ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಶ್ರೀ ಕ್ಷೇತ್ರ ಹೊಂಬುಜ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆ.5 ರ ಸೋಮವಾರ ಹೊಂಬುಜದ ಅಭಿಷ್ಠ ಪ್ರಸಾದ ನಿಲಯ ಸಭಾಂಗಣದಲ್ಲಿ ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ, ಅನುದಾನ, ಅನುದಾನ ರಹಿತ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಿಗೆ ಭಾಷೆ-ಸಾಹಿತ್ಯ ರಸಗ್ರಹಣ ಶಿಬಿರ ಏರ್ಪಡಿಸಲಾಗಿದೆ.
ಬೆಳಗ್ಗೆ 09:30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಹೊಂಬುಜದ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಉದ್ಘಾಟಿಸಲಿದ್ದಾರೆ. ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಹಾಗೂ ಸಂಶೋಧಕ ಡಾ.ಎಸ್.ಪಿ. ಪದ್ಮಪ್ರಸಾದ್ ಅವರು ಸಾಹಿತ್ಯದ ಓದು ಮತ್ತು ರಸಗ್ರಹಣ ವಿಚಾರವಾಗಿ ಮಾತನಾಡಲಿದ್ದಾರೆ.
Also read: ತುಂಗಾ ಜಲಾಶಯ ಸುತ್ತಮುತ್ತ ನಿಷೇದಾಜ್ಞೆ ಜಾರಿ: ಜಿಲ್ಲಾಧಿಕಾರಿ ಆದೇಶ
ಗೋಷ್ಠಿ 1 ರಲ್ಲಿ ಪ್ರಾಚೀನ ಕಾವ್ಯ ಓದು-ವಿಶ್ಲೇಷಣೆ ವಿಚಾರವಾಗಿ ವಿಶ್ರಾಂತ ಪ್ರಾಂಶುಪಾಲ ಡಾ.ಬಿ.ಎಂ. ಜಯಶೀಲ ಮಾರ್ಗದರ್ಶನ ಮಾಡಲಿದ್ದಾರೆ. ಗೋಷ್ಠಿ 2 ರಲ್ಲಿ ವ್ಯಾಕರಣ ಮತ್ತು ಭಾಷಾ ಸೌಂದರ್ಯ ವಿಚಾರವಾಗಿ ಹಿರಿಯ ಸಾಹಿತಿ ಡಾ. ಶಾಂತಾರಾಮ್ ಪ್ರಭು ಮಾರ್ಗದರ್ಶನ ನೀಡಲಿದ್ದಾರೆ. ಗೋಷ್ಠಿ 3 ರಲ್ಲಿ ಕಥೆ, ಪ್ರಬಂಧ, ಪ್ರವಾಸ ಸಾಹಿತ್ಯ, ವೈಚಾರಿಕತೆ ಪಾಠಗಳನ್ನು ಓದುವ ಕ್ರಮ, ವಿಶ್ಲೇಷಣೆ, ಸಾರಗೊಳಿಸುವುದು ವಿಚಾರವಾಗಿ ಅಂಕಣಕಾರ ಬಿ.ಚಂದ್ರೇಗೌಡ ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್, ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ, ಕಸಾಪ ತಾಲ್ಲೂಕು ಅಧ್ಯಕ್ಷರಾದ ತ.ಮ.ನರಸಿಂಹ, ತೀರ್ಥಹಳ್ಳಿ ತಾ. ಕಸಾಪ ಅಧ್ಯಕ್ಷರಾದ ಟಿ.ಕೆ. ರಮೇಶ್ ಶೆಟ್ಟಿ, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮತ್, ಕರ್ನಾಟಕ ಜಾನಪದ ಪರಿಷತ್ತು ತಾ. ಅಧ್ಯಕ್ಷ ಎಂ. ಎಂ. ಪರಮೇಶ್, ತಾ.ಕಸಾಸಾಂ ವೇದಿಕೆ ಅಧ್ಯಕ್ಷ ರಾಘವೇಂದ್ರ ನಗರ, ತೀರ್ಥಹಳ್ಳಿ ತಾ.ಕಸಾಸಾಂ ವೇದಿಕೆ ಅಧ್ಯಕ್ಷ ರೇಣುಕಾ ಹೆಗಡೆ ಬಿ. ಎಂ., ಹೊಸನಗರ ತಾಲೂಕಿನ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಎನ್.ಡಿ. ಹೆಗಡೆ, ತೀರ್ಥಹಳ್ಳಿ ತಾಲ್ಲೂಕಿನ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಸ್. ವೀರೇಶ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಶಿಕ್ಷಕರಿಗೆ ಇಲಾಖೆಯ ವತಿಯಿಂದ ಓಓಡಿ ಸೌಲಭ್ಯ ನೀಡಲಾಗಿದೆ ಎಂದು ಕಸಾಪ ಅಧ್ಯಕ್ಷ ಡಿ.ಮಂಜುನಾಥ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















