ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತೀಯ ಜ್ಞಾನ ಪರಂಪರೆಯಲ್ಲಿ ಮಹತ್ವದ ಸ್ಥಾನ ಹೊಂದಿರುವ ವ್ಯಾಸಪೂರ್ಣಿಮೆ ಕಾರ್ಯಕ್ರಮವನ್ನು ಶ್ರೀ ಭಗವಾನ್ ಮಹಾವೀರ ಜೈನ್ ಸಂಜೆ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಹಾಗೂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು “ವ್ಯಾಸ ಮಹರ್ಷಿ ಮತ್ತು ಭಾರತೀಯ ಜ್ಞಾನ ಪರಂಪರೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ತಮ್ಮ ಉಪನ್ಯಾಸದಲ್ಲಿ ವ್ಯಾಸ ಮಹರ್ಷಿಗಳ ಜೀವನ, ಸಾಹಿತ್ಯ ಕೊಡುಗೆ ಹಾಗೂ ಭಾರತೀಯ ಸಂಸ್ಕೃತಿಯ ಮೇಲೆ ಅವರ ಪ್ರಭಾವವನ್ನು ವಿವರಿಸಿದ ಅವರು, ವೇದಗಳು, ಪುರಾಣಗಳು ಹಾಗೂ ಮಹಾಭಾರತದಂತಹ ಮಹತ್ವದ ಗ್ರಂಥಗಳ ಮೂಲಕ ವ್ಯಾಸರು ಮಾನವಕುಲಕ್ಕೆ ಅಪಾರ ಜ್ಞಾನ ಸಂಪತ್ತನ್ನು ನೀಡಿದ್ದಾರೆ ಎಂದು ಹೇಳಿದರು.
Also read>> ಮೈಸೂರು–ಜೈಪುರ ಎಕ್ಸ್‌ಪ್ರೆಸ್‌ಗೆ ಇಸಾರ್ದಾ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ
ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿರುವ ಗುರು-ಶಿಷ್ಯ ಪರಂಪರೆಯ ಮೌಲ್ಯಗಳು ಇಂದಿನ ವಿದ್ಯಾರ್ಥಿಗಳ ಜೀವನದಲ್ಲಿಯೂ ಅಳವಡಿಕೆಯಾಗಬೇಕು. ಜ್ಞಾನ, ವಿನಯ ಹಾಗೂ ಸಂಸ್ಕಾರದ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹೇಶ್ ಕೆ.ಎಂ. ಅವರು ವ್ಯಾಸಪೂರ್ಣಿಮೆಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದರು. ಸಂಸ್ಕೃತ ಅಧ್ಯಯನವು ಕೇವಲ ಭಾಷಾ ಕಲಿಕೆಗೆ ಸೀಮಿತವಾಗದೆ, ಭಾರತೀಯ ಜ್ಞಾನ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಪ್ರಮುಖ ಮಾಧ್ಯಮವಾಗಿದೆ ಎಂದು ಹೇಳಿದರು.
ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಸುನೀಲ್ ಕೆ.ಎಸ್. ಅವರು ಕಾರ್ಯಕ್ರಮದ ಸಂಯೋಜನೆ ನಡೆಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿರುವ ಸಂಸ್ಕೃತ ಸಾಹಿತ್ಯದ ಸಂರಕ್ಷಣೆ ಹಾಗೂ ಪ್ರಸಾರದಲ್ಲಿ ಜೈನ್ ಸಮೂಹ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದರು.
ವ್ಯಾಸಪೂರ್ಣಿಮೆ ಕಾರ್ಯಕ್ರಮದ ಅಂಗವಾಗಿ ವ್ಯಾಸ ಮಹರ್ಷಿಗಳ ಕೊಡುಗೆ, ಭಾರತೀಯ ಜ್ಞಾನ ಪರಂಪರೆಯ ವೈಭವ ಹಾಗೂ ಸಂಸ್ಕೃತ ಸಾಹಿತ್ಯದ ಮಹತ್ವ ಕುರಿತು ಚರ್ಚೆಗಳು ನಡೆದವು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ಭಾಷಾ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









