ಕಲ್ಪ ಮೀಡಿಯಾ ಹೌಸ್ | ಮೈಸೂರು |
ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಯ ಗೌರವವನ್ನು ಶಿವರಾತ್ರೀಶ್ವರ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರಿಗೆ ನೀಡಬೇಕು ಎಂದು ಖ್ಯಾತ ನರರೋಗ ತಜ್ಞ, ಸಾಮಾಜಿಕ ಚಿಂತಕ ಹಾಗೂ ಬಿಜೆಪಿ ಮುಖಂಡ ಡಾ. ಸುಶ್ರುತ ಗೌಡ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿರುವ ಅವರು, ಸುತ್ತೂರು ಶ್ರೀಗಳ ಸೇವೆ ಮತ್ತು ಶ್ರೀಮಠದ ಪರಂಪರೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ದೇಶದ ಶಿಕ್ಷಣ, ಧಾರ್ಮಿಕ, ಸಾಂಸ್ಕೃತಿಕ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಗೆ ಸುತ್ತೂರು ಶ್ರೀಮಠ ನೀಡಿರುವ ಕೊಡುಗೆ ಅಪಾರವಾಗಿದೆ. ಸಮಾಜಮುಖಿ ಕಾರ್ಯಗಳ ಮೂಲಕ ಶ್ರೀಮಠವು ದೇಶ-ವಿದೇಶಗಳಲ್ಲಿ ತನ್ನದೇ ಆದ ಗೌರವವನ್ನು ಹೊಂದಿದೆ ಎಂದು ಡಾ. ಸುಶ್ರುತ ಗೌಡ ಅಭಿಪ್ರಾಯಪಟ್ಟಿದ್ದಾರೆ.
Also read>> ಉಜ್ವಲ ಭವಿಷ್ಯಕ್ಕಾಗಿ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಿ: ಡಾ. ನಾಗರಾಜ್ ಕರೆ
ಆಧುನಿಕ ಮೈಸೂರು, ಕರ್ನಾಟಕ ಹಾಗೂ ಭಾರತದ ಅಭಿವೃದ್ಧಿಯ ಪಯಣದಲ್ಲಿ ಸುತ್ತೂರು ಶ್ರೀಮಠದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶ್ರೀಮಠದ ಸೇವೆ ಸದಾ ಪೂಜನೀಯವಾಗಿದ್ದು, ದಸರಾ ಉದ್ಘಾಟನೆಯಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳನ್ನು ಆಹ್ವಾನಿಸುವುದು ಸಮಾಜಕ್ಕೆ ಹೆಮ್ಮೆಯ ವಿಷಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮೈಸೂರು ದಸರಾ ಮಹೋತ್ಸವವು ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದ್ದು, ಇಂತಹ ಮಹತ್ವದ ಕಾರ್ಯಕ್ರಮದ ಉದ್ಘಾಟನೆಗೆ ಸುತ್ತೂರು ಶ್ರೀಗಳಂತಹ ಮಹನೀಯರನ್ನು ಗೌರವಿಸುವುದು ಸೂಕ್ತ ಕ್ರಮವಾಗಲಿದೆ ಎಂದು ಡಾ. ಸುಶ್ರುತ ಗೌಡ ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










