ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾರ್ವಜನಿಕರ ಆರೋಗ್ಯ ಕಾಳಜಿಯಲ್ಲಿ ಶಿವಮೊಗ್ಗ ದೊಡ್ಡ ಹೆಜ್ಜೆ ಇಟ್ಟಿದ್ದು ಅದಕ್ಕೆ ಪೂರಕವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ Nirmala Sitharaman ಅವರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ನೀಡಿದ 5 ಕೋಟಿ ರೂ.ಅನುದಾನದಲ್ಲಿ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಆರೈಕೆಗಾಗಿ ಹೆಚ್ಚುವರಿ 30 ಹಾಸಿಗೆಗಳ ಘಟಕವನ್ನು ಸ್ಥಾಪಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ತಿಳಿಸಿದರು.
ಅವರು ಇಂದು ಮೆಗ್ಗಾನ್ ಆಸ್ಪತ್ರೆಯಲ್ಲಿ MecGann Hospital ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಘಟಕದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 60 ಲಕ್ಷ ರೂ. ಹಾಗೂ ವೈದ್ಯಕೀಯ ಉಪಕರಣಗಳ ಖರೀಧಿಗೆ 4 ಕೋ.40 ಲಕ್ಷ ರೂ.ಗಳನ್ನು ವಿನಿಯೋಗಿಸಲಾಗುವುದು. ನಗರದ ಬಡ ಹಾಗೂ ಗ್ರಾಮೀಣ ಭಾಗದ ಜನತೆಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ. ತಾವು ಮನವಿ ಮಾಡಿ ಒಂದೇ ವಾರದಲ್ಲಿ ಹಣಕಾಸು ಸಚಿವರು ಒಪ್ಪಿಗೆ ನೀಡಿ ಒಂದು ಸಾಲಿನ ಪೂರ್ತಿ ಅನುದಾನವನ್ನು ನಮಗೇ ನೀಡಿದ್ದಕ್ಕಾಗಿ ಅವರನ್ನು ಕ್ಷೇತ್ರದ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಘಟಕ ಸ್ಥಾಪನೆಗೆ ಮಂಜೂರಿ ಸಿಕ್ಕಿದ್ದರಿಂದ ಅಪರ ಜಿಲ್ಲಾಧಿಕಾರಿಗಳು ಆರ್.ಡಿ.ಪಿ.ಆರ್.ಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಿದ್ದಾರೆ. ಐಸಿಯುಗಿಂತ ಈ ಎನ್.ಐ.ಸಿ.ಯು. ಘಟಕ ಅತ್ಯಂತ ಸೂಕ್ಷ್ಮವಾಗಿದ್ದು ವಿಶೇಷ ಕಾಳಜಿ ತೆಗೆದುಕೊಳ್ಳಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ. ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಅಳವಡಿಕೆಗೆ ಸೂಚಿಸಲಾಗಿದೆ ಎಂದ ಅವರು ಸೋಲಾರ್ ಎನರ್ಜಿ ಕಾರ್ಪೋರೇಷನ್ನಿನ ಸಿಎಸ್‍ಆರ್ ನಿಧಿಯಿಂದ ನಗರದಲ್ಲಿರುವ ಶಾರದಾ ಅಂಧರ ವಿಕಾಸ ಶಾಲೆಗೆ 23 ಲಕ್ಷ ರೂ.ವೆಚ್ಚದಲ್ಲಿ ಸೋಲಾರ್ ಅಳವಡಿಸಲಾಗುವುದು. ಅಲ್ಲದೆ ಪ.ಜಾ.ಪ.ಪಂ.ಗಳ ಕುಟುಂಬಗಳು ವಾಸಿಸುವ ಒಂದು ಸಾವಿರ ಗ್ರಾಮಗಳಿಗೆ ಒಎನ್‍ಜಿಸಿಯಿಂದ ಸೋಲಾರ್ ಅಳವಡಿಸಲಾಗುವುದು. ಈಗಾಗಲೇ ಗ್ರಾಮಗಳನ್ನು ಗುರುತಿಸಲಾಗಿದೆ ಎಂದ ಅವರು 600 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸುವ ಕೆಲಸವೂ ನಡೆಯಲಿದೆ. ಈ ಬಾರಿ ಇದಕ್ಕೆ ಬೈಂದೂರು ಕ್ಷೇತ್ರವನ್ನು ಆಯ್ಕೆ ಮಾಡಲಾಗಿದೆ ಎಂದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವೈದ್ಯಕೀಯ ಕಾಲೇಜನ್ನು ಇಲ್ಲಿ ಸ್ಥಾಪಿಸಲಾಯಿತು. 50 ಕೋ.ರೂ.ವೆಚ್ಚದಲ್ಲಿ ಬೆಂಗಳೂರಿನ ಕಿದ್ವಾಯಿ ಮಾದರಿಯ ಕ್ಯಾನ್ಸರ್ ಚಿಕಿತ್ಸಾ ಘಟಕ ನಿರ್ಮಾಣವಾಗುತ್ತಿದೆ. ಆಸ್ಪತ್ರೆಯಲ್ಲಿ ಶೇ.50 ರಷ್ಟು ಶಿಕ್ಷಕೇತರ ಹುದ್ದೆಗಳು ಖಾಲಿ ಇವೆ. ಅವನ್ನು ರಾಜ್ಯ ಸರ್ಕಾರ ಶೀಘ್ರ ತುಂಬಬೇಕು. ಫ್ರೀಡಂ ಪಾರ್ಕ್ ಅಥವಾ ಅರಣ್ಯ ಡಿಪೋ ಇರುವ ಜಾಗದಲ್ಲಿ ಇನ್ನೊಂದು ಜಿಲ್ಲಾ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ಸ್ಥಾಪಿಸಬೇಕು. ಸಿಮ್ಸ್, ಆಸ್ಪತ್ರೆ ಸಿಬ್ಬಂದಿಗಳು ಬಹಳ ಎಚ್ಚರಿಕೆಯಿಂದ ಕರ್ತವ್ಯ ನಿಭಾಯಿಸಬೇಕು ಎಂದು ಸಲಹೆ ನಿಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಡಾ.ವಿರೂಪಕ್ಷಪ್ಪ, ಡಾ.ತಿಮ್ಮಪ್ಪ, ಡಾ.ಗೀತಾ, ಡಾ.ರಮೇಶ್ ಬಾಬು, ಡಾ.ನಟರಾಜ್, ಕಿರಣ, ಡಾ.ಉಮಾ ಸದಾಶಿವ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















