ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮಗೆ ಇತಿಹಾಸದ ಕಲ್ಪನೆ ಬೇಕು. ಇತಿಹಾಸವನ್ನು ಅಧ್ಯಯನದ ಮೂಲಕ ನೆನೆಪಿಟ್ಟುಕೊಂಡಾಗ ಮಾತ್ರ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ವತಿಯಿಂದ ಗುರುವಾರ ಕುಂಸಿಯ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ಸಾಧಿಸಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿ ವೇದಿಕೆ ಉದ್ಘಾಟಿಸಿ ಮಾತನಾಡಿದರು.
ನಮ್ಮ ಹಿರಿಯರ ಅನುಭವಗಳು ನಾವು ಕಲಿತ ಶಿಕ್ಷಣಕ್ಕಿಂತಲೂ ಶ್ರೇಷ್ಠ ಮಾರ್ಗದರ್ಶನ ನೀಡುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಅನುಭವದಿಂದ ಕಲಿಯುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸ್ನೇಹ, ಅಧ್ಯಯನ, ಸೃಜನಶೀಲತೆ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಅನುಭವಿಸಿ ಕಲಿಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.
ನಾಯಕನನ್ನು ಅನುಸರಿಸುವುದು ನಾಯಕತ್ವವಲ್ಲ; ಹೊಸ ನಾಯಕತ್ವವನ್ನು ರೂಪಿಸುವುದೇ ನಿಜವಾದ ನಾಯಕತ್ವ. ಅದರಂತೆ ವಿದ್ಯಾರ್ಥಿ ಸಂಘಗಳು ನಾಯಕತ್ವ, ಸಂಘಟನಾ ಕೌಶಲ್ಯ ಹಾಗೂ ಬದುಕಿನ ಮೌಲ್ಯಗಳನ್ನು ಕಲಿಸುವ ಉತ್ತಮ ವೇದಿಕೆಗಳಾಗಿವೆ. ಪುಸ್ತಕಕ್ಕಿಂತ ಮಸ್ತಕದ ವಿದ್ಯಾಭ್ಯಾಸವಾಗಬೇಕಿದೆ.
ಕುಂಸಿ ಶಾಲೆ ಈಗಾಗಲೇ ಮೂರು ಬಾರಿ ಶೇ.100% ಫಲಿತಾಂಶ ಪಡೆದು ತಮ್ಮ ಶೈಕ್ಷಣಿಕ ಸಾಧನೆಯನ್ನು ದಾಖಲಿಸಿದೆ. ಎನ್ಇಎಸ್ ಸಂಸ್ಥೆ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ.100% ಫಲಿತಾಂಶ ಪಡೆದ ವಿದ್ಯಾಸಂಸ್ಥೆಗಳ ಶಿಕ್ಷಕರಿಗೆ ಅಭಿನಂದಿಸುವ ಕಾರ್ಯವನ್ನು ಆಡಳಿತ ಮಂಡಳಿಯಿಂದ ಮಾಡಲಾಗುತ್ತಿದೆ. ಇಂತಹ ಸಾಧನೆಯ ಶಿಖರಕ್ಕೆ ಏರಿದ ವಿದ್ಯಾಸಂಸ್ಥೆಗಳು, ಅದೇ ಎತ್ತರವನ್ನು ನಿರ್ವಹಿಸಿಕೊಳ್ಳಬೇಕಾದ ಜವಾಬ್ದಾರಿ ಶಿಕ್ಷಕ ಸಮೂಹದ ಮೇಲಿದೆ ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಗ್ರಾಮೀಣ ಅನುದಾನಿತ ಶಾಲೆಯಿಂದ ಶೇ.100% ಫಲಿತಾಂಶ ಸಾಧಿಸುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಜ್ಞಾನವನ್ನು ಸಂಪಾದಿಸುವುದು ಶಿಕ್ಷಣದ ಮೊದಲ ಹಂತ. ಆದರೆ ಪಡೆದ ಜ್ಞಾನವನ್ನು ಸಮಾಜದ ಒಳಿತಿಗಾಗಿ ಹೇಗೆ ಬಳಸಬೇಕು ಎಂಬ ಅರಿವು ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಬೆಳೆಸುವುದೇ ಶಿಕ್ಷಣದ ಮೂಲ ತಳಹದಿಯಾಗಿದೆ.
ವಿದ್ಯಾರ್ಥಿಗಳು ಕಲಿಯುತ್ತಿರುವ ಪ್ರತಿಯೊಂದು ವಿಷಯವನ್ನೂ “ಯಾಕೆ ಕಲಿಯಬೇಕು?” ಎಂಬ ವಿಮರ್ಶಾತ್ಮಕ ಕುತೂಹಲದಿಂದ ಅಧ್ಯಯನ ಮಾಡಬೇಕು. ಶೇ.100ರಷ್ಟು ಫಲಿತಾಂಶವು ಒಂದು ಬಾರಿ ದಾಖಲಿಸುವ ಸಾಧನೆಯಾಗಿರದೆ, ಗುಣಮಟ್ಟದ ಶಿಕ್ಷಣದ ನಿರಂತರ ಪರಿಪಾಠವಾಗಬೇಕು ಎಂದು ಹೇಳಿದರು.
ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕಿ ಪದ್ಮಿನಿ ಫಲಿತಾಂಶದ ವಿಶ್ಲೇಷಣೆ ನೀಡಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕಾರ್ತಿಕ್.ಆರ್ ಉಪಸ್ಥಿತರಿದ್ದರು. ಶಿಕ್ಷಕರಾದ ಡಿ.ವಿ.ವಾಗೀಶ್ ಸ್ವಾಗತಿಸಿ, ಟಿ.ಸಿ.ಗಗನ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








