ಕಲ್ಪ ಮೀಡಿಯಾ ಹೌಸ್ | ಸೊರಬ |
ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಪಿಎಸ್ಐ ಎಂ.ಎಚ್. ನವೀನ್ ಹೇಳಿದರು.
ಪಟ್ಟಣದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಆವರಣದಲ್ಲಿ ಪರಿಸರ ದಿನಾಚರಣೆ ಹಾಗೂ ಕುಸ್ತಿ ಪೈಲ್ವಾನ್ ಲಿಂಗರಾಜ್ ಹಳೇಸೊರಬ ಅವರ ಜನ್ಮ ದಿನದ ನಿಮಿತ್ತ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರ ಎಲ್ಲದನ್ನು ನೀಡಿದೆ. ಆದರೆ, ಪ್ರಸ್ತುತ ದಿನಮಾನದಲ್ಲಿ ಪ್ರಕೃತಿಯನ್ನು ಹಾಳುಮಾಡುವತ್ತ ಮನುಕುಲ ಸಾಗಿದೆ. ಆದರೆ, ಕುಸ್ತಿ ಪೈಲ್ವಾನ್ ಲಿಂಗರಾಜ್ ಹಳೇ ಸೊರಬ ಅವರು ಜನ್ಮದಿನದಂದು ಗಿಡ ನೆಡುವ ಮೂಲಕ ವಿಷೇಶವಾಗಿ ಜನ್ಮದಿನ ಆಚರಿಸುತ್ತಿದ್ದಾರೆ. ಇದು, ಇತರರಿಗೆ ಮಾದರಿಯಾಗಿದೆ. ಜನ್ಮದಿನದಂದು ಕೇಕ್ ಕತ್ತರಿಸುವ ಬದಲು ಗಿಡ ನೆಟ್ಟು ಪೋಷಿಸುವುದು ಒಂದು ಉತ್ತಮ ಅಭ್ಯಾಸ ಎಂದರು.
ಕುಸ್ತಿ ಪೈಲ್ವಾನ್ ಲಿಂಗರಾಜ ಹಳೇಸೊರಬ ಮಾತನಾಡಿ, ಜನ್ಮದಿನವನ್ನು ದುಂದು ವೆಚ್ಚ ಮಾಡಿ ಆಚರಿಸಿಕೊಳ್ಳುವ ಬದಲು ಹಣ್ಣಿನ ಗಿಡಗಳನ್ನು ನೆಟ್ಟರೆ ಮುಂದಿನ ಪೀಳಿಗೆಗೆ, ಪರಿಸರಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೂ ಅನುಕೂಲವಾಗಲಿದೆ. ಪೊಲೀಸ್ ಠಾಣೆ ಆವರಣ, ಸರ್ಕಾರಿ ಕಚೇರಿಗಳು, ತಾವು ಓದಿ ಬೆಳೆದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹೀಗೆ ಸುಮಾರು 20 ಪ್ರದೇಶಗಳಲ್ಲಿ ಹಲಸಿನ ಹಣ್ಣಿನ ಗಿಡಗಳನ್ನು ನೆಡಲಾಗುತ್ತಿದೆ. ಇತ್ತೀಚೆಗೆ ವಿಳರವಾಗುತ್ತಿರುವ ಚಂದ್ರಬಕ್ಕೆ ಹಲಸಿನ ಗಿಡಗಳನ್ನು ನೆಡಲಾಗುತ್ತಿದ್ದು, ಗಿಡಗಳನ್ನು ನೆಡುವುದು ಮಾತ್ರವಲ್ಲ ಪೋಷಣೆಯ ಜವಾಬ್ದಾರಿಯನ್ನು ತಗೆದುಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹೆಡ್ ಕಾನ್ಸ್‌ಟೇಬಲ್ ವೀರೇಶ್, ಸಿಬ್ಬಂದಿ ರಾಘವೇಂದ್ರ, ಲೋಕೇಶ್, ವಿನಯ್, ಸಿ.ಬಿ. ರವೀಂದ್ರ, ಅಭಿಷೇಕ್, ಗಿರೀಶ್, ರಾಜು ನಾಯ್ಕ್, ಸೋಮನಾಯ್ಕ್, ಅರುಣ್, ದಿನೇಶ್, ಮೋಹನ್, ಸೇರಿದಂತೆ ಪ್ರಮುಖರಾದ ಮಾಲತೇಶ ಬಂದಿಗೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















