ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ತಾಲೂಕಿನ ಗ್ರಾಮವೊಂದರ ಯುವತಿಗೆ ಕೇರಳ ಲಾಟರಿ ಬಂದಿದೆ ಎಂದು ನಂಬಿಸಿ ಸೈಬರ್ ವಂಚಕರು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ತಾಲೂಕಿನ ಗ್ರಾಮವೊಂದರ ಯುವತಿಯ ಮೊಬೈಲ್ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದವರು ತಾವು ಕೇರಳ ಲಾಟರಿ ಸಂಸ್ಥೆಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾರೆ. ಇತ್ತೀಚೆಗೆ ಕೇರಳ ಲಾಟರಿ ಟ್ರೆಂಡ್ನಲ್ಲಿರುವ ಹಿನ್ನೆಲೆ ಯುವತಿ ಇದನ್ನು ನಿಜವೆಂದು ನಂಬಿ ಮಾತುಕತೆ ಮುಂದುವರಿಸಿದ್ದಾರೆ.
Also read: ಮೈಸೂರು ರೈಲು ನಿಲ್ದಾಣದಲ್ಲಿ ಶಂಕಿತರ ಪರಿಶೀಲನೆ: 34 ಮಂದಿ ಬಿಡುಗಡೆ, ಆರು ಮಂದಿ ವಿರುದ್ಧ ಕೇಸ್
ಈ ವೇಳೆ, “ಮ್ಯಾಡಮ್, ಕೇವಲ ₹50ಕ್ಕೆ ಒಂದು ಲಾಟರಿ ನೀಡುತ್ತಿದ್ದೇವೆ. ನೀವು ಎರಡು ಲಾಟರಿ ಖರೀದಿಸಿ,” ಎಂದು ಆಮಿಷ ಒಡ್ಡಿದ ವಂಚಕರು, ಯುವತಿಯಿಂದ ₹100 ವರ್ಗಾಯಿಸಿಕೊಂಡಿದ್ದಾರೆ.
ನಂತರ, ಯುವತಿಗೆ ಲಾಟರಿ ಬಂದಿದ್ದು ಎಂದು ನಂಬಿಸಿ ವಾಟ್ಸಾಪ್ ಮೂಲಕ ನಕಲಿ ಲಾಟರಿ ಟಿಕೆಟ್ ಚಿತ್ರವನ್ನು ಕಳುಹಿಸಿದ್ದಾರೆ. ಬಳಿಕ, ಲಾಟರಿ ಹಣವನ್ನು ಖಾತೆಗೆ ಜಮಾ ಮಾಡಲು ಟಿಡಿಎಸ್ ಹಾಗೂ ವಿವಿಧ ತೆರಿಗೆಗಳನ್ನು ಪಾವತಿಸಬೇಕೆಂದು ಹೇಳಿ ಹಂತ ಹಂತವಾಗಿ ಹಣ ವಸೂಲಿ ಮಾಡಿದ್ದಾರೆ.
ವಂಚಕರ ಮಾತನ್ನು ನಂಬಿದ ಯುವತಿ ಒಟ್ಟು ₹1,99,710 ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹೆಚ್ಚಿನ ಹಣ ಪಡೆದ ಬಳಿಕ ವಂಚಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದು, ಆಗಲೇ ಯುವತಿಗೆ ವಂಚನೆ ನಡೆದಿರುವುದು ಗೊತ್ತಾಗಿದೆ.
ತಕ್ಷಣ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ ಯುವತಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















