ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಆಧುನಿಕ ಕಾಲಘಟ್ಟದ ಜನರು ಸಮೂಹ ಮಾಧ್ಯಮಗಳ ಸೆಳೆತಕ್ಕೆ ಒಳಗಾಗಿ ನಮ್ಮ ದೇಶೀ ಕಲೆ-ಸಾಹಿತ್ಯವನ್ನು ಕಡೆಗಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹೇಳಿದರು.
ಚಳ್ಳಕೆರೆ ತಾಲ್ಲೂಕಿನ ಕಾಲುವೇಹಳ್ಳಿ ಗ್ರಾಮದ ಶ್ರೀ ಗುರು ಕಲಾ ಸಂಘದ ಹಿರಿಯ ಕಲಾವಿದರು ಆಯೋಜಿಸಿದ್ದ ದುಶ್ಯಾಸನ ವಧೆ ಅರ್ಥಾತ್ ದ್ರೌಪದಿಯ ವಸ್ತ್ರಾಪಹರಣ ಯಕ್ಷಗಾನ ನಾಟಕ ಅಭಿನಯ ಸಮಾರಂಭದಲ್ಲಿ ಯಕ್ಷಗಾನ ಬಯಲಾಟ, ಐತಿಹಾಸಿಕ, ಪೌರಾಣಿಕ ನಾಟಕಗಳ ಮಹತ್ವ ಕುರಿತು ಮಾತನಾಡಿದರು.

ಇತ್ತೀಚಿನ ಯುವ ಪೀಳಿಗೆಯು ಸದಾ ಮೊಬೈಲ್ ಮತ್ತಿತರೆ ಆಧುನಿಕ ಕಾಲದ ಸಮೂಹ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿ ನಮ್ಮ ದೇಶಿ ಕಲೆಗಳಾದ ಬಯಲಾಟ, ಯಕ್ಷಗಾನ, ಜನಪದ ಗೀತೆ, ಅಭಿನಯ ಹಾಗೂ ವಿವಿಧ ಜನಪದ ಕಲೆ ಸಾಹಿತ್ಯದ ಕಡೆ ಮನಸ್ಸು ಕೊಡುತ್ತಿಲ್ಲ ಇದು ಉತ್ತಮವಾದ ಬೆಳವಣಿಗೆ ಅಲ್ಲ ಈ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯ ಕಲಾವಿದ ಕೆ.ಪಿ. ಭೂತಯ್ಯ ಅವರು ಈ ಇಳಿವಯಸ್ಸಿನಲ್ಲೂ ದ್ರೌಪದಿಯ ಪಾತ್ರಾಭಿನಯ ಮಾಡುವ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ. ರಾಧಿಕಾ ಮಾತನಾಡಿ, ಚಳ್ಳಕೆರೆ ತಾಲೂಕಿನ ಆಂಧ್ರ ಗಡಿಭಾಗದ ಕಾಲುವೇಹಳ್ಳಿ ಗ್ರಾಮಸ್ಥರು ಇಂದಿಗೂ ಸಹ ಗ್ರಾಮೀಣ ಕಲೆಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ ಸ್ವಾಸ್ಥ್ಯ ಸಮಾಜ ನಿರ್ಮಾಣ, ಸಮುದಾಯಕ್ಕೆ ಕೌಟುಂಬಿಕ, ನೈತಿಕ ಮೌಲ್ಯಗಳ ಸಾರುವಿಕೆ ಈ ನಾಟಕಗಳಿಂದ ಸಾಧ್ಯ ಎಂದರು.

ಜಿಪಂ ಸಿಎಸ್ ಡಾ. ನಂದಿನಿ ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜ ಪರಿವರ್ತನೆ ಮಾಡುವಲ್ಲಿ ನಾಟಕಗಳ ಪಾತ್ರ ಕುರಿತು ಮಾತನಾಡಿ, ಈ ಹಿಂದೆ ಹಳ್ಳಿಗರು ಹಬ್ಬ ಹರಿದಿನಗಳಲ್ಲಿ ಎಲ್ಲಾ ಸಮುದಾಯದದವರು ಒಗ್ಗೂಡಿಕೊಂಡು ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ದೈಹಿಕ-ಮಾನಸಿಕ ಆರೋಗ್ಯವನ್ನು ವೃಧ್ದಿಸಲು ಶ್ರಮಿಸುತ್ತಿದ್ದರು. ಆದರೆ ಇಂದು ನಾವುಗಳು ಈ ನಿಟ್ಟಿನಲ್ಲಿ ನಮ್ಮ ಪರಂಪರೆಯನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಹಿರಿಯ ಕಲಾವಿದ ಕೆ.ಪಿ. ಭೂತಯ್ಯ ದ್ರೌಪದಿಯ ಪಾತ್ರಾಭಿನಯ ಪ್ರದರ್ಶಿಸಿ ಮಾತನಾಡಿ, ಹಳ್ಳಿಗಾಡಿನ ಜನಪದ ಕಲಾವಿದರು, ಭಾಗವತರು ಯುವಕರನ್ನು ಸಂಘಟಿಸಿ ಜನಪದ ಕಲೆಗಳನ್ನು ಕೈಗೂಡಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ ಎಂದು ತಿಳಿಸಿದರು

ಇದೇ ವೇಳೆ ಕಾಲುವೇಹಳ್ಳಿ ಗ್ರಾಮದ ಶ್ರೀ ಗುರು ಕಲಾ ಸಂಘದ ವತಿಯಿಂದ ಶಿವರಾತ್ರಿಯ ಅಂಗವಾಗಿ ಆಯೋಜಿಸಿದ್ದ ದುಶ್ಯಾಸನ ವಧೆ ನಾಟಕಾಭಿನಯ ಅಭಿನಯಿಸಿದರು. ಜಿಪಂ ಸಿಎಸ್, ಡಿಸಿ ಹಾಗೂ ಎಸ್‌ಪಿ ಅವರು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಯಕ್ಷಗಾನ ಬಯಲಾಟ ನಾಟಕವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ ಮಲ್ಲಿಕಾರ್ಜುನಪ್ಪ, ಗ್ರಾಪಂ ಅಧ್ಯಕ್ಷ ಆರ್ ಪಾಲಯ್ಯ, ತಾಪಂ ಸದಸ್ಯ ಶ್ರೀನಿವಾಸ, ಯಕ್ಷಗಾನ ಭಾಗವತರಾದ ಶಿವಣ್ಣ, ಹನುಮಯ್ಯ, ಈರಣ್ಣ, ಗ್ರಾಪಂ ಸದಸ್ಯರಾದ ತಿಪ್ಪೇಸ್ವಾಮಿ, ತಿಪ್ಪಯ್ಯ, ತಿಪ್ಪಮ್ಮ, ಗಾದ್ರಿಪಾಲಯ್ಯ, ದ್ರಾಕ್ಷಾಯಣಮ್ಮ, ರೇಣುಕಾ, ನಾಟಕ ಅಕಾಡೆಮಿ ಅಧ್ಯಕ್ಷ ಆರ್ ಭೀಮಸೇನಾ, ಸದಸ್ಯ ರಾಜು, ಹಿರಿಯ ಮುಖಂಡರಾದ ಕೆ.ಜಿ. ಪಾಲಯ್ಯ ನಿವೃತ್ತ ಪ್ರಾಚಾರ್ಯ ರಾಜಶೇಖರಯ್ಯ, ಕಲಾವಿದರಾದ ಮೊರಾರ್ಜಿ, ಮಹಾಂತೇಶನಾಯಕ, ಸುತ್ತೇಳು ಹಳ್ಳಿಗಳ ಗ್ರಾಮಸ್ಥರು ಇದ್ದರು
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















