ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ರಾಷ್ಟ್ರೀಯ ಸಮಗ್ರತೆ, ಭದ್ರತೆ ವಿಷಯಗಳನ್ನು ಮೈಗೂಡಿಸಿಕೊಂಡು ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುವ ಕೋರ್ಸ್‍ಗಳಿಗೆ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯವು 2026-27ನೇ ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನಿಸಿದೆ ಎಂದು ರಕ್ಷಾ ವಿಶ್ವವಿದ್ಯಾಲಯದ Raksha University ಶಿವಮೊಗ್ಗ ಕ್ಯಾಂಪಸ್‍ನ ನಿರ್ದೇಶಕಿ ಡಾ.ಕಾವೇರಿ ಟಂಡನ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಮ್ಮ ವಿಶ್ವವಿದ್ಯಾಲಯವು ರಾಷ್ಟ್ರೀಯ ಭದ್ರತೆ, ಪೊಲೀಸ್ ವ್ಯವಸ್ಥೆ, ಅಪರಾಧ ಶಾಸ್ತ್ರ, ವಿಧಿ-ವಿಜ್ಞಾನ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಭದ್ರತಾ ನಿರ್ವಹಣೆಯಲ್ಲಿ ನಾಲ್ಕು ವರ್ಷದ ಬಿಎ, ಬಿಎಸ್ಸಿ ಪದವಿ ನೀಡುತ್ತಿದ್ದು, ರಕ್ಷಣಾ ಮತ್ತು ಕಾರ್ಯತಂತ್ರದ ಅಧ್ಯಯನದಲ್ಲಿ ಎರಡು ವರ್ಷದ ಎಂಎ., ಎಂಎಸ್ಸಿ., ಅಪರಾಧ ಶಾಸ್ತ್ರ ಮತ್ತು ವಿಧಿ-ವಿಜ್ಞಾನದಲ್ಲಿ ಎಂಎ, ಎಂಎಸ್ಸಿ, ಅನ್ವಯಿಕ ಮನೋವಿಜ್ಞಾನದಲ್ಲಿ ಎಂಎಸ್ಸಿ ಪದವಿಯನ್ನು ನೀಡಲಾಗುತ್ತದೆ. ಪಠ್ಯಕ್ರಮವು ಅಂತರ್ ಶಿಸ್ತೀಯವಾಗಿದ್ದು, ರಾಷ್ಟ್ರೀಯ ಭದ್ರತೆ ಮತ್ತು ಕಾನೂನು ಜಾರಿಗಳ ಸಂಬಂಧಿಸಿದಂತೆ ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಶೇ.60ರಷ್ಟು ತರಗತಿ ಪಾಠಗಳು ಶೇ.40 ಕ್ಷೇತ್ರಾಧ್ಯಯನ ಮತ್ತು ಪ್ರಯೋಗಾಲಯಕ್ಕೆ ಸಂಬಂಧಿಸಿದ್ದಿರುತ್ತದೆ ಎಂದರು.
ಈ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳು ಸಾರಿಗೆ ಇಲಾಖೆ, ಮೀಸಲು ಪೊಲೀಸ್ ಪಡೆ, ನೌಕಾ ಅಕಾಡೆಮಿಗಳಂತಹ ಸ್ಥಳಗಳಿಗೆ ಕ್ಷೇತ್ರ ಕಾರ್ಯಕ್ಕಾಗಿ ಕಳುಹಿಸಲಾಗುವುದು. ಅಲ್ಲದೆ ಇದರ ಭಾಗವಾಗಿ ಕಾನೂನು ಜಾರಿ ನಿರ್ದೇಶನಾಲಯಗಳೊಂದಿಗೆ ಸಕ್ರೀಯವಾಗಿ ಸಂಪರ್ಕ ಕಲ್ಪಿಸಿಕೊಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಹ ನಿರ್ದೇಶಕರಾದ ನಂದಕುಮಾರ್ ಪಾಜಂ, ಡಾ.ಶಿವಲಿಂಗಪ್ಪ ಅಂಗಡಿ, ಪ್ರಸನ್ನಕುಮಾರ್, ಹರ್ಷಿತಾ ಮಿಶ್ರಾ, ಡಾ.ಅನಿಲ್‍ಕುಮಾರ್, ಆಡಳಿತಾಧಿಕಾರಿ ವೆಂಕಟೇಶ್‍ರಾವ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
