ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯ ವೇಳೆ ಕೇಳಿಬಂದ ಅಡ್ಡ ಮತದಾನ, ರೆಸಾರ್ಟ್ ರಾಜಕೀಯ ಹಾಗೂ ಆಮಿಷಗಳ ಮೂಲಕ ಜನಪ್ರತಿನಿಧಿಗಳನ್ನು ಸೆಳೆಯುವ ಆರೋಪಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತಿವೆ ಎಂದು ವಿಧಾನಪರಿಷತ್ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ, ರಾಜ್ಯಸಭಾ ಚುನಾವಣೆ ಮಾದರಿಯಲ್ಲಿ ವಿಧಾನಸಭಾ ಸದಸ್ಯರು (MLAಗಳು) ಮತ ಚಲಾಯಿಸಿ ವಿಧಾನಪರಿಷತ್ ಸದಸ್ಯರನ್ನು (MLCಗಳು) ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆಯಲ್ಲಿ ರಹಸ್ಯ ಮತದಾನ ಪದ್ಧತಿಯನ್ನು ರದ್ದುಗೊಳಿಸಿ, ಮುಕ್ತ ಮತದಾನ (Open Ballot System) ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಐತಿಹಾಸಿಕ ಹಿನ್ನೆಲೆ
ರಾಜ್ಯಸಭಾ ಚುನಾವಣೆಯಲ್ಲಿ ಹಿಂದೆಯೂ ರಹಸ್ಯ ಮತದಾನ ಪದ್ಧತಿ ಇದ್ದಾಗ ಪಕ್ಷದ್ರೋಹ ಮತ್ತು ಆಮಿಷಗಳ ಆರೋಪಗಳು ಕೇಳಿಬರುತ್ತಿದ್ದವು. ಈ ಸಮಸ್ಯೆಗೆ ಪರಿಹಾರವಾಗಿ 2003ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ತಂದು ಮುಕ್ತ ಮತದಾನ ಪದ್ಧತಿಯನ್ನು ಜಾರಿಗೆ ತಂದಿತು. ಬಳಿಕ 2006ರಲ್ಲಿ ಸುಪ್ರೀಂ ಕೋರ್ಟ್ ಸಹ ಈ ವ್ಯವಸ್ಥೆಯನ್ನು ಸಮರ್ಥಿಸಿತು.
Also read: ಬಿಪಿಎಲ್ ಕಾರ್ಡ್ ರದ್ದತಿ ವಿರುದ್ಧ ಶಾಸಕ ಚೆನ್ನಿ ಆಕ್ರೋಶ | ತಕ್ಷಣ ಮರುಪರಿಶೀಲನೆಗೆ ಸೂಚನೆ
ಭ್ರಷ್ಟಾಚಾರಕ್ಕೆ ಕಡಿವಾಣ
ಇತ್ತೀಚಿನ ವಿಧಾನಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ತಮ್ಮ ಪ್ರಭಾವವನ್ನು ಬಳಸಿಕೊಂಡು ವಿರೋಧ ಪಕ್ಷದ ಸದಸ್ಯರಿಗೆ ಆಮಿಷ ಒಡ್ಡುವುದು ಅಥವಾ ಬ್ಲಾಕ್ಮೇಲ್ ಮಾಡುವ ಸಾಧ್ಯತೆಗಳಿವೆ ಎಂದು ಅರುಣ್ ಹೇಳಿದರು. ಇದರಿಂದ ಕೆಲವರು ವೈಯಕ್ತಿಕ ಹಿತಾಸಕ್ತಿಗಾಗಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ವ್ಯವಸ್ಥೆಯ ಸುಧಾರಣೆಗೆ ಕರೆ
ಯಾವುದೇ ಜನಪ್ರತಿನಿಧಿ ಪಕ್ಷದ ಚಿಹ್ನೆಯಡಿ ಆಯ್ಕೆಯಾದ ಬಳಿಕ ಪಕ್ಷದ ಸಿದ್ಧಾಂತ ಮತ್ತು ಶಿಸ್ತಿಗೆ ಬದ್ಧರಾಗಿರಬೇಕು. ಮುಕ್ತ ಮತದಾನ ಪದ್ಧತಿ ಜಾರಿಗೆ ಬಂದರೆ, ಮತದಾನದ ವೇಳೆ ಪಕ್ಷದ ಅಧಿಕೃತ ಏಜೆಂಟರಿಗೆ ಮತಪತ್ರ ತೋರಿಸಿ ಮತ ಚಲಾಯಿಸಬೇಕಾಗುತ್ತದೆ. ಇದರಿಂದ ಆಮಿಷ ಅಥವಾ ಬ್ಲಾಕ್ಮೇಲ್ ರಾಜಕೀಯಕ್ಕೆ ಅವಕಾಶ ಕಡಿಮೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹಾಗೂ ಸರ್ಕಾರಗಳು ತಕ್ಷಣ ಕ್ರಮ ಕೈಗೊಂಡು ವಿಧಾನಪರಿಷತ್ ಚುನಾವಣೆಯಲ್ಲೂ ಮುಕ್ತ ಮತದಾನ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಡಿ.ಎಸ್. ಅರುಣ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















