ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ಸಂಕ್ರಾಂತಿ ಹಬ್ಬದ ಅಂಗವಾಗಿ ಎಲ್ಲೆಡೆ ಹಬ್ಬದ ವಾತಾವರಣ ನೆಲೆಸಿತ್ತು. ಹೆಣ್ಣು ಮಕ್ಕಳು ಮನೆಯ ಮುಂದೆ ಚಿತ್ತಾಕಾರದ ರಂಗೋಲಿ ಬಿಡಿಸಿ ಅದಕ್ಕೆ ಬಣ್ಣ ಹಚ್ಚಿದ್ದರು.

ಮನೆಯಲ್ಲಿ ಪೂಜೆ ಮಾಡಿ ಸ್ನೇಹಿತರು ಮತ್ತು ಬಂಧುಗಳಿಗೆ ಎಳ್ಳು, ಬೆಲ್ಲ, ಕಬ್ಬು, ಬೇಯಿಸಿದ ಕಡಲೆಕಾಯಿ, ಅವರೆಕಾಯಿ ಮತ್ತು ಗೆಣಸನ್ನು ನೀಡಿ ವರ್ಷವಿಡೀ ಒಳ್ಳೆಯ ಮಾತನ್ನು ಆಡುತ್ತಾ ಆರೋಗ್ಯದಿಂದ ಸುಖವಾಗಿರಿ ಎಂದು ಹಾರೈಸುತ್ತಿದ್ದರು.

ಈ ಹಬ್ಬದ ಸಂಭ್ರಮ ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲಿಯೂ ಕೂಡ ನೆಲೆಸಿತ್ತು. ಬೆಳಿಗ್ಗೆಯಿಂದಲೇ ರೈತಾಪಿ ವರ್ಗದವರು ಮನೆಯಲ್ಲಿನ ಜಾನುವಾರುಗಳಿಗೆ ಸ್ನಾನ ಮಾಡಿಸಿ ಶುಭ್ರಗೊಳಿಸಿ ಪೂಜೆ ಮಾಡಿ ಅವುಗಳಿಗೆ ಕಬ್ಬು, ಬೇಯಿಸಿದ ಕಡಲೆಕಾಯಿ ಹಾಗೂ ಗೆಣಸನ್ನು ತಿನ್ನಿಸುವ ಸೊಗಡು ಎಲ್ಲೆಡೆ ಕಂಡು ಬಂತು. ಇನ್ನು ನಗರದಲ್ಲಿ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಮಾಡಿಸಿ ಬಂಧು ಬಳಗದವರಿಗೆ ಎಳ್ಳು ಬೆಲ್ಲ ನೀಡುತ್ತಿದ್ದರು. ದಿನನಿತ್ಯ ಪದಾರ್ಥಗಳ ಬೆಲೆ ಏರಿಕೆಯ ನಡುವೆಯೂ ಸಂಕ್ರಾಂತಿ ಹಬ್ಬದ ಆಚರಣೆ ಅದ್ಧೂರಿಯಾಗಿ ಎಲ್ಲೆಡೆ ಕಂಡಬಂದಿತು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093













