ತರದಲ್ಲಿ ಇದು ಮೈಸೂರಿನ ಮಾದರಿ ‘ಸಮಗ್ರ ಕುಟುಂಬ’ ವೇ ಸರಿ.
ನೃತ್ಯ ವಿದ್ಯಾಲಯ ಆರಂಭಿಸುವ ಸಂಕಲ್ಪ
ಸುನಿತಾ ಕೆಲ ವರ್ಷ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯಲ್ಲಿ ಭರತನಾಟ್ಯ ಶಿಕ್ಷಕಿಯಾಗಿಯೂ ಸೇವೆ ಮಾಡಿದ್ದರು. ಸದ್ಯ ಇರುವ ಸಾಫ್ಟ್ ವೇರ್ ಡವಲಪ್‌ಮೆಂಟ್ ಇಂಜಿನಿಯರ್ ವೃತ್ತಿಯಲ್ಲಿ ವಾರಕ್ಕೆ ಎರಡು ದಿನ ರಜೆ ಇರುತ್ತದೆ. ಹಾಗಾಗಿ ಮುಂಬರುವ ದಿನಗಳಲ್ಲಿ ನೃತ್ಯಾ ವಿದ್ಯಾಲಯ ಆರಂಭಿಸಿ ನೂರಾರು ಮಕ್ಕಳಿಗೆ ಕಲೆಯನ್ನು ಧಾರೆ ಎರೆಯಬೇಕು ಎಂಬುದು ಸುನಿತಾ ಅವರ ಸಂಕಲ್ಪವಾಗಿದೆ. ಭಾರತೀಯ ಕಲಾಪರಂಪರೆ ಎಂಬ ಗಂಗೆ ಸುಲಲಿತವಾಗಿ ಹರಿಯಲು ಇಂಥ ನವ, ಯುವ ಕಲಾ ಸ್ವರೂಪಿಗಳ ಸೇವೆ ಸಮಾಜಕ್ಕೆ ಅತ್ಯಗತ್ಯವಾಗಿ ಬೇಕಾಗಿದೆ. ಇದು ಅನಿವಾರ್ಯವೂ ಹೌದು. ಅರ್ಥಪೂರ್ಣವೂ ಹೌದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post