ಇಸ್ಲಾಮಾಬಾದ್, ಸೆ.27: ಪಾಕ್ ಸಂಸತ್ತಿನ ಕೆಳಮನೆಯಾದ ರಾಷ್ಟ್ರೀಯ ಅಸೆಂಬ್ಲಿ ಮಹತ್ವದ ಮಸೂದೆಯೊಂದನ್ನು ಅಂಗೀಕರಿಸಿದ್ದು ಹಿಂದು ಅಲ್ಪಸಂಖ್ಯಾತರಿಗೆ ವಿವಾಹಗಳ ನೋಂದಣಿ ಹಕ್ಕನ್ನು ನೀಡಿದೆ. ಮಹಿಳೆಯರ ಹಕ್ಕುಗಳ ರಕ್ಷಣೆಯ ಗುರಿ ಹೊಂದಿರುವ ಕಾನೂನೊಂದರ ಅನುಷ್ಠಾನಕ್ಕೆ ಇದು ಕೊನೆಯ ಪ್ರಮುಖ ಅಡಚಣೆಯಾಗಿತ್ತು.
ಹಿಂದೂ ಮಹಿಳೆಯರ ವಿವಾಹಗಳನ್ನು ಎಂದೂ ಅಧಿಕೃತವಾಗಿ ಮಾನ್ಯ ಮಾಡಿಲ್ಲವಾದ ಕಾರಣ ಮತ್ತು ಆದ್ದರಿಂದ ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಸಾಧ್ಯವಿಲ್ಲದ ಕಾರಣ ಅವರನ್ನು ಅಪಹರಣ, ಬಲವಂತದ ಮತಾಂತರ ಮತ್ತು ಅತ್ಯಾಚಾರಕ್ಕೆ ಎಗ್ಗಿಲ್ಲದೆ ಗುರಿ ಮಾಡಲಾಗುತ್ತಿದೆ ಎಂದು ಹಿಂದೂ ಕಾರ್ಯಕರ್ತರು ಹೇಳುತ್ತಾರೆ.
ಹತ್ತು ತಿಂಗಳುಗಳ ಸುದೀರ್ಘ ಚರ್ಚೆ ಬಳಿಕ ಸೋಮವಾರ ರಾಷ್ಟ್ರೀಯ ಅಸೆಂಬ್ಲಿ ಮಸೂದೆಯನ್ನು ಅಂಗೀಕರಿಸಿತು. ಸೆನೆಟ್ ಕೂಡಾ ಯಾವುದೇ ಗಣನೀಯ ವಿಳಂಬವಿಲ್ಲದೆ ಕಾನೂನನ್ನು ಅಂಗೀಕರಿಸುವ ನಿರೀಕ್ಷೆ ಇದೆ. ಪಾಕಿಸ್ಥಾನದ ಮುಸ್ಲಿಂ ಬಾಹುಳ್ಯದ 19ಕೋಟಿ ಜನಸಂಖ್ಯೆಯ ಅಂದಾಜು ಶೇ.1.6ರಷ್ಟು ಹಿಂದೂಗಳಿದ್ದಾರೆ. ಆದರೆ 1947ರಲ್ಲಿ ಬ್ರಿಟನ್ ನಿಂದ ಸ್ವಾತಂತ್ರ್ಯ ಲಭಿಸಿದಂದಿನಿಂದ ತಮ್ಮ ವಿವಾಹಗಳ ನೋಂದಣಿಗೆ ಯಾವುದೇ ಕಾನೂನು ರೀತಿಯ ವ್ಯವಸ್ಥೆಗಳನ್ನು ಹೊಂದಿರಲಿಲ್ಲ. ಇನ್ನೊಂದು ಪ್ರಮುಖ ಮತೀಯ ಅಲ್ಪಸಂಖ್ಯಾತ ಸಮುದಾಯವಾದ ಕ್ರಿಶ್ಚಿಯನ್ನರು ತಮ್ಮ ವಿವಾಹಗಳನ್ನು ನಿಯಂತ್ರಿಸುವುದಕ್ಕಾಗಿ 1870ರಷ್ಟು ಹಿಂದಿನ ಬ್ರಿಟಿಷ್ ಕಾನೂನೊಂದನ್ನು ಹೊಂದಿದ್ದಾರೆ.
ಹೊಸ ಮಸೂದೆಯು ಹಿಂದೂಗಳ ವಿವಾಹಕ್ಕೆ ಕನಿಷ್ಠ ವಯೋಮಿತಿಯನ್ನು 18 ವರ್ಷಗಳೆಂದು ನಿಗದಿಪಡಿಸಿದೆ. ಇತರ ಧರ್ಮಗಳ ಜನರ ಮದುವೆಗಾಗಿ ಕಾನೂನು ಸಮ್ಮತ ಕನಿಷ್ಠ ವಯೋಮಿತಿ ಪುರುಷರಿಗೆ 18 ಮತ್ತು ಮಹಿಳೆಯರಿಗೆ 16 ವರ್ಷ ಆಗಿದೆ. ಕನಿಷ್ಠ ವಯೋಮಿತಿಗೆ ಸಂಬಂಸಿದ ಕಾನೂನನ್ನು ಉಲ್ಲಂಘಿಸಿದಲ್ಲಿ ಆರು ತಿಂಗಳುಗಳ ಜೈಲುವಾಸ ಮತ್ತು ರೂ.5,000 ದಂಡ ವಿಧಿಸಲಾಗುತ್ತದೆ. ಪಾಕಿಸ್ಥಾನದಲ್ಲಿ 20ರಿಂದ 24 ವರ್ಷ ವಯಸ್ಸಿನ ಶೇ.21ರಷ್ಟು ಮಹಿಳೆಯರು 18 ವರ್ಷಕ್ಕಿಂತ ಮೊದಲೇ ವಿವಾಹವಾದವರಾಗಿದ್ದಾರೆ ಎಂದು ಯುನಿಸೆಫ್ ಅಂದಾಜಿಸಿದೆ. ಶೇ.3ರಷ್ಟು ಮಹಿಳೆಯರು 16 ವರ್ಷ ಮೊದಲೇ ವಿವಾಹವಾದವರಾಗಿದ್ದಾರೆ.
Discussion about this post