ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬುರ್ಖಾ ಧರಿಸಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಯುವಕರನ್ನು ಸಾರ್ವಜನಿಕರು ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ ಘಟನೆ ಶಿವಮೊಗ್ಗ ನಗರದ ಕೆ.ಆರ್.ಪುರಂ ರಸ್ತೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಏನಿದು ಪ್ರಕರಣ?:
ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ಇರುವ ವಿಚಾರಣಾಧೀನ ಕೈದಿಯೋರ್ವನೇ ಈ ಪ್ರಕರಣದ ಸೂತ್ರಧಾರನಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜೈಲಿನಲ್ಲಿ ಇರುವ ತನ್ನನ್ನು ಭೇಟಿ ಮಾಡಲು ಪತ್ನಿ ಬಾರದಿರುವುದು ಹಾಗೂ ಖರ್ಚಿಗೆ ಹಣ ನೀಡದಿರುವುದರಿಂದ ಅಸಮಾಧಾನಗೊಂಡಿದ್ದನು.
ಈ ಹಿನ್ನೆಲೆ, ಕೆ.ಆರ್.ಪುರಂ ರಸ್ತೆಯಲ್ಲಿ ವಾಸಿಸುವ ತನ್ನ ಪತ್ನಿಗೆ ಬೆದರಿಕೆ ಹಾಕಲು ತನ್ನ ಪರಿಚಯದ ನಾಲ್ವರು ಯುವಕರನ್ನು ಕಳುಹಿಸಿದ್ದಾನೆ. ಆರೋಪಿಗಳು ಬುರ್ಖಾ ಧರಿಸಿ ಮಹಿಳೆಯ ಮನೆ ಸಮೀಪಕ್ಕೆ ತೆರಳಿದ್ದರು.
ಈ ವೇಳೆ ಅವರ ವರ್ತನೆ ಅನುಮಾನಾಸ್ಪದವಾಗಿದೆ ಎಂದು ಗಮನಿಸಿದ ಸ್ಥಳೀಯರು ಅವರನ್ನು ಅಡ್ಡಗಟ್ಟಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಅವರು ಮಹಿಳೆಯರಲ್ಲ ಎಂಬುದು ಬೆಳಕಿಗೆ ಬಂದಿದೆ.
ಇದರಿಂದ ಮತ್ತಷ್ಟು ಅನುಮಾನಗೊಂಡ ಸಾರ್ವಜನಿಕರು ಆರೋಪಿಗಳಿಗೆ ಧರ್ಮದೇಟು ನೀಡಿದ್ದಾರೆ. ಈ ವೇಳೆ ಒಬ್ಬನು ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ದೊಡ್ಡಪೇಟೆ ಪೊಲೀಸ್ ಠಾಣೆ ಸಿಬ್ಬಂದಿ ಮೂವರು ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸರ ವಿಚಾರಣೆ ವೇಳೆ, ಸೆಂಟ್ರಲ್ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯ ಸೂಚನೆಯ ಮೇರೆಗೆ ಆತನ ಪತ್ನಿಗೆ ಬೆದರಿಕೆ ಹಾಕಲು ಬಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















