ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ದೇಶದ 23 ಭಾಷೆಗಳ ಉತ್ತಮ ಸಾಹಿತ್ಯ ಕೃತಿಗಳಿಗೆ 2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಕನ್ನಡತಿ ಡಾ.ವಿಜಯಾ ಅವರಿಗೆ ಈ ಪ್ರಶಸ್ತಿ ಸಂದಿದೆ.
ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಏಳು ಕಾವ್ಯ, 4 ಕಾದಂಬರಿ, 6 ಸಣ್ಣಕತೆ, 3 ಪ್ರಬಂಧ ಲೇಖನ, ಒಂದು ಆತ್ಮಕತೆ ಸೇರಿ 23 ಕೃತಿಗಳಿಗೆ ಪ್ರಶಸ್ತಿ ದೊರಕಿದ್ದು, ಕರ್ನಾಟಕದ ಲೇಖಕಿ ಡಾ. ವಿಜಯಾ ಅವರ ಆತ್ಮಕತೆ ‘ಕುದಿ ಎಸರು’ ಪ್ರಶಸ್ತಿಗೆ ಭಾಜನವಾಗಿದೆ ಎಂದು ತಿಳಿಸಿದ್ದಾರೆ.
ಪ್ರಶಸ್ತಿಯು ತಲಾ ಒಂದು ಲಕ್ಷ ರೂ. ನಗದು ಪುರಸ್ಕಾರ, ಕಂಚಿನ ಸ್ಮರಣಿಕೆಯನ್ನು ಒಳಗೊಂಡಿದೆ. 2020ರ ಜ. 25ರಂದು ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದಿದ್ದಾರೆ.
ಡಾ. ವಿಜಯಾ ಅವರ ಕುರಿತು:
ಪ್ರಜಾಮತ, ಮಲ್ಲಿಗೆ, ತುಷಾರ ಮತ್ತು ರೂಪತಾರಾ ಪತ್ರಿಕೆಗಳಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ ವಿಜಯಾ ಸಾಮಾಜಿಕ, ಮಹಿಳಾ ಮತ್ತು ಭಾಷಾ ಚಳವಳಿಯ ಮೂಲಕ ತಮ್ಮನ್ನು ಗುರುತಿಸಿಕೊಂಡವರು. ದಾವಣಗೆರೆ ಮೂಲದವರಾದರೂ ನೆಲೆಸಿದ್ದು ಬೆಂಗಳೂರಿನ ನಿವಾಸಿಯಾದ ಅವರು, ಶ್ರೀರಂಗರ ನಾಟಕಗಳ ಅಧ್ಯಯನಕ್ಕೆ ಪಿಎಚ್ ಡಿ ಪಡೆದಿದ್ದಾರೆ. ಕನ್ನಡ ಚಲನಚಿತ್ರ ಇತಿಹಾಸ, ಬೆಂಗಳೂರು ದರ್ಶನ, ಸ್ವಾತಂತ್ರೋತ್ತರ ಕನ್ನಡ ಸಾಹಿತ್ಯ ಸಂಸ್ಕೃತಿ, ಕರ್ನಾಟಕ ಕಲಾ ದರ್ಶನ, ಬಂದರೋ ಬಂದರು-ಬೀದಿನಾಟಕ, ಸಂಕುಲ-ಲೇಖನ ಸಂಗ್ರಹ ಇವರ ಪ್ರಮುಖ ಕೃತಿಗಳು.
Get in Touch With Us info@kalpa.news Whatsapp: 9481252093

















