ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಬಿಜೆಪಿ ಸಂಘಟನೆ ಬಹಳ ಶಕ್ತಿಶಾಲಿಯಾಗಿದೆ. ಬೂತ್ ಮಟ್ಟದಲ್ಲಿ ಸಂಘಟನೆ ಬಲವಾಗಿದ್ದು, ನಾವೇ ಈ ಬಾರಿ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ನಮ್ಮ ಶಕ್ತಿ ಪ್ರದರ್ಶನ ಈಗಾಗಲೇ ಆಗಿ ಹೋಗಿದೆ. ಜನರು ಬಿಜೆಪಿ ಪರವಾಗಿದ್ದಾರೆ. ಈ ಬಾರಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸಂಘಟನೆ ರಾಜ್ಯದಲ್ಲಿ ಗಟ್ಟಿಯಾಗಿದೆ. 224 ಕ್ಷೇತ್ರಗಳಲ್ಲಿ ಸಂಘಟನೆ ಮಾಡಿಕೊಂಡು ಬರಲಾಗಿದೆ. ಚುನಾವಣೆಯಲ್ಲಿ ಪೂರ್ಣ ಬಹುಮತ ಬರಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ಈಗಾಗಲೇ ಶಕ್ತಿ ಪ್ರದರ್ಶನ ಮಾಡಿದ್ದೇವೆ ಎಂದರು.
ಬಿಜೆಪಿ ಹಿರಿಯ ಮುಖಂಡ ಜಗದೀಶ್ ಶೆಟ್ಟರ್ ರಾಜಿನಾಮೆ ವಿಚಾರ ಪ್ರತಿಕ್ರಿಯಿಸಿದ ಈಶ್ವರಪ್ಪ, ನಾನು ಯಾರನ್ನೂ ಟೀಕೆ ಮಾಡುವುದಿಲ್ಲ. ಪಕ್ಷ ನನ್ನ ತಾಯಿ ಇದ್ದ ಹಾಗೆ. ಭಾರತಾಂಬೆ, ಬಿಜೆಪಿ ನಮ್ಮ ತಾಯಿ ಇದ್ದಹಾಗೆ. ಅವಕಾಶ ಸಿಕ್ಕವರು ಜನಪ್ರತಿನಿಧಿಯಾಗುತ್ತಾರೆ. ಚುನಾಯಿತ ಮತ್ತು ಜನಪ್ರತಿನಿಧಿಗಳಿಗೆಲ್ಲಾ ಅವಕಾಶ ಸಿಗಬೇಕೆಂದೇನು ಇಲ್ಲ. ಸಾಮಾನ್ಯ ಕಾರ್ಯಕರ್ತರಂತೆ ಎಲ್ಲರೂ ಇರಬೇಕು. ಬಿಜೆಪಿಯಿಂದ ಹೊರಹೋಗದಂತೆ ಅವರ ಮನವೊಲಿಸಲು, ಒಪ್ಪಿಸಲು ಪ್ರಯತ್ನ ಮಾಡಿದ್ದೇವೆ. ತಾಯಿಯನ್ನು ಒದ್ದು ಹೋಗುತ್ತೇನೆ ಎಂಬ ಮನೋಭಾವ ನಾವು ಕ್ಷಮಿಸುವುದಿಲ್ಲ ಎಂದರು.
ಬಿಜೆಪಿ ನಮ್ಮ ತಾಯಿ ಇದ್ದಂತೆ. ಭಾರತಾಂಬೆಯನ್ನು ಶ್ರೇಷ್ಠ ಮಟ್ಟಕ್ಜೆ ಕರೆದೊಯ್ಯುವ ಕಲ್ಪನೆ ಬಿಜೆಪಿ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಸಹಿತ ಎಲ್ಲರೂ ಪಕ್ಷದ ಸಾಮಾನ್ಯ ಕಾರ್ಯಕರ್ತರು. ಬಿಜೆಪಿ ಸಿದ್ಧಾಂತ ಮರೆತು ನಾನು ಎಂಬ ಮಾತು ಬಂದಾಗ ಪರೀಕ್ಷೆ ಎದುರಾಗುತ್ತದೆ. ಬಿಜೆಪಿ ಬಿಡುವವರನ್ನು ಟೀಕೆ ಮಾಡುವುದಿಲ್ಲ. ಯಾರು ಪಕ್ಷ ಬಿಡುತ್ತಾರೋ ಅಂಥವರನ್ನು ಮನವೊಲಿಸುವ ಕಾರ್ಯ ಆಗಬೇಕು. ಕಾರ್ಯಕರ್ತರು ಈ ನಿಟ್ಟಿನಲ್ಲಿ ಮುಂದಾಗಬೇಕು. ಯಾವುದನ್ನೂ ಉಪೇಕ್ಷಿಸುವುದು ಸರಿಯಲ್ಲ. ಯಾವುದೇ ಒಬ್ಬ ವ್ಯಕ್ತಿ ಮೇಲೆ ಪಕ್ಷ ನಿಂತಿಲ್ಲ. ಸಿದ್ಧಾಂತ, ವಿಚಾರದ ಮೇಲೆ ಪಕ್ಷ ನಿಂತಿದೆ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ನಾನು ಯಾವುದೇ ಅಧಿಕಾರದ ಆಸೆ ಹೊಂದಿಲ್ಲ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಸೋಲಿಸಿದೆ. ಟಿಕೆಟ್ ನೀಡದೆ ಅವರನ್ನು ನಿರಾಸೆ ಮಾಡಿದೆ. ವರುಣಾದಲ್ಲಿ ಅವರನ್ನು ಬಿಜೆಪಿ ಸೋಲಿಸುತ್ತದೆ ಎಂದು ಭವಿಷ್ಯ ನುಡಿದರು.
ತಮಗೆ ಬೆದರಿಕೆ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಶಾಹಿರ್ ಶೇಖ್ ಎಂಬಾತ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೂ ಕೊಲೆ ಬೆದರಿಕೆಯೊಡ್ಡಿದ್ದ. ವಿಚಾರಣೆ ವೇಳೆ ನನ್ನನ್ನು ಟಾರ್ಗೆಟ್ ಮಾಡಿರುವುದು ಗಮನಕ್ಕೆ ಬಂದಿದೆ. ಈ ಪ್ರಕರಣ ಎನ್ಐಎ ಗೆ ವಹಿಸಲಾಗುತ್ತಿದೆ. ಸರ್ಕಾರ ನನಗೆ ಸೂಕ್ತ ಭದ್ರತೆ ನೀಡುವುದಾಗಿ ಹೇಳಿದೆ. ಇಂತಹ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದರು.

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಮೀಕ್ಷೆ, ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡುತ್ತಿದೆ. ನಾಳೆಯೊಳಗೆ ಮೂರನೇ ಪಟ್ಟಿ ಬಿಡುಗಡೆ ಆಗಲಿದೆ. ಸೂಕ್ತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುತ್ತದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















