ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಮಾಧುರಿ ದೇಶಪಾಂಡೆ |
ಮನುಷ್ಯರ ದಿನಮಾನದಲ್ಲಿ ಒಂದು ವರ್ಷವು ದೇವತೆಗಳ ಒಂದು ದಿನವೆಂದು ಭಾವಿಸಲಾಗುತ್ತದೆ. ದಿನದ ಎರಡು ಭಾಗಗಳು ಇದ್ದಂತೆ ವರ್ಷದಲ್ಲಿ ಉತ್ತರಾಯಣ ಹಾಗೂ ದಕ್ಷಿಣಾಯಣ ಎಂಬ ಎರಡು ಭಾಗಗಳಿವೆ.
ಸಾಮಾನ್ಯವಾಗಿ ಜನವರಿ ತಿಂಗಳ 14-15ನೇ ತಾರೀಖಿನಿಂದ ಜುಲೈ ತಿಂಗಳ 16-17ರವರೆಗೆ ಉತ್ತರಾಯಣ #Uttarayana ಕಾಲವು ಹಾಗೂ ಜುಲೈನಿಂದ ಜನವರಿಯವರೆಗೂ ದಕ್ಷಿಣಾಯಣ #Dakshinayana ಎಂದು ಕರೆಯಲಾಗುತ್ತದೆ. ಉತ್ತರಾಯಣವನ್ನು ಪುಣ್ಯಕಾಲವೆಂದು ಭಾವಿಸಲಾಗುತ್ತದೆ. ಉತ್ತರಾಯಣದಲ್ಲಿ ಜನರು ಸೂರ್ಯನ ಸಂಪರ್ಕಕ್ಕೆ ಬರುತ್ತಾರೆ. ಭೂಮಿಯ ಮೇಲೆ ಬಿಸಿಲು ಕಾಲದ ಉತ್ತಮ ವಾತಾವರಣವಿದ್ದು ಈ ಪುಣ್ಯ ಸಮಯದಲ್ಲಿ ಹುಟ್ಟು ಸಾವುಗಳು ಮಹತ್ವವನ್ನು ಪಡೆಯುತ್ತವೆ.
Also Read>> ಗುಣಮಟ್ಟದ ಬಿತ್ತನೆ ಬೀಜ ಪರೀಕ್ಷೆ ಮಾಡುವುದು ಹೇಗೆ? ಡಾ. ಪ್ರಿಯಾ ವಿವರಿಸಿದ್ದಾರೆ ಓದಿ
ಉತ್ತರಾಯಣ ಪುಣ್ಯಕಾಲದಲ್ಲಿ ಸಾಯುವುದು ಕೂಡ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಮಹಾಭಾರತದ ಕಾಲದಲ್ಲಿ ಭೀಷ್ಮರು ಶರಶಯ್ಯೆಯಲ್ಲಿ ಮಲಗಿದ್ದು ಉತ್ತರಾಯಣ ಕಾಲದಲ್ಲಿ ಪ್ರವೇಶಿದ ನಂತರ ತಮ್ಮ ಪ್ರಾಣತ್ಯಾಗ ಮಾಡುವ ಕತೆಯಂತೂ ಬಹಳಷ್ಟು ಪ್ರಚಲಿತವೇ ಆಗಿದೆ.
ಭೂಮಿಯು #Earth ಸೂರ್ಯನ ಸುತ್ತ ತಿರುಗುತ್ತದೆ. ಉತ್ತರಾಯಣದಲ್ಲಿ ಭೂಮಿಯ ಉತ್ತರ ಭಾಗವು ಸೂರ್ಯನ ಕಿರಣಗಳಿಗೆ ಹತ್ತಿರವಾಗಿದ್ದು ಉತ್ತಮ ಆರೋಗ್ಯ ಹಾಗೂ ಸಮೃದ್ಧಿ, ಬೆಳೆಗಳನ್ನು ಹೊಂದುವ ಸಮಯವಾಗಿದೆ. ಉತ್ತರಾಯಣವು ಮಾರ್ಗಶಿರ ಅಥವಾ ಪುಷ್ಯ ಮಾಸದ ಅಂದರೆ ಜನವರಿ ತಿಂಗಳ 14 ಅಥವಾ 15ನೇ ತಾರೀಖಿಗೆ ಬರುತ್ತದೆ. ಡಿಸೆಂಬರ್ 16-17ನೇ ತಾರೀಖಿಗೆ ಆರಂಭವಾಗುವ ಧನುರ್ಮಾಸವು #Dhanurmasa ಸಮಾಪ್ತಿಯಾಗುವುದು ಉತ್ತರಾಯಣ ಪರ್ವ ಕಾಲದಲ್ಲಿ.ಇನ್ನು, ಉತ್ತರಾಯಣ ಪರ್ವಕಾಲವು ಹಿಂದುಗಳಲ್ಲಿ ಬಹಳ ಮಹತ್ವವನ್ನು ಪಡೆದಿದೆ. ಸೂರ್ಯನನ್ನು ಸುತ್ತುತ್ತಿರುವ ಭೂಮಿಯು ಉತ್ತರ ದಿಕ್ಕಿನಲ್ಲಿ ಚಲಿಸುವಾಗ ಮಕರ ರಾಶಿಯಲ್ಲಿ ಸಂಕ್ರಮಣವು ಆಗುತ್ತದೆ. ಒಟ್ಟಾರೆ ತಿಂಗಳಿಗೊಮ್ಮೆ ಸಂಕ್ರಮಣವಿರುತ್ತದೆ. ಮಕರ ರಾಶಿಗೆ ಸಂಕ್ರಮಣವಿದ್ದ ಕಾಲಕ್ಕೆ ಉತ್ತರಾಯಣ ಎನ್ನಲಾಗುತ್ತದೆ. ಇದು ವೈಜ್ಞಾನಿಕವಾಗಿ ಹಾಗೂ ಧಾರ್ಮಿಕವಾಗಿ ಬಹಳ ಮಹತ್ವವನ್ನು ಪಡೆದಿದೆ. ಹಿಂದೂ ಪಂಚಾಂಗದಲ್ಲಿ ಹೇಗೆ ಯುಗಾದಿಗೆ ಗೋಚಾರ ಫಲಗಳಿವೆಯೋ ಅದೇ ರೀತಿ ಸಂಕ್ರಮಣದಲ್ಲೂ ಸಹ ಶುಭ ಅಶುಭಗಳ ಮಾಹಿತಿಯನ್ನು ಕೊಡುತ್ತಾರೆ. ಹೀಗಾಗಿ ಉತ್ತರಾಯಣ ಕಾಲವು ಬಹಳ ಮಹತ್ವಪೂರ್ಣ ಕಾಲವಾಗಿದೆ.
ಉತ್ತರಾಯಣ ಕಾಲದಲ್ಲಿ ಆಚರಿಸುವ ಹಬ್ಬ ಮತ್ತು ವಿಧಿ ವಿಧಾನಗಳು ಬಹಳ ಮಹತ್ವವನ್ನು ಪಡೆದಿವೆ. ಧನುರ್ಮಾಸದ ಕಡೆಯ ದಿನವನ್ನು ಭೋಗಿ ಹಬ್ಬವೆಂದು ಆಚರಿಸುತ್ತೇವೆ. ಬ್ರಾಹ್ಮಣರಿಗೆ #Brahmin ಭೋಜನಕ್ಕೆ ಕರೆದು, ಸುವಾಸಿನಿಯರಿಗೆ ಬಾಗಿಣ ಕೊಟ್ಟು ಮನೆಯಲ್ಲಿ ತಾಜಾ ಬೆಳೆದ ತರಕಾರಿ-ಧಾನ್ಯಗಳನ್ನು ಉಪಯೋಗಿಸಿ ರೊಟ್ಟಿ, ಪಲ್ಯ, ಹುಗ್ಗಿ, ಹೋಳಿಗೆ ಮೊದಲಾದ ಸಿಹಿ ಪದಾರ್ಥವನ್ನು ಉಣಬಡಿಸಿ ನಾವು ಕೂಡ ಪ್ರಸಾದ ಸೇವಿಸಬೇಕು. ಬೇರೆಲ್ಲ ಹಬ್ಬಗಳಲ್ಲಿ ಹಬ್ಬದ ದಿನವೇ ಅಭ್ಯಂಗ ಮಾಡಿದರೆ ಸಂಕ್ರಮಣ ಕಾಲದಲ್ಲಿ ಭೋಗಿ ಹಬ್ಬದ ದಿನವೇ ಅಭ್ಯಂಗ ಮಾಡಬೇಕು.
Also Read>> ಮಕರ ಸಂಕ್ರಾಂತಿ | ಎಳ್ಳು ಬೆಲ್ಲ ಸೇವನೆ | ಸನಾತನ ಧರ್ಮದ ವೈಜ್ಞಾನಿಕ ಕಾರಣ ಏನು? ತಿಳಿಯಲೇಬೇಕಾದ ಮಾಹಿತಿ
ಸೂರ್ಯನು #Sun ನಮ್ಮ ಭೂಮಿಗೆ ಅತಿ ಹತ್ತಿರದಲ್ಲಿ ಹಾದು ಹೋಗುವ ಸಮಯವನ್ನು ಪರ್ವಕಾಲ ಎನ್ನುತ್ತಾರೆ. ಆ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ನೀಡುವುದು ವಾಡಿಕೆ. ಸೂರ್ಯದೇವನ ಪೂಜೆ ನಮ್ಮ ಸನಾತನ ಧರ್ಮದಲ್ಲಿ ಮೊದಲಿನಿಂದಲೂ ಬಂದಿದೆ. ಹೀಗಾಗಿ ಮಕರ ಸಂಕ್ರಮಣದ ದಿವಸ ಅಂದರೆ ಉತ್ತರಾಯಣ ಪರ್ವಕಾಲ ಸಂಭವಿಸುವ ಸಮಯದಲ್ಲಿ ಸೂರ್ಯ ದೇವನ ಆರಾಧನೆಗಾಗಿ ತಿಲ ತರ್ಪಣವನ್ನು ಕೊಡಲಾಗುತ್ತದೆ. ನದಿ ತೀರಕ್ಕೆ ಹೋಗಿ ಶ್ರಾದ್ಧ ಕಾರ್ಯಾದಿಗಳು ತರ್ಪಣ ಕೊಡುವುದು ಸಹ ವಾಡಿಕೆಯಾಗಿದೆ.
ಉತ್ತರಾಯಣ ಸಮಯದಲ್ಲಿ ಸ್ತ್ರೀ ಇರಲಿ ಪುರುಷರಿರಲಿ ಮೈಗೆ ಎಳ್ಳನ್ನು ಲೇಪಿಸಿಕೊಂಡು ಸ್ನಾನ ಮಾಡಬೇಕು. ಎಳ್ಳಿನಲ್ಲಿ ಎಣ್ಣೆಯ ಅಂಶ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಚಳಿಗಾಲದ ಕಾರಣ ನಮ್ಮ ಚರ್ಮವು ಒಣಗಿ ಶುಷ್ಕವಾಗಿರುತ್ತದೆ. ಆಶುಷ್ಕತೆಯನ್ನು ಹೋಗಲಾಡಿಸಿ ನಮ್ಮನ್ನು ಆರೋಗ್ಯವಂತರನ್ನಾಗಿ ಇಡಲು ಈ ಎಳ್ಳು ಲೇಪನದೊಂದಿಗೆ ಸ್ನಾನವನ್ನು ನಮ್ಮ ಪೂರ್ವಿಕರು ಅಭ್ಯಾಸ ಮಾಡಿಸಿರುತ್ತಾರೆ. ಸರ್ವ ರೋಗ ನಿವಾರಕ ಎಂದು ಜ್ಞಾನಿಗಳು ಹೇಳಿದ್ದಾರೆ.ಉತ್ತರಾಯಣ ಕಾಲದಲ್ಲಿ ಷಡ್ ತಿಲ ಕರ್ಮಾನುಷ್ಠಾನ ಮಾಡುತ್ತಾರೆ. ಮೊದಲಿಗೆ ಎಳ್ಳು ಲೇಪನದ ಸ್ನಾನ, ಎರಡನೆಯದು ಎಳ್ಳುದಾನ, ಮೂರನೆಯದು ಎಳ್ಳಿನ ಹೋಮ, ನಾಲ್ಕನೆಯದು ಎಳ್ಳಿನ ಭಕ್ಷಣ, ಎಳ್ಳಿನಿಂದ ತರ್ಪಣ ನೀಡುವುದು ಕೊನೆಯದಾಗಿ ಎಳ್ಳೆಣ್ಣೆಯ ದೀಪವನ್ನು ಹಚ್ಚುವುದು.
ಎಳ್ಳು ಸಾಕಷ್ಟು ಶಾಖವನ್ನು ಉತ್ಪತ್ತಿ ಮಾಡುವ ಪದಾರ್ಥವಾಗಿದ್ದು ವಿಪರಿತ ಚಳಿಯ ಸಮಯದ ತಾಪವನ್ನು ಶಮನ ಮಾಡಿಕೊಳ್ಳಲು ಎಳ್ಳಿನ ಬಳಕೆಯನ್ನು ಯಥೇಚ್ಛವಾಗಿ ಮಾಡಬೇಕು ಎಂದು ಹೇಳುತ್ತಾರೆ. ಎಳ್ಳಿನ ಲೇಪನದೊಂದಿಗೆ ಸ್ನಾನ ಮಾಡಿದ ಮೇಲೆ ಎಳ್ಳನ್ನು ದಾನ ಮಾಡಬೇಕು. ಇಲ್ಲಿ ಕೇವಲ ನಾವು ಮಾತ್ರ ಆರೋಗ್ಯವಂತರಾಗಿ ಇದ್ದರೆ ಸಾಲದು. ಇತರರಿಗೂ ದಾನವನ್ನು ಮಾಡಿದರೆ ನಾವು ಬೇರೆಯವರಲ್ಲಿ ಆರೋಗ್ಯಕರ ಅಭ್ಯಾಸ ಬೆಳೆಸಿದಂಥೆ ಎಂಬ ಕಾರಣಕ್ಕೆ ದಾನವನ್ನು ನೀಡಲಾಗುತ್ತದೆ.
ನಂತರ ಎಳ್ಳಿನಿಂದ ಹೋಮವನ್ನು ಮಾಡುತ್ತಾರೆ. ಹಬ್ಬ ಹರಿದಿನಗಳಲ್ಲಿ ನಮ್ಮ ಪೂರ್ವಿಕರು ಹೋಮ ಜಪ ತಪಾದಿಗಳನ್ನು ಮಾಡುತ್ತಿದ್ದರು. ಕಾರಣ ಇಷ್ಟೆ ಹೋಮದ ಹೊಗೆ ವಾತಾವರಣವನ್ನು ಶುದ್ಧಗೊಳಿಸಿ ನಮ್ಮ ಸುತ್ತಲೂ ಸಕಾರಾತ್ಮಕ ವಲಯವನ್ನು ಸೃಷ್ಟಿ ಮಾಡುತ್ತದೆ. ಎಳ್ಳಿನ ಹೋಮದಿಂದ ಆಹಾರದಲ್ಲಿ ಬಂದು ಆರೋಗ್ಯ ಕೆಡಿಸಬಹುದಾದ ಹುಳ ಹುಪ್ಪಡಿಗಳು ಸತ್ತು ಆರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತದೆ.
ಇವೆಲ್ಲ ಬಾಹ್ಯದಲ್ಲಿ ಬೆಚ್ಚಗಿಡುವ ಪ್ರಯತ್ನವಾದರೆ ದೇಹವು ಒಳಗಿನಿಂದ ಬೆಚ್ಚಗಿರಲು ಎಳ್ಳಿನ ಪದಾರ್ಥವನ್ನು ಸೇವಿಸಬೇಕು. ಉತ್ತರಾಯಣಕಾಲದಲ್ಲಿ ಎಳ್ಳು ಹೋಳಿಗೆ, ಎಳ್ಳಿನ ಚಿತ್ರಾನ್ನ ಮೊದಲಾದ ಎಳ್ಳಿನಿಂದ ತಯಾರಿಸಿದ ಖಾದ್ಯಗಳನ್ನು ಅವಶ್ಯವಾಗಿ ಸೇವಿಸಲೇಬೇಕು. ಈ ರೀತಿಯಲ್ಲಿ ಎಲ್ಲರೂ ಸೇವಿಸಬೇಕೆಂಬ ಕಾರಣದಿಂದ ಸಂಕ್ರಮಣದ ದಿನ ಎಳ್ಳು ಬೆಲ್ಲ ಬೀರುವ ಸಮಯವಾಗಿದೆ.
ಧಾರ್ಮಿಕವಾಗಿ ಎಲ್ಲ ಯೋನಿಗಳಲ್ಲಿರುವ ಪಿತೃಗಳಿಗೆ ತರ್ಪಣವನ್ನು ನೀಡಿ ಎಳ್ಳಿನ ಬಳಕೆಯನ್ನು ಮಾಡುತ್ತೇವೆ. ಕೊನೆಯದಾಗಿ ಎಳ್ಳೆಣ್ಣೆ ದೀಪವನ್ನು ಹಚ್ಚುವುದು. ಸಾಮಾನ್ಯವಾಗಿ ತೈಲ ಎಂದರೆ ತಿಲದಿಂದ ಮಾಡಿದ ದ್ರವವೇ ತೈಲ. ದೇವರಿಗೆ ಎಣ್ಣೆ ಮತ್ತು ತುಪ್ಪ ಎರಡು ಪದಋಥಗಳಿಂದ ಹಚ್ಚುತ್ತೇವೆ. ಆದರೆ ಎಳ್ಳೆಣ್ಣೆ ದೀಪ ಹಚ್ಚುವುದು ಆರೋಗ್ಯಕರ ಹಾಗೂ ಪುಣ್ಯಕರ ಎಂದು ಶಾಸ್ತ್ರಗಳು ಹೇಳುತ್ತವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post