ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
ಮೋಡ ಕವಿದ ವಾತಾವರಣ ಹಾಗೂ ವರುಣನ ಸಿಂಚನದ ನಡುವೆಯೂ ಕಲಬುರಗಿಯ (Kalaburagi) ಸೇಡಂ ತಾಲೂಕಿನ ಐತಿಹಾಸಿಕ ಮಳಖೇಡದಲ್ಲಿರುವ ಉತ್ತರಾದಿ ಮಠದ ಶ್ರೀ ಜಯತೀರ್ಥರ ಮೂಲ ಸನ್ನಿಧಾನದಲ್ಲಿ ನಡೆದ ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ ಹಾಗೂ ಜೋಡು ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಜರುಗಿತು.
ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಿಂದ ಆಗಮಿಸಿದ್ದ ಭಕ್ತರು ಉತ್ಸವದಲ್ಲಿ ಭಕ್ತಿಭಾವದಿಂದ ಪಾಲ್ಗೊಂಡು ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾದರು.
Also Read>> ಯಡಕುಮರಿ ಭೂಕುಸಿತ | ಸಂಚಾರ ಪುರಾರಂಭ | ಮಂಗಳೂರು – ವಿಜಯಪುರ ರೈಲು ಯಶಸ್ವಿ ಸಂಚಾರ
ಇಂದ್ರಾಂಶ ಸಂಭೂತರಾಗಿ ಪ್ರಸಿದ್ಧರಾದ ಶ್ರೀ ಜಯತೀರ್ಥರ ರಥೋತ್ಸವದ ಸಂದರ್ಭದಲ್ಲಿ ಮಳೆಯ ಸಿಂಚನವಾಗಿರುವುದು ಭಕ್ತರಲ್ಲಿ ವಿಶೇಷ ಭಾವನೆಯನ್ನು ಮೂಡಿಸಿತು. ತುಂತುರು ಮಳೆಯ ನಡುವೆಯೂ ಭಕ್ತರ ಉತ್ಸಾಹಕ್ಕೆ ಯಾವುದೇ ಕೊರತೆ ಕಾಣಿಸಲಿಲ್ಲ. “ಎದುರಾರೈ ಗುರುವೆ ನಿನಗೆ ಸಮಾನಾರೈ”, “ಕಾಗಿಣಿ ತಟವಾಸ ಮಳಖೇಡ ನಿವಾಸ”, “ಟೀಕಾಚಾರ್ಯರ ಪಾದ ಸೋಕಿದ ಕೊನೆ ಧೂಳಿ”, “ಸಾರಿ ಭಜಿಸಿರೋ ಟೀಕಾರಾಯರ” ಸೇರಿದಂತೆ ಅನೇಕ ದಾಸರ ಪದಗಳನ್ನು ಹಾಡುತ್ತ, ದಾಸರ ವೇಷಭೂಷಣದಲ್ಲಿ ಭಕ್ತರು ರಥೋತ್ಸವದ ಮುಂಭಾಗದಲ್ಲಿ ನೃತ್ಯ ಮಾಡಿ ಸಂಭ್ರಮಿಸಿದರು. ವಿವಿಧ ಭಜನಾ ಮಂಡಳಿಗಳ ಸದಸ್ಯರು ದಾಸಸಾಹಿತ್ಯ ಗಾಯನದ ಮೂಲಕ ರಥೋತ್ಸವದ ಭಕ್ತಿ ವೈಭವವನ್ನು ಇನ್ನಷ್ಟು ಹೆಚ್ಚಿಸಿದರು.
ಭಾನುವಾರ ಸಂಜೆ ಉತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮಳಖೇಡಕ್ಕೆ ಆಗಮಿಸಿ, ಶ್ರೀ ಜಯತೀರ್ಥರು, ಶ್ರೀ ಅಕ್ಷೋಭ್ಯತೀರ್ಥರು ಹಾಗೂ ಶ್ರೀ ರಘುನಾಥತೀರ್ಥರ ಮೂಲ ವೃಂದಾವನಗಳಿಗೆ ಮಂಗಳಾರತಿ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ಸೋಮವಾರ ನಡೆದ ಮಧ್ಯಾರಾಧನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶ್ರೀಪಾದಂಗಳವರು ಸುಧಾ ಪಾಠ ಬೋಧಿಸಿದರು. ಬಳಿಕ ಭಕ್ತರಿಗೆ ಮುದ್ರಾಧಾರಣೆ, ರಥಾಂಗ ಹೋಮ ಹಾಗೂ ಶ್ರೀ ಜಯತೀರ್ಥರ ಮೂಲ ವೃಂದಾವನದಲ್ಲಿ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ನಂತರ ಶ್ರೀಪಾದಂಗಳವರು ಜೋಡು ರಥೋತ್ಸವಕ್ಕೆ ಚಾಲನೆ ನೀಡಿದರು.
ಸಾವಿರಾರು ಭಕ್ತರ ಜಯಘೋಷದ ನಡುವೆ ಎರಡು ರಥಗಳು ಪಾದಗಟ್ಟೆವರೆಗೆ ಸಂಚರಿಸಿ ಪುನಃ ಮಠಕ್ಕೆ ಮರಳಿದವು. ಬಳಿಕ ಶ್ರೀಪಾದಂಗಳವರು ದಿಗ್ವಿಜಯ ಮೂಲ ರಾಮದೇವರ ವಿಶೇಷ ಪೂಜೆ ನೆರವೇರಿಸಿದರು. ಉತ್ಸವದ ಅಂತ್ಯದಲ್ಲಿ ಆಗಮಿಸಿದ್ದ ಭಕ್ತರಿಗೆ ತೀರ್ಥ-ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಮಠದ ದಿವಾನರಾದ ಪಂ. ಶಶಿ ಆಚಾರ್ಯ, ಮುಂಬೈನ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಪಂ. ವಿದ್ಯಾಸಿಂಹಾಚಾರ್ಯ ಮಾಹುಲಿ, ಮಳಖೇಡ ಉತ್ತರಾದಿ ಮಠದ ವ್ಯವಸ್ಥಾಪಕ ಪಂ. ವೆಂಕಣ್ಣಾಚಾರ್ಯ ಪೂಜಾರ, ಮಠಾಧಿಕಾರಿ ರಾಮಾಚಾರ್ಯ ಘಂಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
Kalaburagi | ಶ್ರೀ ಜಯತೀರ್ಥರ ಕುರಿತ ಪುಸ್ತಕ ಬಿಡುಗಡೆ
ಮಳಖೇಡದ ಕಮಲಾಕರ ಕುಲಕರ್ಣಿ ರಚಿಸಿರುವ “ದಾಸರು ಕಂಡ ಶ್ರೀ ಜಯತೀರ್ಥರು” ಕೃತಿಯನ್ನು ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, “ಟೀಕಾಚಾರ್ಯರು ರಚಿಸಿದ ಪ್ರತಿಯೊಂದು ವಾಕ್ಯವೂ ಕಲ್ಪವೃಕ್ಷ ಹಾಗೂ ಕಾಮಧೇನುವಿನಂತಿದೆ. ಶ್ರೀ ಜಯತೀರ್ಥರು ತತ್ತ್ವಪ್ರಪಂಚದ ಧ್ರುವತಾರೆಯಾಗಿದ್ದಾರೆ. ಅನೇಕ ದಾಸವರೇಣ್ಯರು ಮಳಖೇಡಕ್ಕೆ ಆಗಮಿಸಿ ಶ್ರೀ ಜಯತೀರ್ಥರ ದರ್ಶನ ಪಡೆದು ಅವರನ್ನು ಕೊಂಡಾಡಿದ್ದಾರೆ. ಆ ದಾಸರ ಭಕ್ತಿಭಾವವನ್ನು ಕಮಲಾಕರ ಕುಲಕರ್ಣಿ ಅವರು ಸಂಗ್ರಹಿಸಿ ಗ್ರಂಥ ರೂಪದಲ್ಲಿ ನೀಡಿರುವುದು ಶ್ಲಾಘನೀಯ ಕಾರ್ಯ” ಎಂದು ಹೇಳಿದರು.
ಆಚರಣೆ-ಅನುಷ್ಠಾನದಿಂದಲೇ ಧರ್ಮ ಮತ್ತು ಸಿದ್ಧಾಂತ ಉಳಿಯುತ್ತದೆ: ಶ್ರೀ ಸತ್ಯಾತ್ಮತೀರ್ಥರು
ಆರಾಧನಾ ಮಹೋತ್ಸವದ ಆಶೀರ್ವಚನದಲ್ಲಿ ಮಾತನಾಡಿದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು, “ಯಾವುದೇ ಧರ್ಮ ಅಥವಾ ಸಿದ್ಧಾಂತ ಉಳಿಯಬೇಕಾದರೆ ಅದು ಕೇವಲ ಗ್ರಂಥಗಳಲ್ಲಿ ಉಳಿಯಬಾರದು; ಆಚರಣೆ ಮತ್ತು ಅನುಷ್ಠಾನದ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.
ಹಿಂದೂ ಧರ್ಮದ ಮೌಲ್ಯಗಳು ಹಾಗೂ ಸನಾತನ ಸಂಸ್ಕೃತಿ ಉಳಿಯಬೇಕಾದರೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಧಾರ್ಮಿಕ ಆಚರಣೆಗಳನ್ನು ಪಾಲಿಸಬೇಕು. ವಿಶೇಷವಾಗಿ ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಧರ್ಮ, ಸಂಸ್ಕಾರ ಹಾಗೂ ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ತಿಳಿಸಿಕೊಡಬೇಕು. ಉತ್ತಮ ಸಂಸ್ಕಾರ ಹೊಂದಿದ ಪೀಳಿಗೆ ರೂಪುಗೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶ್ರೀಗಳು ಕರೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










