Read - 2 minutes
ರಾಜ್ಯ ಬಿಜೆಪಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಜಾತಿ ವಿದ್ಯಮಾನಗಳ ಬಗ್ಗೆ ಹೈಕಮಾಂಡ್ ಮುಖಂಡರು ತೀವ್ರ ಅಸಮಾಧಾನಗೊಂಡಿದ್ದಾರೆ. ವಿಶೇಷವಾಗಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪರವರ ವರ್ತನೆಯ ಬಗ್ಗೆ ಆಕ್ರೋಶಗೊಂಡಿದ್ದಾರೆ. ಇಬ್ಬರಿಗೂ ಎಚ್ಚರಿಕೆ ಕೊಟ್ಟಿದ್ದಾರೆ. ಬ್ರಿಗೇಡ್ ಕೈಬಿಡುವಂತೆ ಸೂಚಿಸಿದ್ದಾರೆ. ಆದರೆ ಈಶ್ವರಪ್ಪ ಒಪ್ಪಿಲ್ಲ. ಬದಲಾಗಿ ಹಿಂದುಳಿದ ಮಠಾಧೀಶರನ್ನು ಮುಂದಿಟ್ಟುಕೊಂಡು ಬ್ರಿಗೇಡ್ ಕಟ್ಟಲು ಮುಂದಾಗಿದ್ದರು. ಬಿಎಸ್‌ವೈ ಮತ್ತು ಬಿಜೆಪಿ ಹೆಸರಿದ್ದರೆ ತಾವು ಸಂಘಟನೆಯಲ್ಲಿ ಇರುವುದಿಲ್ಲ ಎಂದು ಹೇಳಿ ಈಶ್ವರಪ್ಪಗೆ ಚಾಟಿಯೇಟು ನೀಡಿದ್ದಾರೆ ಮಠಾಧೀಶರು. ಇದರ ಗೂಢಾರ್ಥವನ್ನು ಈಶ್ವರಪ್ಪ ತಿಳಿದುಕೊಳ್ಳಬೇಕಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ಬಿರುಕು ಇನ್ನಷ್ಟು ಬಿಗಡಾಯಿಸಿದೆ. ಈವರೆಗೆ ರಾಯಣ್ಣ ಬ್ರಿಗೇಡ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಮತ್ತು ಬಿಜೆಪಿಯನ್ನು ಬಲಗೊಳಿಸುವ ಮೂಲಕ ಅಧಿಕಾರಕ್ಕೆ ತರುವ ಉದ್ದೇಶವನ್ನು ಹೊಂದಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಬ್ರಿಗೇಡ್ ಇವೆರಡೂ ಉದ್ದೇಶವನ್ನು ಕೈಬಿಟ್ಟಿದ್ದು, ಹಿಂದುಳಿದವರ ಮತ್ತು ದಲಿತರ ಸಂಘಟನೆ, ಅಭಿವೃದ್ಧಿಗೆ (ರಾಜಕೀಯೇತರವಾಗಿ) ಇಟ್ಟುಕೊಳ್ಳಲು ನಿರ್ಧರಿಸಿದೆ.
ಇದರಿಂದ ಬಿಜೆಪಿಗೆ ಹಿನ್ನಡೆಯಾಗುವುದು ನಿಶ್ಚಿತ ಎಂದು ವಿಶ್ಲೇಷಿಸಲಾಗುತ್ತಿದೆ. ಯಡಿಯೂರಪ್ಪ ವೀರಶೈವ ಮಠಾಧೀಶರನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಕಟ್ಟ ಹೊರಟಿದ್ದಾರೆ. ಇದು ಅವರು ಮಾಡುತ್ತಿರುವ ಅತಿ ದೊಡ್ಡ ತಪ್ಪು. ಯಾವತ್ತೂ ಒಂದು ರಾಷ್ಟ್ರೀಯ ಪಕ್ಷ ಒಂದು ಸಮುದಾಯ, ಒಂದು ವರ್ಗದ ಪರ ಮಾತ್ರ ಇರಬಾರದು. ಈಶ್ವರಪ್ಪ ಈಗ ಮಾಡುತ್ತಿರುವುದೂ ಇದನ್ನೇ. ಅವರಿಗೂ ಹಿಂದುಳಿದವರು ಮತ್ತು ದಲಿತರು ಮಾತ್ರ ಬೇಕು. ತಮ್ಮ ಕುರುಬ ಜನಾಂಗದವರು ಹಿಂದುಳಿದ ಸಮುದಾಯದವರಾಗಿರುವುದರಿಂದ ಅವರ ಉದ್ಧಾರದ ನೆಪದಲ್ಲಿ ಬ್ರಿಗೇಡ್ ಕಟ್ಟಿದ್ದಾರೆ. ಕಾಂಗ್ರೆಸ್‌ಗೆ ದಲಿತರು ವೋಟ್ ಬ್ಯಾಂಕ್ ಆಗಿರುವುದರಿಂದ ಅವರನ್ನು ಸೆಳೆದುಕೊಳ್ಳುವ ಯತ್ನ ನಡೆಸಿದ್ದಾರೆ.
ಬಿಜೆಪಿಯ ಯಾವುದೇ ನಾಯಕರು ಮುಂದಾದರೂ ಸದ್ಯದ ವಾತಾವರಣದಲ್ಲಿ ದಲಿತರು ಬಿಜೆಪಿ ಕಡೆ ವಾಲುವ ಲಕ್ಷಣವಿಲ್ಲ. ಇತ್ತೀಚೆಗೆ ಬಿಜೆಪಿ ಅಧಿಕಾರದಲ್ಲಿರುವ ವಿವಿಧ ರಾಜ್ಯಗಳಲ್ಲಿ ಮತ್ತು ಅಧಿಕಾರದಲ್ಲಿರದಿದ್ದರೂ ಕೆಲವು ಸಂಘಟನೆಗಳು ನಡೆಸುತ್ತಿರುವ ಅವರ ಮೇಲಿನ ದೌರ್ಜನ್ಯ, ಹಲ್ಲೆ, ಅತ್ಯಾಚಾರ ಮೊದಲಾದವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇದು ಸಾಧ್ಯ ಎಂದೆನಿಸುವುದಿಲ್ಲ.
ಆದರೆ ಹಿಂದ ಸಂಘಟನೆಗೆ ಬಿಜೆಪಿ ಹೈಕಮಾಂಡ್ ವಿರೋಧ ವ್ಯಕ್ತಪಡಿಸಿದ್ದರಿಂದ ಈಶ್ವರಪ್ಪ ಅನಿವಾರ್ವಾಗಿ ಅದನ್ನು ರಾಜಕೀಯೇತರವಾಗಿ ಮಾಡುವ ಸ್ಥಿತಿ ಬಂದಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ಉದ್ದೇಶ ತಮ್ಮದೆಂದು ಹೇಳಿಕೊಂಡಿದ್ದರು. ಯಾವಾಗ ಹಿಂದುಳಿದ ಮಠಾಧೀಶರು ಇದನ್ನು ವಿರೋಧಿಸಿ ಸಂಘಟನೆ ಮತ್ತು ಅಭಿವೃದ್ಧಿ ಮಾಡುವುದಾರೆ ಮಾತ್ರ ತಮ್ಮ ಪಾಲ್ಗೊಳ್ಳುವಿಕೆ ಇದೆ ಎಂದು ಖಡಾಖಂಡಿತವಾಗಿ ಈಶ್ವರಪ್ಪ ಅವರಿಗೆ ಹೇಳಿದರೋ ಅಲ್ಲಿಂದ ಮೆತ್ತಗಾದರು. ಏಕೆಂದರೆ, ಈ ಮಠಾಧೀಶರಿಗೆ ಅರ್ಥಾತ್ ಹಿಂದುಳಿದವರಿಗೆ ಬಿಎಸ್‌ವೈ ಮುಖ್ಯಮಂತ್ರಿಯಾಗುವುದು, ಸಿದ್ದರಾಮಯ್ಯ ಅವರನ್ನು ವಿರೋಧಿಸುವುದು ಬೇಕಿಲ್ಲ ಎನ್ನುವುದು ಇದರಿಂದ ವೇದ್ಯವಾಗುತ್ತದೆ.
ರಾಜಕೀಯದಲ್ಲಿರುವ ನಾಯಕ ತನ್ನ ಜಾತಿಯನ್ನೇ ಮುಂದೆ ಮಾಡಿಕೊಂಡು ಸಂಘಟನೆ ಮಾಡುತ್ತಾನೋ, ಅಧಿಕಾರ ಹಿಡಿಯಲು ಮುಂದಾಗುತ್ತಾನೋ ಅದು ಅವನಿಗೂ, ಪಕ್ಷಕ್ಕೂ ಮುಳುವಾಗುತ್ತದೆ. ರಾಜಕೀಯದಲ್ಲಿ ಇದು ಹಲವಾರು ಬಾರಿ ಸಾಬೀತಾಗಿದೆ. ರಾಜ್ಯದಲ್ಲಿ ವೀರಶೈವರಿಂದಲೇ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದನ್ನು ಬಿಎಸ್‌ವೈ ಅರಿಯಬೇಕಿತ್ತು. ಮೇಲ್ವರ್ಗದವರನ್ನು ಓಲೈಸಲು ಮತ್ತು ಆ ಮೂಲಕ ೧೫೦ ಸ್ಥಾನವನ್ನು ಪಡೆದು ಅಧಿಕಾರ ಹಿಡಿಯುವುದು ಅವರ ಕನಸಾಗಿದೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಯಾರು ಎಷ್ಟೇ ಬಾಯಿ ಬಡಿದುಕೊಂಡರೂ ಇದು ಸಾಧ್ಯವಿಲ್ಲದ ಮಾತು.
ಈ ಕಾರಣದಿಂದ ಕೊನೆಗೂ ಹಿಂದುಳಿದ ಮಠಾಧೀಶರು ಎಚ್ಚೆತ್ತುಕೊಂಡಿರುವುದು ಒಳ್ಳೆಯ ಬೆಳವಣಿಗೆ ಎನ್ನಲೇಬೇಕು. ಇದನ್ನು ಜಾತಿ ರಾಜಕೀಯ ಮಾಡುವವರು ಅರ್ಥ ಮಾಡಿಕೊಳ್ಳಬೇಕು.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಅಹಿಂದ ಮೂಲಕ ಹೆಸರುಗಳಿಸಿದ್ದಾರೆ. ಹಾಗಾಗಿ ಹಿಂದ ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ ಎನ್ನುವುದನ್ನು ಕಾಲವೇ ಹೇಳಬೇಕು.
ಸಿದ್ದರಾಮಯ್ಯ ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಸೇರಿಸಿಕೊಂಡಿದ್ದರೆ ಈಶ್ವರಪ್ಪ ಅಲ್ಪಸಂಖ್ಯಾತರನ್ನು ಕೈಬಿಟ್ಟಿದ್ದಾರೆ. ಸದ್ಯದ ಮಟ್ಟಿಗೆ ಅಹಿಂದ ಸಾಕಷ್ಟು ಬಲಿಷ್ಠವಿದೆ. ಈ ಹಂತದಲ್ಲಿ ಈಶ್ವರಪ್ಪ ಅವರ ರಾಯಣ್ಣ ಬ್ರಿಗೇಡ್ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಲಿದೆ ಎನ್ನುವುದನ್ನು ಕಾದು ನೋಡಬೇಕಷ್ಟೆ. ಸಿದ್ದರಾಮಯ್ಯ ಸಹ ಕುರುಬರೇ. ಅವರೂ ಹಿಂದುಳಿದವರೇ. ಅವರಿಂದ ಹಿಂದ ಮತವನ್ನು ಕಿತ್ತುಕೊಳ್ಳುವುದು ಸದ್ಯದ ಮಟ್ಟಿಗೆ ಸುಲಭದ ಕೆಲಸವಲ್ಲ. ಏಕೆಂದರೆ ಅವರು ಅಧಿಕಾರದಲ್ಲಿದ್ದಾರೆ. ಅಧಿಕಾರ ಇರುವಲ್ಲಿ ಬಹುತೇಕ ಜನರ ಬೆಂಬಲವಿರುತ್ತದೆ. ಹಿಂದುಳಿದ ಮತ್ತು ದಲಿತ ಸ್ವಾಮಿಜಿಗಳೂ ಅವರ ವಿರುದ್ದ ಇರಲಾರರು. ಇದನ್ನೆಲ್ಲ ಈಶ್ವರಪ್ಪ ಅರ್ಥ ಮಾಡಿಕೊಳ್ಳಬೇಕು.
ಬಿಜೆಪಿಯಲ್ಲೇ ಹಿಂದುಳಿದ, ಅಲ್ಪಂಸಂಖ್ಯಾತ, ದಲಿತ, ಎಸ್‌ಟಿ ಮೋರ್ಚಾ ಇದೆ. ಈಶ್ವರಪ್ಪ ಹಿಂದ ಸಂಘಟಿಸಿದರೆ ಈ ಮೋರ್ಚಾ ವಿರುದ್ಧವೇ ಕೆಲಸ ಮಾಡಿದಂತಾಗುತ್ತದೆ. ಕಾಂಗ್ರೆಸ್, ಜೆಡಿಎಸ್, ನಿವೃತ್ತ ಅಧಿಕಾರಿಗಳು ಹಿಂದ ಪರವಾಗಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರೂ ಅದು ಪ್ರತಿ ಜಿಲ್ಲೆಯಲ್ಲೂ ಬೆರಳೆಣಿಕೆಯಷ್ಟು ಮಾತ್ರ ಇರಬಹುದು. ಸಮಾವೇಶ ನಡೆಸಿ ಸಾವಿರಾರು, ಅಥವಾ ಲಕ್ಷಾಂತರ ಜನರನ್ನು ಸೇರಿಸಿದಾಕ್ಷಣ ಅವರೆಲ್ಲ ಸಂಘಟನೆ, ತನ್ನ ಬೆಂಬಲಕ್ಕೆ ಬಂದವರೆಂದು ಯಾರೂ ಭಾವಿಸಬಾರದು. ಈ ಹಿನ್ನೆಲೆಯಲ್ಲಿ ಅವರ ಈ ಸಂಘಟನೆ ಯಾವ ದೃಷ್ಟಿಕೋನದಿಂದ ನೋಡಿದರೂ ಬಿಜೆಪಿಗೆ ಪೆಟ್ಟು ಕೊಡಲೆಂದೇ ಎನ್ನುವುದು ಅರ್ಥವಾಗುತ್ತದೆ.
ಇದರಿಂದಲೇ ಬಿಎಸ್‌ವೈ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದು. ಬಿಎಸ್‌ವೈ ತಾನೇ ಮುಖ್ಯಮಂತ್ರಿ ಎಂಬ ಕನಸನ್ನು ಬಿಟ್ಟು, ಎಲ್ಲಿಯವರೆಗೆ ಎಲ್ಲ ಜಾತಿಯವರನ್ನು ಸಂಘಟಿಸುವ, ಎಲ್ಲ ವರ್ಗದವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇವರಿಬ್ಬರ ಕಲಹ ಮುಂದುವರೆಯುವುದು ನಿಶ್ಚಿತ.
Discussion about this post