Read - 2 minutes
ಬೆಂಗಳೂರು, ಸೆ.19: ಸಾರ್ವಜನಿಕರು, ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಕೊನೆಗೂ ಕಾವೇರಿ ಸಮಸ್ಯೆ ಇತ್ಯರ್ಥಕ್ಕೆ ಮಧ್ಯಪ್ರವೇಶ ಮಾಡಲು ಮುಂದೆ ಬಂದಿದೆ.
ಆದರೆ, ಪ್ರಧಾನಿ ನರೇಂದ್ರ ಮೋದಿ ಈ ವಿಷಯಲ್ಲಿ ನೇರ ಪ್ರವೇಶ ಮಾಡದೆ ಕೇಂದ್ರದ ಬೃಹತ್ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಮಧ್ಯಸ್ಥಿಕೆಗೆ ಆಸಕ್ತಿ ವಹಿಸಿದ್ದಾರೆ.
ಪ್ರಧಾನಿ ಅವರ ಸೂಚನೆಯಂತೆ ಉಮಾಭಾರತಿ ಅವರು ಕನರ್ಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ಸಭೆ ಕರೆಯಲು ತೀರ್ಮಾನಿಸಿದ್ದಾರೆ. ಜತೆಗೆ ನೀರಾವರಿ ಸಚಿವರು, ಮುಖ್ಯಕಾರ್ಯದರ್ಶಿಗಳು ಭಾಗವಹಿಸುವಂತೆ ಈಗಾಗಲೇ ಎರಡೂ ರಾಜ್ಯಗಳಿಗೆ ಕೇಂದ್ರದಿಂದ ಪತ್ರ ಬಂದಿದೆ.
ಪ್ರಧಾನಿ ಮಧ್ಯಪ್ರವೇಶ ಮಾಡುವ ಇಂಗಿತ ಹೊಂದಿದ್ದರು. ಆದರೆ, ಜಮ್ಮು-ಕಾಶ್ಮೀರದ ಉರಿ ಸೇನಾಶಿಬಿರದ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸಿ ಭಾರೀ ದುಷ್ಕೃತ್ಯ ಎಸಗಿರುವ ಹಿನ್ನೆಲೆಯಲ್ಲಿ ಮೋದಿ ಅವರು ಉಮಾಭಾರತಿ ಅವರಿಗೆ ಸಮಸ್ಯೆ ಕಡೆಗೆ ಗಮನ ಹರಿಸುವಂತೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಗೃಹ ಇಲಾಖೆ, ರಕ್ಷಣೆ, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಗುಪ್ತಚರ, ಸಂಶೋಧನೆ ಮತ್ತು ವಿಶ್ಲೇಷಣೆ, ಸೇನಾ ಪಡೆಯ ಮುಖ್ಯಸ್ಥರು ಹಾಗೂ ಪಾಕ್ ವಿರುದ್ಧ ಹೋರಾಟಕ್ಕೆ ವಿಶ್ವದ ಮೇಲೆ ಒತ್ತಡ ಹೇರಬೇಕಾದ ಅನಿವಾರ್ಯತೆ ಮೋದಿಗೆ ಎದುರಾಗಿದೆ. ಹೀಗಾಗಿ ಅವರು ಇನ್ನೂ 15 ದಿನಗಳ ಕಾಲ ದೇಶದ ಯಾವುದೇ ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿ ಮಾಡದಿರಲು ತೀರ್ಮಾನಿಸಿದ್ದಾರೆ.
ಉಮಾಭಾರತಿಗೆ ಹೊಣೆಗಾರಿಕೆ:
ಕರ್ನಾಟಕ ಮತ್ತು ತಮಿಳುನಾಡು ನಡುವೆ ಜಲಸಂಘರ್ಷ ಸೃಷ್ಟಿಸಿರುವ ಕಾವೇರಿ ನದಿ ನೀರು ಹಂಚಿಕೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಮುಂದಾಗುವಂತೆ ಪ್ರಧಾನಿಯವರೇ ಖುದ್ದು ಉಮಾಭಾರತಿ ಅವರಿಗೆ ನಿರ್ದೇಶನ ನೀಡಿದ್ದಾರೆ.
ಪ್ರಧಾನಿ ಅವರ ಸೂಚನೆ ಮೇರೆಗೆ ಕರ್ನಾಟಕದ ಕಾವೇರಿ ಜಲಾನಯನ ತೀರ ಪ್ರದೇಶದಲ್ಲಿರುವ ಕೆಆರ್ ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟದ ಬಗ್ಗೆ ಈಗಾಗಲೇ ಮಾಹಿತಿ ಪಡೆದಿದ್ದಾರೆ.
ಗುಪ್ತಚರ ತಂಡ ಆಗಮನ:
ಮೂಲಗಳ ಪ್ರಕಾರ ಕೇಂದ್ರದ ಒಂದು ತಂಡ ರಾಜ್ಯದ ಈ ನಾಲ್ಕು ಜಲಾಶಯಗಳಿಗೆ ಸದ್ದಿಲ್ಲದೆ ಭೇಟಿ ನೀಡಿ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳಿಂದ ಗೋಪ್ಯ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಬಳಕೆ, ಈ ಜಲಾಶಗಳ ಮೇಲೆ ಅವಲಂಬಿತವಾಗಿರುವ ನಗರಗಳ ಜನಸಂಖ್ಯೆ ಇತ್ಯಾದಿ ವಿವರಗಳನ್ನು ಗುಪ್ತಚರ ಇಲಾಖೆ ತಂಡ ಮಾಹಿತಿ ಪಡೆದಿದೆ.
ಮೆಟ್ಟೂರಿಗೂ ಭೇಟಿ:
ಇನ್ನು ಇದೇ ತಂಡ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೂ ಭೇಟಿ ನೀಡಿ ನೀರು ಸಂಗ್ರಹವಾಗಿರುವ ಬಗ್ಗೆ ಅಗತ್ಯ ಮಾಹಿತಿ ಮತ್ತು ಅಂಕಿ-ಅಂಶಗಳನ್ನು ಕಲೆ ಹಾಕಿದೆ. ಇದರ ಜತೆಗೆ ನೀರಾವರಿ ಇಲಾಖೆಯ ಅಧಿಕಾರಿಗಳ ತಂಡ ಸದ್ದಿಲ್ಲದೆ ಎರಡೂ ರಾಜ್ಯಗಳಿಗೂ ಭೇಟಿ ಕೊಟ್ಟು ಸಂಪೂರ್ಣ ಮಾಹಿತಿಯನ್ನು ಉಮಾಭಾರತಿ ಅವರಿಗೆ ನೀಡಿದೆ ಎಂದು ತಿಳಿದು ಬಂದಿದೆ.
ಕೋರ್ಟ್ ಮೇಲೆ ಅವಲಂಬನೆ:
ಕರ್ನಾಟಕ ಮತ್ತು ತಮಿಳುನಾಡು ನದಿ ನೀರು ಹಂಚಿಕೆ ಸಂಬಂಧ ದೆಹಲಿಯಲ್ಲಿ ಇಂದು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ನಡೆದಿದೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ಅವಧಿಯಲ್ಲಿ ಸಂಕಷ್ಟ ಸೂತ್ರದ ಪ್ರಕಾರ ಕರ್ನಾಟಕ ನೀರು ಹರಿಸಿಲ್ಲ. ಬಾಕಿ ಉಳಿದಿರುವ ನೀರನ್ನು ತನ್ನ ರಾಜ್ಯಕ್ಕೆ ಹರಿಸಲು ನಿರ್ದೇಶನ ನೀಡಬೇಕೆಂದು ತಮಿಳುನಾಡು ಸಮಿತಿಗೆ ವಿಶೇಷ ಅರ್ಜಿ ಸಲ್ಲಿಸಿದೆ.
ಸಮಿತಿಯು ಪುನಃ ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಲಿದೆಯೋ ಇಲ್ಲವೇ ನಾಳೆ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವ ಮಾರ್ಪಾಡು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಲಲಿತ್ ಉದಯ್ ಮತ್ತು ದೀಪಕ್ ಮಿಶ್ರಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಕೈಗೆತ್ತಿಕೊಳ್ಳಲಿದೆ.
Discussion about this post