ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಆರ್ಥಿಕವಾಗಿಯೂ ದಿವಾಳಿಯಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ರಾಜ್ಯದ ಗುತ್ತಿಗೆದಾರರಿಗೆ ಕಾಮಗಾರಿಗಳ ಪೂರ್ಣಹಣವನ್ನು ಪಾವತಿಸಲು ಆಗದಷ್ಟು ದಿವಾಳಿಯಾಗಿದೆ. ಗುತ್ತಿಗೆದಾರರು ಹಲವು ಭಾರಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದರೂ ಸಹ ಮುಖ್ಯಮಂತ್ರಿಗಳು ನಿಸ್ಸಾಹಕರಾಗಿದ್ದಾರೆ ಎಂದು ಟೀಕಿಸಿದರು.
ಲೋಕೋಪಯೋಗಿ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಸುಮಾರು 37,000 ಕೋಟಿ ಹಣ ಪಾವತಿಯಾಗಬೇಕಾಗಿದೆ. ಈ ಹಣ ಬಿಡುಗಡೆಯಾಗದೆ ಗುತ್ತಿಗೆದಾರರು ಅತ್ಯಂತ ಸಂಕಷ್ಟಕ್ಕೆ ತಲುಪಿದ್ದು, ಸರ್ಕಾರದ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಹಣಬರುವ ಗ್ಯಾರೆಂಟಿಯೂ ಇಲ್ಲವಾಗಿ ಟೆಂಡರ್ ಹಾಕುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಇದಕ್ಕೆ ಶಿವಮೊಗ್ಗದ್ದೇ ಉದಾಹರಣೆ ಎಂದರೆ ಯಲವಟ್ಟಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಯಾವ ಗುತ್ತಿಗೆದಾರನು ಟೆಂಡರ್ ಹಾಕಿಲ್ಲ ಎಂದರು.
ರಾಜ್ಯ ಸರ್ಕಾರ ಈ ನಡುವೆ ಮತ್ತೊಂದು ಹೊಸ ಪದ್ಧತಿಯನ್ನು ಜಾರಿಗೆ ತರಲು ಹೊರಟಿದೆ. ರಾಜ್ಯದ ಎಲ್ಲಾ ಟೆಂಡರ್ ಪ್ರಕ್ರಿಯೆಗಳು ಕೇಂದ್ರೀಕೃತ ವ್ಯವಸ್ಥೆಯಲ್ಲಿಯೇ ಆಗಬೇಕು ಎಂದಿದ್ದಾರೆ. ಇದು ಸ್ಥಳೀಯ ಗುತ್ತಿಗೆದಾರರಿಗೆ ಮಾರಕವಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಬೇರೆ ರಾಜ್ಯದ ಗುತ್ತಿಗೆದಾರರು ಬಂದರೆ ರಾಜ್ಯದ ಗುತ್ತಿಗೆದಾರರಿಗೆ ಅವಕಾಶವೇ ಇಲ್ಲದಂತಾಗಿ ಕನ್ನಡಿಗರಿಗೆ ತೊಂದರೆಯಾಗುತ್ತದೆ. ಮತ್ತು ಕೇಂದ್ರೀಕೃತ ವ್ಯವಸ್ಥೆಯಾದರೆ ಭ್ರಷ್ಟಾಚಾರವೇ ಒಟ್ಟುಗೂಡಿದಂತಾಗುತ್ತದೆ ಎಂದರು.
ಈಗಾಗಲೇ ರಾಜ್ಯದ ಗುತ್ತಿಗೆದಾರರು ಮಾ.3ರಂದು ರಾಜ್ಯಮಟ್ಟದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಹಿಂದಿನ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡಿ, ಅಧಿಕಾರಕ್ಕೆ ಬಂದ ಈಗಿನ ಕಾಂಗ್ರೆಸ್ ಸರ್ಕಾರ ತಾನೇ ನೇಮಿಸಿದ ನ್ಯಾಯಮೂರ್ತಿ ನಾಗಮೋಹನ್ದಾಸ್ ತನಿಖಾ ಆಯೋಗ ಕಾಂಗ್ರೆಸ್ ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲವೆಂದು ನೀಡಿರುವ ವರದಿಯನ್ನು ಕಣ್ಣುತೆರೆದು ನೋಡುವ ಕೆಲಸವನ್ನು ಮಾಡಿಲ್ಲ. ಹಿಂದಿನ ಸರ್ಕಾರದಿಂದ ತಪ್ಪಾಗಿದೆ ಎಂದು ಹೇಳುತ್ತಲೇ ಇರುವುದು ವಿಪರ್ಯಾಸ ಎಂದರು.
ಮುಸ್ಲಿಂರು ಭಾರತದಲ್ಲಿ ಮಾತ್ರ ಸುರಕ್ಷಿತವಾಗಿದ್ದಾರೆ. ಆದರೆ ಇದನ್ನು ಅರಿಯದ ಮುಸ್ಲಿಂರು ಇರಾನ್ ದೇಶಕ್ಕೆ ಬೆಂಬಲ ನೀಡುವುದು ಅಲ್ಲಿನ ನಾಯಕ ಅಲಿ ಖಮೇನಿ ಹತ್ಯೆಯನ್ನು ವಿರೋಧಿಸುವುದು, ಸಂತಾಪ ವ್ಯಕ್ತಪಡಿಸುವುದು, ಮೋದಿ ವಿರುದ್ಧ ಮಾತನಾಡುವುದು ಇವೆಲ್ಲವೂ ಖಂಡನೀಯವಾದುದು. ಇರಾನ್ ಪಾಕಿಸ್ತಾನವನ್ನು ಬೆಂಬಲಿಸಿರುವುದನ್ನು ನಾವು ನೋಡಿದ್ದೇವೆ. ಅದು ಕಾಶ್ಮೀರದ ಮುಸ್ಲಿಂರ ಪರವಾಗಿಯೇ ಇತ್ತು. ಭಾರತದಲ್ಲಿ 370ನೇ ಕಾಯ್ದೆಯನ್ನು ರದ್ದುಪಡಿಸಿದಾಗ ವಿರೋಧ ವ್ಯಕ್ತಪಡಿಸುತಿತ್ತು. ಪೆಹಲ್ಗಾಮ್ನಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದು 26 ಜನರನ್ನು ಕೊಂದಾಗ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಭಾರತದ ಮೇಲಾಗುವ ಯಾವ ದಾಳಿಯನ್ನು ಅವರು ಖಂಡಿಸುವುದಿಲ್ಲ ಅಂತಹ ದೇಶಕ್ಕೆ ನಮ್ಮ ಭಾರತದ ಮುಸ್ಲಿಂರು ಸಹಕಾರ ನೀಡುವುದು, ಘೋಷಣೆ ಹಾಕುವುದು ಎಷ್ಟರಮಟ್ಟಿಗೆ ಸರಿ. ಈ ದೇಶದ ನೀರು, ಗಾಳಿ ಸೇವಿಸಿದ ದೇಶದ್ರೋಹಿ ಮುಸ್ಲಿಂರು ಈ ಬಗ್ಗೆ ಯೋಚಿಸಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಈ. ಕಾಂತೇಶ್, ಮಹಾಲಿಂಗಯ್ಯಶಾಸ್ತ್ರೀ, ಮೋಹನ್ ಜಾದವ್, ಮಧುಸೂದನ್, ಕುಬೇರಪ್ಪ, ಚನ್ನಬಸಪ್ಪ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















