ವಿಘ್ನ ಹರತಾ ಪ್ರಥಮ ಪೂಜಿತ ಎಂದೆಲ್ಲಾ ಕರೆಯಿಸಿಕೊಳ್ಳುವ ಗಣೇಶನ ಹಬ್ಬಕ್ಕೆ ಅರ್ಥಾತ್ ಗಣೇಶ ಚತುರ್ಥಿಯನ್ನು ನಾಳೆ ಆಚರಿಸಲು ಎಲ್ಲೆಡೆ ಜನರು ಸಿದ್ಧವಾಗುತ್ತಿದ್ದಾರೆ. ಹೀಗಾಗಿ ಗಣೇಶನ ಕುರಿತು ಒಂದು ಕತೆ ಹೇಳಲು ಬಯಸುತ್ತೇನೆ ಕೇಳಿ.
ಸಾಮಾನ್ಯವಾಗಿ ಸಂಪತ್ತಿನ ಒಡೆಯ ಯಾರು? ಎಂದು ಕೇಳಿದರೆ ಬಹುತೇಕ ಜನ ಹೇಳುವ ಹೆಸರು ಕುಬೇರ. ಹಾಗೇ ಬಹಳ ಶ್ರೀಮಂತ ವ್ಯಕ್ತಿಗಳನ್ನು ಕುಬೇರನಿಗೆ ಹೋಲಿಸುವ ಪರಿಪಾಠವಿದೆ. ಆದರೆ ಇದು ತಪ್ಪು ಕಲ್ಪನೆ. ಏಕೆ ಅಂತ ಹೇಳ್ತಿನಿ ಮುಂದಕ್ಕೆ ಓದಿ.
ಕುಬೇರ ಶಿವನ ಅಪ್ರತಿಮ ಭಕ್ತ. ಹೀಗಾಗಿ ಯಾವುದೇ ವರದ ಫಲಾಪೇಕ್ಷೆ ಇಲ್ಲದೇ ಶಿವನನ್ನು ಕುರಿತು ಕಠೋರ ತಪಸ್ಸು ಮಾಡುತ್ತಾನೆ. ಇದನ್ನು ಕಂಡ ಶಿವ ತಪಸ್ಸಿಗೆ ಪ್ರಸನ್ನನಾಗಿ ಸ್ವತಃ ಒಂದು ವರದ ರೂಪದಲ್ಲಿ ಒಂದು ಜವಾಬ್ದಾರಿ ಕೊಡುತ್ತಾನೆ. ಆ ಜವಾಬ್ದಾರಿಯೇ ಜಗತ್ತಿನ ಸಂಪೂರ್ಣ ಧನ ಸಂಪತ್ತಿನ ರಕ್ಷಣೆ ಮಾಡುವ ಜವಾಬ್ದಾರಿ. ಹೀಗಾಗಿ ಶ್ರೀಲಕ್ಷ್ಮೀ ಸಂಪತ್ತಿನ ಒಡತಿಯಾದರೆ, ಕುಬೇರ ಆ ಸಂಪತ್ತಿನ ರಕ್ಷಕ ಮಾತ್ರ.
ಈಗ ವಿಷಯಕ್ಕೆ ಬರುತ್ತೇನೆ. ಈ ಜವಾಬ್ದಾರಿ ಹೊತ್ತು ಅದನ್ನು ನಿರ್ವಹಣೆ ಮಾಡುತ್ತಾ, ತಾನೇ ಸಂಪತ್ತಿನ ಒಡೆಯನೆಂಬ ಭಾವನೆ ಕುಬೇರನಿಗೆ ಬರುತ್ತದೆ. ಅದೇ ಭಾವನೆಯಿಂದ ಕುಬೇರನಲ್ಲಿ ಅಹಂಕಾರ ಮೂಡುತ್ತದೆ. ಇದರಿಂದ ತನ್ನ ಶ್ರೀಮಂತಿಕೆಯನ್ನು ಪ್ರದರ್ಶನ ಮಾಡುವ ಸಲುವಾಗಿ ಒಂದು ಭವ್ಯ ಸಮಾರಂಭ ಆಯೋಜನೆ ಮಾಡಿ ಅದರಲ್ಲಿ ದೇವಾನುದೇವತೆಗಳಿಗೆ ಆಹ್ವಾನ ನೀಡಿ ಶಿವನನ್ನು ಕೂಡಾ ಆಹ್ವಾನ ನೀಡುತ್ತಾನೆ. ಆದರೆ ಇದರ ಉದ್ದೇಶ ಚೆನ್ನಾಗಿ ಅರಿತಿದ್ದ ಶಿವ ಆಹ್ವಾನವನ್ನು ನಯವಾಗಿ ತಿರಸ್ಕರಿಸುತ್ತಾನೆ. ಆದರೆ ಆತನಿಗೆ ಬುದ್ದಿ ಕಲಿಸುವ ಸಲುವಾಗಿ ಮಗ ಗಣೇಶನನ್ನು ಅವನೊಂದಿಗೆ ಕಳುಹಿಸುತ್ತಾನೆ.
ಕಳುಹಿಸಿ ಕೊಡುವ ಮುನ್ನ ಶಿವ ತನ್ನ ಮಗ ತಿಂಡಿಪೋತ, ಅವನ ಸತ್ಕಾರದಲ್ಲಿ ಲವಲೇಶವೂ ಕೊರತೆ ಆಗಬಾರದೆಂದು ಕುಬೇರನಿಗೆ ಎಚ್ಚರಿಕೆ ನೀಡುತ್ತಾನೆ. ಇದರ ಗುಪ್ತ ಸಂದೇಶ ಅರಿತ ಗಣೇಶ ಕುಬೇರನ ಅಹಂಕಾರ ಅಡಗಿಸುವ ನಿಶ್ಚಯ ಮಾಡಿಕೊಂಡು ಕುಬೇರನೊಂದಿಗೆ ಹೊರಡುತ್ತಾನೆ. ಕುಬೇರನ ಅರಮನೆ ತಲುಪಿದ ಗಣೇಶ ಮೊದಲು ತನಗೆ ಹಸಿವಾಗಿದೆ. ತಾನು ಮೊದಲು ಊಟ ಮಾಡುವುದಾಗಿ ಕೇಳಿಕೊಳ್ಳುತ್ತಾನೆ.
ಎಷ್ಟೆಂದರೂ ಬಾಲಕನಲ್ಲವೇ? ಎಂಬ ಭಾವಿಸಿ ಕುಬೇರ ಅವನಿಗೆ ಸತ್ಕಾರ ಮಾಡಲು ಆರಂಭಿಸುತ್ತಾನೆ. ಶಿವ ಹೇಳಿದ ಮಾತುಗಳು ನೆನಪಾದರೂ ಬಾಲಕನೋರ್ವ ಎಷ್ಟು ತಿಂದಿಯಾನು? ಎಂದು ಭಾವಿಸಿ ಸುಮ್ಮನಾಗುತ್ತಾನೆ.

ಎಷ್ಟು ಬಡಿಸಿದರೂ ಎಷ್ಟೇ ತಿಂದರೂ ಗಣೇಶನ ಹಸಿವು ಮಾತ್ರ ನಿಲ್ಲುವುದಿಲ್ಲ. ಆಹಾರದ ಉಗ್ರಾಣವೆಲ್ಲ ಖಾಲಿಯಾಗಿ ಮಿಕ್ಕ ದೇವತೆಗಳಿಗೆ ಆಹಾರವೇ ಇರುವುದಿಲ್ಲ. ಗಣೇಶನ ಈ ವಿರಾಟ ರೂಪ ಕಂಡ ಮೇಲೆ ಪಾಪ ದೇವತೆಗಳಿಗೆ ಸಮಾರಂಭದ ಯೋಚನೆ ಹೇಗೆ ತಾನೇ ಬಂದಿತು? ಎಲ್ಲರೂ ಅಚಂಬಿತರಾಗಿ ನಿಂತು ನೋಡ ತೊಡಗಿದರು.
ಕೊನೆಗೆ ಗಣೇಶ ಹೊಟ್ಟೆ ತುಂಬದ ಕಾರಣ ಕುಬೇರನ ಸಂಪತ್ತನ್ನೆಲ್ಲ ತಿಂದು ಮುಗಿಸಿದ. ಸಾಲದಿದ್ದಾಗ ಎದುರಿಗೆ ಕಂಡ ಪ್ರತಿಯೊಂದನ್ನೂ ತಿನ್ನಲಾರಂಭಿಸಿದ. ಸಾಲದು ಎಂಬಂತೆ ದೇವತೆಗಳ ಆಭರಣಗಳನ್ನೂ ಸಹ ತಿಂದು ಹಾಕಿದ. ದೇವತೆಗಳಿಗೆ ಗಣೇಶನ ದೃಷ್ಟಿಯಿಂದ ತಪ್ಪಿಸಿಕೊಂಡು ಹೋಗುವುದೇ ದೊಡ್ಡ ಸವಾಲಾಯಿತು. ಕಾರಣ ಪ್ರತಿ ವಸ್ತುವನ್ನೂ ತಿಂದು ಮುಗಿಸಿದ ಮೇಲೂ ಗಣೇಶನ ಹಸಿವು ಮಾತ್ರ ನೀಗಲಿಲ್ಲ. ಹೀಗಾಗಿ ಗಣೇಶನ ಮುಂದಿನ ಗುರಿ ದೇವತೆಗಳಾಗಿದ್ದರು.
ಆಗಲೇ ಶಿವನ ನುಡಿಯನ್ನು ಕುಬೇರ ಗಂಭೀರವಾಗಿ ಕಂಡಿದ್ದು. ಇನ್ನೇನು ಕುಬೇರನನ್ನು ತಿನ್ನಬೇಕೆಂದು ಗಣೇಶ ಮುಂದೆ ಬಂದಾಗ ಕುಬೇರ ಅದೃಶ್ಯನಾಗಿ ಕೈಲಾಸಕ್ಕೆ ಹೋಗಿ ಶಿವನ ಶರಾಗತನಾಗಿ ತನ್ನ ಅಹಂಕಾರವನ್ನು ಮನ್ನಿಸುವಂತೆಯೂ ಮಗನನ್ನು ಶಾಂತಗೊಳಿಸುವ ಮಾರ್ಗದ ಬಗ್ಗೆ ತಿಳಿಸುವಂತೆ ಬೇಡುತ್ತಾನೆ.
ಆಗ ಮಧ್ಯ ಪ್ರವೇಶಿಸಿದ ಗೌರಿ ಬಿಲ್ವಪತ್ರೆಗಳ ಮೇಲೆ ಶಿವನಾಮ ಅಂಕಿತಿಸಿ ಕುಬೇರನ ಕೈಗಿಟ್ಟು ಗಣೇಶನಿಗೆ ತಿನ್ನಿಸುವಂತೆಯೂ, ಇದರಿಂದ ಗಣೇಶನ ಹಸಿವು ನೀಗುವುದಾಗಿ ಹೇಳುತ್ತಾಳೆ.
ಗಣೇಶನ ಹಸಿವು ನೀಗಿಸಿ ಶಾಂತಗೊಳಿಸುವ ಮಾರ್ಗವೇನೋ ದೊರೆಯಿತು. ಆದರೆ ತಿನ್ನಿಸುವ ಸಾಹಸ ಯಾರು ತಾನೇ ಮಾಡಬಲ್ಲರು? ಎದುರು ಕಂಡರೆ ತಿಂದು ಮುಗಿಸುವ ಭಯ.
ಹೇಗೋ ಉಪಾಯ ಮಾಡಿ ಕುಬೇರ ಆ ಬಿಲ್ವಪತ್ರೆಗಳನ್ನು ಗಣೇಶ ತಿನ್ನುವಂತೆ ಮಾಡುತ್ತಾನೆ. ಆಗ ಗಣೇಶನ ಹಸಿವು ನೀಗಿ ಸಾಮಾನ್ಯ ರೂಪದಲ್ಲಿ ನಿಲ್ಲುತ್ತಾನೆ.
ಕೊನೆಗೆ ತನ್ನ ತಪ್ಪಿಗೆ ಕುಬೇರ ಗಣೇಶನಲ್ಲಿ ಕ್ಷಮೆ ಬೇಡಿ ತನ್ನದಲ್ಲದ ಸಂಪತ್ತಿನ ಬಗ್ಗೆ ಅಹಂಕಾರ ಪಡಲಾರೆ ಎಂದು ಗಣೇಶನಿಗೆ ವಚನ ನೀಡುತ್ತಾನೆ. ಇದರಿಂದ ಶಾಂತನಾದ ಗಣೇಶ ಕುಬೇರನಿಗೆ ಬುದ್ಧಿ ಮಾತನ್ನು ಉಪದೇಶಿಸಿ, ಅವನನ್ನು ಕ್ಷಮಿಸಿ ತಾನು ಆಪೋಷಣೆ ಮಾಡಿದ್ದ ಸಂಪತ್ತನ್ನೆಲ್ಲ ಕುಬೇರನಿಗೆ ಹಿಂತಿರುಗಿಸುತ್ತಾನೆ.
ಹೀಗೆ ಅಹಂಕಾರದ ಮದವೇರಿದ ಕುಬೇರನಿಗೆ ತನ್ನ ಲೀಲೆಯ ಮೂಲಕ ತಕ್ಕ ಶಾಸ್ತಿ ಮಾಡಿ ಅವನ ಗಣೇಶ ಅಹಂಕಾರವನ್ನು ಮಣ್ಣುಪಾಲು ಮಾಡುತ್ತಾನೆ. ಕೊನೆಯಲ್ಲಿ ಎರಡು ಮಾತು ಓದುಗರೇ.. ಗಣೇಶ ಚತುರ್ಥಿ ಆಚರಣೆ ಮಾಡುತ್ತೀರಿ ಒಳ್ಳೆಯದು. ಆದರೆ ಅದರಲ್ಲಿ ಬಾಹ್ಯ ಆಡಂಬರಕ್ಕಿಂತ ಒಳಗಿನ ಭಕ್ತಿ ಹೆಚ್ಚಾಗಿ ಇರಲಿ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಭಕ್ತಿ ಕಾಣಸಿಗುವುದು ವಿರಳವಾಗಿದೆ. ಮೂರ್ತಿ ವಿಸರ್ಜನೆಗೆ ಹೋದಾಗ ಅಶ್ಲೀಲ ಅಥವಾ ಯಾವುದೋ ಸಿನಿಮಾ ಹಾಡುಗಳಿಗೆ ಕುಣಿಯುತ್ತಾ ಮಧ್ಯ ಸೇವಿಸುತ್ತಾ ಅಥವಾ ಬಣ್ಣಗಳನ್ನು ಎರೆಚುತ್ತಾ ಹೋಗುವುದು ಅತಿಯಾಗಿ ಕಾಣುತ್ತದೆ. ಆ ಬಣ್ಣ ಎಷ್ಟು ತೊಳೆದರೂ ಮೈಯಿಂದ ಸುಲಭದಲ್ಲಿ ಹೋಗುವುದಿಲ್ಲ. ಚರ್ಮವನ್ನು ಸಹ ಇದು ಅಪಾಯಕ್ಕೆ ದೂಡುತ್ತದೆ.
ಇನ್ನೊಂದು ಮಾತು ಸಾಧ್ಯವಾದಷ್ಟು ಪ್ರಕೃತಿಯದತ್ತ ವಸ್ತುಗಳ ಮೂಲಕ ಸಿದ್ಧಗೊಂಡ ಪರಿಸರ ಸ್ನೇಹಿ ಮೂರ್ತಿಯನ್ನೇ ಪೂಜೆಗೆ ಬಳಸಿ. ಇಲ್ಲದಿದ್ದರೆ ನಮಗೆ ಬದುಕಲು ಅನುಕೂಲ ಮಾಡಿಕೊಟ್ಟ ಪ್ರಕೃತಿ ಮಾತೆಯ ನಾಶಕ್ಕೆ ನಾವೇ ಕಾರಣವಾಗುತ್ತೇವೆ. ಇವೆರಡೂ ಅಂಶಗಳ ಬಗ್ಗೆ ಗಮನವಿರಲಿ ಎನ್ನುತ್ತಾ ನನ್ನ ಲೇಖನ ಮುಗಿಸುತ್ತೇನೆ.
ನಮಸ್ಕಾರ
ಇಂತಿ ನಿಮ್ಮವ
ಲೇಖನ: ರೋಹನ್ ಪಿಂಟೋ ಗೇರುಸೊಪ್ಪ
















