ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೈಂದೂರು: ಈಗಾಗಲೇ ತಮ್ಮ ನೂರಾರು ಸಮಾಜಮುಖಿ ಕಾರ್ಯಗಳಿಂದ ಕರಾವಳಿ ಭಾಗದ ಜನಮಾನಸದಲ್ಲಿ ನೆಲೆಸಿರುವ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಈಗ ತೆಗೆದುಕೊಂಡಿರುವ ಮತ್ತೊಂದು ಮಹತ್ವದ ನಿರ್ಧಾರ ಇಡಿಯ ದೇಶಕ್ಕೇ ಮಾದರಿಯಾಗಿದೆ.
ಹೌದು… ಸುಕುಮಾರ ಶೆಟ್ಟಿ ಅವರು ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿದ್ದು, ನಾಲ್ಕು ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಥಮಿಕ ಹಂತದಿಂದ ಪದವಿ ಹಂತದವರೆಗೂ ಟ್ರಸ್ಟ್ ಮೂಲಕ ನಡೆಸುತ್ತಿದ್ದಾರೆ. ಬೈಂದೂರು ಕರಾವಳಿ ಭಾಗದಲ್ಲಿ ಅತ್ಯುತ್ತಮ ಹೆಸರನ್ನು ಹೊಂದಿರುವ ಈ ಶಾಲೆಗಳಲ್ಲಿ ವ್ಯವಸ್ಥೆ ಹಾಗೂ ಫೀಸ್ ನಿಗದಿ ಪಡಿಸಿರುವುದು ಇತರೆ ಶಾಲೆಗಳಿಗೆ ಮಾದರಿಯಾಗಿದೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ನಮ್ಮ ನಾಲ್ಕು ಶಾಲೆಗಳನ್ನು ಬೆಂಗಳೂರಿನ ಶಾಲೆಗಳ ಜೊತೆ ತುಲನೆ ಮಾಡಬೇಡಿ. ನಮ್ಮ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ 15-18 ಸಾವಿರ, ಪಿಯುಸಿ, ಪದವಿ ಮಕ್ಕಳಿಗೆ 20-25 ಸಾವಿರ ಫೀಸ್ ಇದೆ. ಮೂರು/ನಾಲ್ಕು ಕಂತಿನಲ್ಲಿ ಫೀಸ್ ತೆಗೆದುಕೊಳ್ಳುತ್ತೇವೆ. ಯಾವುದೇ ಪೋಷಕರಿಗೆ ಹೊರೆಯಾಗಬಾರದು ಎಂಬುದು ನಮ್ಮ ಉದ್ದೇಶ ಎಂದರು.
ಸಮಾಜದ ಕಟ್ಟಕಡೆಯ ಕುಟುಂಬದ ಮಕ್ಕಳಿಗೂ ಸಹ ಶಿಕ್ಷಣ ದೊರೆಯಬೇಕು ಎಂಬುದು ನಮ್ಮ ಉದ್ದೇಶ. ಹೀಗಾಗಿ, ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತೇವೆ. ಸ್ವಲ್ಪ ಕಷ್ಟದಲ್ಲಿ ಜೀವನ ಮಾಡುವ ಕುಟುಂಬದ ಮಕ್ಕಳಿಗೆ ಅರ್ಧ ಫೀಸ್ ತೆಗೆದುಕೊಳ್ಳುತ್ತೇವೆ. ಅನುಕೂಲ ಇರುವ ಕುಟುಂಬಸ್ಥರ ಮಕ್ಕಳಿಗೆ ಫೂರ್ತಿ ಫೀಸ್ ತೆಗೆದುಕೊಳ್ಳುತ್ತೇವೆ ಎಂದರು.
ನಮ್ಮ ಶಾಲೆ ನಡೆಸಲು ಪ್ರತಿ ತಿಂಗಳು ನಮ್ಮೆಲ್ಲಾ ವೆಚ್ಚ 45 ರೂ.ಗೂ ಅಧಿಕವಾಗಿದೆ. ಆದರೆ, ಈಗ ಕೊರೋನಾ ಪರಿಣಾಮದಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಮಂದಿ ತತ್ತರಿಸಿ ಹೋಗಿದ್ದಾರೆ. ಹೀಗಾಗಿ, ಈ ಬಾರಿ ಸುಮಾರು 70 ಲಕ್ಷ ರೂ.ಗಳಷ್ಟು ಫೀಸ್ ಮನ್ನಾ ಮಾಡಲು ನಿರ್ಧಾರ ಮಾಡಿದ್ದೇವೆ. ಬೈಂದೂರು ಗ್ರಾಮೀಣ ಭಾಗದ ಶಾಲೆ, ಇಲ್ಲಿನ ಮಕ್ಕಳನ್ನು ಪ್ರತಿಭಾವಂತರನ್ನು ಮಾಡುವ ಗುರಿ ಇಟ್ಟುಕೊಂಡಿದ್ದೇವೆ ಎಂದರು.
ಕ್ಷೇತ್ರದ ನಗರ ಪ್ರದೇಶ ಮಾತ್ರವಲ್ಲ, ಗ್ರಾಮೀಣ ಭಾಗದಲ್ಲೂ ಹಿಂದೆಂದೂ ಕಾಣದಂತಹ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮಾಡುತ್ತಿರುವ ಶಾಸಕ ಸುಕುಮಾರ ಶೆಟ್ಟಿ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ಕಡುಬಡ ಕುಟುಂಬದ ಮಕ್ಕಳಿಗೂ ಸಹ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಸದುದ್ದೇಶವನ್ನು ಕಾರ್ಯರೂಪಕ್ಕೆ ತರುತ್ತಿರುವುದು ಇಡಿಯ ದೇಶಕ್ಕೇ ಮಾದರಿಯಾಗಿದೆ.
Get In Touch With Us info@kalpa.news Whatsapp: 9481252093
Discussion about this post