ಕೋಲಾರ: ಜಿಲ್ಲೆಯಲ್ಲಿ 3,33,348 ಕುಟುಂಬಗಳಿದ್ದು, ಮತದಾನದ ದಿನ ಮತದಾರರೆಲ್ಲರೂ ಮತದಾನ ಮಾಡುವಂತೆ ಪ್ರತಿ ಕುಟುಂಬಕ್ಕೂ ಮತದಾನದ ಆಮಂತ್ರಣ ನೀಡಿ ಆಹ್ವಾನಿಸಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನ ಆಮಂತ್ರಣದಲ್ಲಿ ಕ್ಷೇತ್ರ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳ ಸಹಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರ ಸಹಿ ಇರುತ್ತದೆ. ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣ ತಂಡವನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ 8 ಲಕ್ಷ ಜನರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇವರೆಲ್ಲರಿಗೂ ಮತದಾನದ ಕುರಿತು ಜಾಗೃತಿಯನ್ನು ಮೂಡಿಸಲಾಗುವುದು ಎಂದು ತಿಳಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ. 74 ರಷ್ಟು ಮತದಾನವಾಗಿತ್ತು. ಈ ಬಾರಿ ಈ ಪ್ರಮಾಣವನ್ನು ಹೆಚ್ಚಿಸುವತ್ತ ಗಮನ ಹರಿಸಲಾಗುತ್ತಿದೆ. ಅರ್ಹ ಮತದಾರರನ್ನು ಈಗಾಗಲೇ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ 12 ಸಾವಿರ ಚೊಚ್ಚಲ ಮತದಾರರಿದ್ದರು. ಆದರೆ, ಈ ಬಾರಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಕಾರಣ, 26 ಸಾವಿರ ಚೊಚ್ಚಲ ಮತದಾರರನ್ನು ಗುರುತಿಸಿ ಪಟ್ಟಿಗೆ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಬಾರಿ ವಿಕಲಚೇತನ ಮತದಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 8,054 ವಿಕಲಚೇತನ ಮತದಾರರನ್ನು ಗುರುತಿಸಲಾಗಿತ್ತು. ಈ ಬಾರಿ 15,933 ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ. ಇವರು ಮತದಾನದ ದಿನ ಬಂದು ಮತದಾನ ಮಾಡಲು ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಎಲ್ಲಾ ಮತಗಟ್ಟೆಗಳಲ್ಲಿ ವೀಲ್‌ಚೇರ್ ಹಾಗೂ ರ್ಯಾಫ್ ವ್ಯವಸ್ಥೆ ಮಾಡಲಾಗುವುದು. ಬ್ಯಾಲೆಟ್ ಯುನಿಟ್‌ನಲ್ಲಿ ಬ್ರೈಲ್ ಲಿಪಿಯನ್ನು ಅಳವಡಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಂದರಂತೆ ವಿಕಲಚೇತನರ ಮತಗಟ್ಟೆ ಇರುವುದು. ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳೆಲ್ಲಾ ವಿಕಲಚೇತನರೇ ಆಗಿರುತ್ತಾರೆ ಎಂದು ಮಾಹಿತಿ ನೀಡಿದರು.
ಕಳೆದ ಬಾರಿ ಶೇ.10 ರಷ್ಟು ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಿ ಅಲ್ಲಿ ಹೆಚ್ಚಿನ ಒತ್ತು ನೀಡಿ ಮತದಾನ ಕುರಿತು ಜಾಗೃತಿ ಮೂಡಿಸಲಾಗುವುದು. ಇಂದಿನಿಂದ ಎಲ್ಲಾ ತಾಲ್ಲೂಕುಗಳಲ್ಲಿ ಮತಗಟ್ಟೆ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಪ್ರತಿ ಮತಗಟ್ಟೆಗಳಲ್ಲಿ ಮತದಾನದ ದಿನ ಹೆಲ್ಸ್ ಡೆಸ್ಕನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಮತದಾರರ ಜಾಗೃತಿ ವೇದಿಕೆಗಳನ್ನು ಸ್ಥಾಪಿಸಿ. ಕಚೇರಿಗೆ ಬರುವ ಸಾರ್ವಜನಿಕರಿಗೆ ಚುನಾವಣಾ ಜಾಗೃತಿ ಮತ್ತು ನೈತಿಕ ಮತದಾನದ ಕುರಿತು ಮಾಹಿತಿ ನೀಡಲಾಗುವುದು. ಎಲ್ಲಾ ಗ್ರಾಮಗಳಲ್ಲಿ ಪಂಜಿನ ಮೆರವಣಿಗೆ ಮಾಡುವ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಲಾಗುವುದು. ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತೆ ಕ್ಲಬ್‌ಗಳನ್ನು ರಚಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಮೂಡಿಸಲಾಗಿದೆ. ಮಹಿಳೆಯರಿಗಾಗಿಯೇ ಈ ಬಾರಿಯೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ರಂತೆ 12 ಸಖೀ ಬೂತ್‌ಗಳನ್ನು (ಪಿಂಕ್ ಬೂತ್) ತೆರೆಯಲಾಗುವುದು. ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯೆಲ್ಲರೂ ಮಹಿಳೆಯರೆ ಆಗಿರುತ್ತಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಸೌಮ್ಯ ಅವರು ಉಪಸ್ಥಿತರಿದ್ದರು.
Discussion about this post