ಕಲ್ಪ ಮೀಡಿಯಾ ಹೌಸ್ | ಉಡುಪಿ |
ಕೀರ್ತಿಶೇಷ ಶ್ರೀ ವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆ ಅಂಗವಾಗಿ (Udupi) ಉಡುಪಿ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ 47ನೇ ಚಾತುರ್ಮಾಸ್ಯ (Chaturmasya) ವ್ರತದ ಸಂದರ್ಭದಲ್ಲಿ ಸಾಮವೇದ ಪಾರಂಗತ 10 ಮಂದಿ ವಿದ್ವಾಂಸರನ್ನು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬಾರ್ಕೂರಿನ ಭಂಡಾರಕೇರಿ ಶ್ರೀಮಠದಲ್ಲಿ ವಿದ್ವಾಂಸರಿಂದ ಕಳೆದ ಆ. 8ರಿಂದ ಸಾಮವೇದದ ಪಾರಾಯಣ ಆರಂಭವಾಗಿದ್ದು, 16ರಂದು ಸಂಜೆ 5 ಗಂಟೆಗೆ ಸಮಾರೋಪಗೊಳ್ಳಲಿದೆ. ಈ ಸಂದರ್ಭ ಪ್ರಶಸ್ತಿ ಪ್ರದಾನ ನೆರವೇರಲಿದೆ. ಸನ್ಮಾನವು ಸ್ಮರಣಿಗೆ, ಸನ್ಮಾನ ಪತ್ರ ಮತ್ತು ಗೌರವ ಸಂಭಾವನೆ ಒಳಗೊಂಡಿದೆ ಎಂದು ಶ್ರೀ ವಿದ್ಯೇಶತೀರ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ಪಂಡಿತ ಉದಯ ಕುಮಾರ ಸರಳತ್ತಾಯ ಮತ್ತು ಹೊರನಾಡು ಶ್ರೀ ಅನ್ನಪೂಣೇಶ್ವರಿ ದೇವಾಲಯದ ಧರ್ಮಕರ್ತ ಭೀಮೇಶ್ವರ ಜೋಷಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಾಮವೇದವನ್ನು ಸಮಗ್ರವಾಗಿ ಕಲಿಯುವವರ ಸಂಖ್ಯೆ ಇಂದು ಗಣನೀಯವಾಗಿ ಕಡಿಮೆ ಆಗಿದ್ದು, ಈ ರಂಗದಲ್ಲಿರುವ ರಾಷ್ಟ್ರದ ವಿವಿಧ ಭಾಗದ ವಿದ್ವಾಂಸರನ್ನು ಗುರುತಿಸಿ ಗೌರವಿಸುವುದು ಚಾತುರ್ಮಾಸ್ಯ ಸಂದರ್ಭದಲ್ಲಿ ಶ್ರೀಮಠಕ್ಕೆ ಹೆಮ್ಮೆ ಎನಿಸಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
Udupi : ಪ್ರಶಸ್ತಿ ಪುರಸ್ಕೃತರ ವಿವರ
ವಿದ್ವಾನ್ ಅಜಯ ವ್ಯಾಸಾಚಾರ್ಯರಿಗೆ ಸಾಮಗಾನ ಸುರಾಚಾರ್ಯ ಪ್ರಶಸ್ತಿ
ಸಾಮಗಾನ ಸುರಾಚಾರ್ಯ ಪ್ರಶಸ್ತಿಗೆ ಶಿರಸಿ ಸಮೀಪದ ಸೋದೆ ವಿದ್ಯಾಪೀಠದ ಉಪನ್ಯಾಸಕ ವಿದ್ವಾನ್ ಅಜಯ ವ್ಯಾಸಾಚಾರ್ಯ ಆಯ್ಕೆಯಾಗಿದ್ದಾರೆ. ಮೂಲತಃ ರಾಜಾಸ್ಥಾನದ ಭಿಲ್ವಾಡ ಪ್ರಾಂತ್ಯದ ಇವರು ಶ್ರೀಕೃಷ್ಣನ ಉಪಾಸಕರು. ಪಾಲಕ್ಕಾಡ್ ನಲ್ಲಿ 10 ವರ್ಷಗಳ ಕಾಲ ಸಾಮವೇದದ ಜೈಮಿನೀ ಶಾಖೆಯ ಅಧ್ಯಯನವನ್ನು ಮಾಡಿದ್ದಾರೆ. ಕಾಶೀ ವಿಶ್ವವಿದ್ಯಾನಿಲಯದಿಂದ ಶಾಸ್ತ್ರೀ ಆಚಾರ್ಯ ಪದವೀಧರರಾಗಿದ್ದು, ಕಂಚಿ,ಮೈಸೂರು, ತೆಲಂಗಾಣ, ಸೊರಪಳ್ಳಿ, ಕುಂಭಕೋಣಂ, ಉಜ್ಜಯಿನೀ ಮುಂತಾದ ಸ್ಥಳಗಳಲ್ಲಿ ಪರೀಕ್ಷೆಗಳನ್ನು ನೀಡಿ ಈಗಾಗಲೇ ವೇದವಿಭೂಷಣ , ವೇದವಿಚಕ್ಷಣ ಪ್ರಶಸ್ತಿಗಳಿಂದ ಮಾನ್ಯರಾಗಿದ್ದಾರೆ.
Also Read>> ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸಿದ ಪ್ರಾಚಾರ್ಯ ಡಾ. ಎಂ. ವೀರೇಂದ್ರ
ಸಾಮೋದ್ಗಾನ ದೇಶಿಕ ಪ್ರಶಸ್ತಿಗೆ ಮಂಗಳೂರಿನ ವೇದಪಾಠ ಉಪನ್ಯಾಸಕ ಮತ್ತು ಕದ್ರಿ ಮಂಜುನಾಥ ದೇವಸ್ಥಾನದ ಅರ್ಚಕ
ಪ್ರಭಾಕರ ಅಡಿಗ, ಉಡುಪಿಯ ಯೋಗದೀಪಿಕಾ ವಿದ್ಯಾಪೀಠದ ಅಧ್ಯಾಪಕ ಸುದರ್ಶನಾಚಾರ್ಯ ಸಾಮಗ, ಚೆನ್ನೈ ನ ವೇದ ವಿದ್ವಾಂಸ ದತ್ತಾತ್ರೇಯ ಶರ್ಮಾ, ವೇಣುಮಾಧವ ಸಾಮಗ, ವಿಷ್ಣುದತ್ತ ಶರ್ಮಾ, ಯೋಗೀಶ ಕಲ್ಲೂರಾಯ ಆಯ್ಕೆ ಆಗಿದ್ದಾರೆ.
ಸಾಮಗಾನ ಶುಚಿವ್ರತ_ ಪ್ರಶಸ್ತಿಗೆ ಪಂಡಿತರಾದ ಸುದರ್ಶನ ಕಲ್ಕೂರ, ಕೃಷ್ಣಮೂರ್ತಿ ಕನ್ನರ್ಪಾಡಿ ಮತ್ತು ವಸಂತ ನೆಲ್ಲಿತೀರ್ಥ ಆಯ್ಕೆಯಾಗಿದ್ದಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಗಣ್ಯರ ಪರಿಚಯ
ಪ್ರಭಾಕರ ಅಡಿಗ
ಸಾಮೋದ್ಗಾನ ದೇಶಿಕ ಪ್ರಶಸ್ತಿಗೆ ಮಂಗಳೂರಿನ ವೇದಪಾಠ ಉಪನ್ಯಾಸಕ ಮತ್ತು ಕದ್ರಿ ಮಂಜುನಾಥ ದೇವಸ್ಥಾನದ ಅರ್ಚಕ ಪ್ರಭಾಕರ ಅಡಿಗ ಭಾಜನರಾಗಿದ್ದಾರೆ. ಇವರು ವೈದಿಕವಿಧಿಗಳಬಗ್ಗೆ ವಿಶೇಷ ಜ್ಞಾನವನ್ನು ಸಂಪಾದಿಸಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ವೇದ,ಪೌರೋಹಿತ್ಯದ ಪಾಠ ಮಾಡಿದ್ದಾರೆ. ಶೃಂಗೇರಿಯಲ್ಲಿ ಶಿಕ್ಷಾಶಾಸ್ತ್ರಿ, ಮೈಸೂರು ವಿಶ್ವವಿದ್ಯಾಲಯದ ಎಂಎ. ಸಂಸ್ಕೃತ ಪದವೀಧರರು. ಉಡುಪಿಯ ಸಂಸ್ಕೃತ ಪಾಠಶಾಲೆಯಲ್ಲಿ ನವೀನನ್ಯಾಯ, ಮತ್ತು ದ್ವೈತವೇದಾಂತವನ್ನು ಅಧ್ಯಯನಮಾಡಿದ್ದಾರೆ. ಶ್ರೀ ವಿದ್ಯೇಶತೀರ್ಥರಲ್ಲಿ ನ್ಯಾಯಸುಧಾ ಅಧ್ಯಯನ ಮಾಡಿದ್ದಾರೆ. ತಿರುಪತಿ ವಿವಿಯಿಂದ ಡಾಕ್ಟರೇಟ್ ಪಡೆದಿದ್ದಾರೆ. ವೈದಿಕ ಸ್ವರಪ್ರಕ್ರಿಯೆ, ವೈದಿಕ ಛಂದಸ್ಸು, ತಂತ್ರಶಾಸ್ತ್ರ, ಭಾಗವತಾದಿ ಗ್ರಂಥಗಳ ಬಗ್ಗೆ ಹತ್ತಾರು ಕೃತಿಗಳನ್ನು ರಚನೆ ಮಾಡಿದ ವಿದ್ವಾಂಸರಾಗಿದ್ದಾರೆ.
ಚೆನ್ನೈ ನ ವೇದ ವಿದ್ವಾಂಸ ದತ್ತಾತ್ರೇಯ ಶರ್ಮಾ
ವಿದ್ವಾಂಸ ದತ್ತಾತ್ರೇಯಶರ್ಮ ಅವರು ಸಾಮವೇದ ಕೌಥುಮ ಶಾಖೆಯಲ್ಲಿ ಆಳವಾದ ಪರಿಣತಿ ಗಳಿಸಿದವರು. ಚೆನ್ನೈ ನ ವೇದ ವಿದ್ವಾಂಸರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಗತಾಳ ಬದ್ಧವಾಗಿ ಸುಶ್ರಾವ್ಯವಾಗಿ ಸಾಮವೇದ ಮಂತ್ರಗಳ ಗಾನ ಮಾಡುವಲ್ಲಿ ಪರಿಣತಿ ಇದೆ.
ಇವರು ಹೊಸಪೇಟೆಯ ಕಣ್ವ ಮಠದ ಗುರುಕುಲದಲ್ಲಿ 10ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ. ಮುಂಬೈನ ಸತ್ಯ ಧ್ಯಾನ ವಿದ್ಯಾಪೀಠದಲ್ಲಿ ಸಾಮವೇದದ ಅಧ್ಯಾಪನ ಮಾಡಿದ್ದಾರೆ. ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ
ಎಂಎ ಪದವಿ ಪಡೆದಿದ್ದಾರೆ. ದೇಶದ ವಿವಿಧೆಡೆ ನಡೆದ ವಾಜಪೇಯ, ಸೋಮಯಾಗಗಳಲ್ಲೂ ಭಾಗವಹಿಸಿದ್ದಾರೆ. ಪೌರೋಹಿತ್ಯ ಧರ್ಮಶಾಸ್ತ್ರಗಳಲ್ಲಿಯೂ ಪರಿಣತಿಯನ್ನು ಸಂಪಾದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










