ಈ ಜಗತ್ತಿನಲ್ಲಿ ದೇವರು ನಮಗೆ ಕೊಟ್ಟ ಬೆಲೆ ಕಟ್ಟಲಾಗದ ಮತ್ತೆ ಪಡೆಯಲಾಗದ ಅಪರೂಪದ ಮಾಣಿಕ್ಯ ಅಪ್ಪ ಹಾಗೂ ಅಮ್ಮ.
ಅಪ್ಪ ಅಮ್ಮ ನಾವು ಚಿಕ್ಕವರಿರುವಾಗ ಲಾಲನೆ ಪಾಲನೆ ಪೋಷಣೆ ಮಾಡಿ ಬೆಳೆಸಿದ್ದರು. ಅಂದು ಅವರಿಗೆ ನಾವು ಮಕ್ಕಳಾಗಿದ್ದೆವು. ಒಬ್ಬ ತಂದೆಯಾಗಿ ಒಂದು ಮಗುವಿನ ತಾಯಿಯಾಗಿ ಅಪ್ಪ ಅಮ್ಮ ಅವರ ಕರ್ತವ್ಯ ಮಾಡಿದ್ದಾರೆ. ಎಲ್ಲದಕ್ಕಿಂತ ಮಿಗಿಲಾಗಿ ನಮಗೆ ಒಳ್ಳೆಯ ಸಂಸ್ಕಾರ ನೀಡಿ ಬೆಳೆಸಿದ್ದಾರೆ. ಅವರ ಈ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ.
ಅಂದು ಅವರಿಗೆ ನಾವು ಮಕ್ಕಳು ಇಂದು ನಮಗೆ ಅಪ್ಪ ಅಮ್ಮ ಮಕ್ಕಳು ತಾನೇ. ಈಗ ನಾವು ತಂದೆ ಸ್ಥಾನದಲ್ಲಿ ನಿಂತು ಅವರನ್ನು ನೋಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ.
ಅಪ್ಪ ಅಮ್ಮನ ಜೊತೆಗಿನ ಮಕ್ಕಳ ಸಂಬಂಧ ಅಮೋಘವಾದದ್ದು. ಅಲ್ಲೊಂದು ಬಿಡಿಸಲಾಗದ ಬಾಂಧವ್ಯದ ಬೇಸುಗೆ ಇದೆ. ಅಲ್ಲೊಂದು ಅಳಿಸಲಾಗದ ಆತ್ಮೀಯ ಅನುರಾಗವಿದೆ. ಅಲ್ಲೊಂದು ಕರುಳ ಬಳ್ಳಿಯ ಬಿಗಿಯಾದ ಬಂಧನವಿದೆ.
ಸನ್ನಡತೆಯನ್ನು ಕಲಿಸಿ ಸಂಸ್ಕಾರವನ್ನು ನೀಡಿ ವಿದ್ದೆ ಬುದ್ದಿಯನ್ನು ಧಾರೆ ಎರೆದು ಮನುಷ್ಯನಾಗಿ ಮಾಡಿದ ಕಣ್ಣಿಗೆ ಕಾಣುವ ದೇವರುಗಳಿಗೆ ಎಷ್ಟು ನಮಿಸಿದರು ಸಾಲದು.
ಹೌದು… ಸ್ನೇಹಿತರೆ ಅಪ್ಪ ಅಮ್ಮ ನಮಗಾಗಿ ಅಸ್ತಿ ಅಂತಸ್ತು ಮಾಡಿಲ್ಲ ನಿಜ. ಆದರೆ ಮಕ್ಕಳಾದ ನಮ್ಮನ್ನೇ ಆಸ್ತಿ ಅಂದುಕೊಂಡು ತಮ್ಮ ಜೀವನವನ್ನು ತೇದಿ ನಮ್ಮ ಜೀವನವನ್ನು ರೂಪಿಸಿದ್ದಾರೆ.
ಬಾಲ್ಯ ಯೌವ್ವನ, ಮುಪ್ಪು ಮನುಷ್ಯ ಸಹಜ ಗುಣ. ಮುಪ್ಪು ಬಂದಾಗ ಆಸರೆ ಆಗಲೆಂದೇ ಭಗವಂತ ಗಂಡ ಹೆಂಡತಿ ಮಕ್ಕಳು ಎನ್ನುವ ಸುಂದರ ಬಾಂಧವ್ಯದ ಸಂಕೋಲೆ ಬೆಸೆದಿದ್ದಾನೆ.
ಕಳೆದುಕೊಂಡ ಹಣ ಮರಳಿ ಸಂಪಾದಿಸಬಹುದು. ಕಳೆದುಕೊಂಡ ವಸ್ತು ಮತ್ತೆ ಪಡಿಯಬಹುದು. ಆದರೆ ಕಳೆದುಕೊಂಡ ವ್ಯಕ್ತಿ ಹಾಗೂ ಸಂಬಂಧವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ.
ನ್ಯಾಯ ನಿಮ್ಮ ಪರವಾಗಿದ್ದರು ಸರಿ ತಂದೆ ತಾಯಿಯ ಜೊತೆ ವಾದ ಮಾಡಬೇಡಿ ಅವರ ಒಂದು ನಿಟ್ಟುಸಿರು ನಿಮಗೆ ಶಾಪವಾಗಬಹುದು. ಜೀವ ಹಾಗೂ ಜೀವನ ಕೊಟ್ಟಿರುವ ಅವರಿಗೆ ಸರ್ವ ಅಧಿಕಾರವಿದೆ.
ದಯವಿಟ್ಟು ಅಪ್ಪ ಅಮ್ಮನ ಬಗ್ಗೆ ಗೌರವ ಇಟ್ಟುಕೊಳ್ಳಿ ಹಳಸಿ ಹಾಳಾಗುವ ಹಲವಾರು ಸಂಬಂಧಗಳಿಕ್ಕಿಂತ ಸದಾ ಹಸಿರಾಗಿರುವ ಅಪ್ಪ ಅಮ್ಮನ ಸಂಬಂಧ ಉಳಿಸಿಕೊಳ್ಳೋಣ.
ಲೇಖನ: ಗೌರೀಶ್ ಆವರ್ಸೆ
ಚಿತ್ರಕೃಪೆ/ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post