ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅತಿಯಾದ ರಾಸಾಯನಿಕ ಹಾಗೂ ಔಷಧಗಳ ಅವಲಂಬನೆ ಭೂಮಿಗಾಗಲಿ ದೇಹಕ್ಕಾಗಲಿ ಮಾರಕವಾಗಿದ್ದು, ಔಷಧಗಳ ಗುಣಮಟ್ಟದ ನಿಯಂತ್ರಣ ಸಮಕಾಲೀನ ಸಮಸ್ಯೆಗಳ ನಿವಾರಣೆಗೆ ಅತ್ಯವಶ್ಯಕವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಭಿಪ್ರಾಯಪಟ್ಟರು.
ಸೋಮವಾರ ನಗರದ ರಾಷ್ಟ್ರೀಯ ಫಾರ್ಮಸಿ ಕಾಲೇಜಿನಲ್ಲಿ ಔಷಧಗಳ ಉತ್ಪಾದನೆಯಲ್ಲಿ ಗುಣಮಟ್ಟದ ನಿಯಂತ್ರಣ ಹಾಗೂ ಸಮಕಾಲೀನ ಸಮಸ್ಯೆಗಳ ಕುರಿತ ವಿಶೇಷ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ನಾಲಿಗೆಗೆ ರುಚಿಯಾದ ಆಹಾರ ದೀರ್ಘಾವಧಿಯ ಪರಿಣಾಮವನ್ನು ಬೀರುತ್ತದೆ. ಮಲೆನಾಡನ್ನು ತೀವ್ರವಾಗಿ ಕಾಡುತ್ತಿರುವ ಎಲೆಚುಕ್ಕೆ ರೋಗ ರೈತರನ್ನು ಹತಾಶೆಗೊಳಿಸಿದೆ. ತಜ್ಞರ ವರದಿಯ ಪ್ರಕಾರ ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡಿದ್ದು ಪೊಟಾಶ್ ಅಂಶ ಸಂಪೂರ್ಣವಾಗಿ ಕ್ಷೀಣಿಸಿದೆ. ರೈತರು ಭೂಮಿಯಲ್ಲಿನ ಮಣ್ಣನ್ನು ಪರೀಕ್ಷಿಸುತ್ತಿಲ್ಲ. ಭೂಮಿಯಲ್ಲಿನ ರೈತ ಸ್ನೇಹಿ ಜಂತುಗಳೆಲ್ಲವೂ ಅಳಿದು ಹೋಗಿದೆ. ಇಂತಹ ಹೊತ್ತಿನಲ್ಲಿ ಮತ್ತೆ ಸಾವಯಾವ ಗೊಬ್ಬರಗಳ ಬಳಕೆಗೆ ತಜ್ಞರಿಂದ ಶಿಫಾರಸ್ಸು ಬರುತ್ತಿದ್ದು ಅನುಷ್ಟಾನ ಕಷ್ಟ ಸಾಧ್ಯ. ಹಾಗಾಗಿಯೇ ಬಣ್ಣದ ವ್ಯವಸ್ಥೆಗೆ ಅವಲಂಬಿತವಾಗದೇ ಸಹಜ ಪ್ರಕೃತಿಯಲ್ಲಿ ಬಾಳೋಣ ಎಂದರು.
ನಮಗೆ ನೈಸರ್ಗಿಕ ಔಷಧಗಳ ಕುರಿತು ಅರಿವು ಹೆಚ್ಚಾಗಬೇಕಿದೆ. ಔಷಧಗಳ ಗುಣಮಟ್ಟದಲ್ಲಿ ಕಲಬೆರಕೆಯಾಗದಂತೆ ತಡೆಯಬೇಕಾಗಿದ್ದು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಫಾರ್ಮಾಸಿಸ್ಟ್ಗಳ ಪಾತ್ರ ಮಹತ್ವದಾಗಿದೆ. ಸ್ವಾರ್ಥದ ಆಸೆಗೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ಮಾಡಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಣಿಪಾಲ್ ಫಾರ್ಮಸಿ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಕೆ.ಗಿರೀಶ್ ಪೈ ಮಾತನಾಡಿ ಕಂಪನಿಗಳು ಉತ್ಫಾದಿಸಿದ ಜೌಷಧಗಳನ್ನು ಯುಎಸ್ಎಫ್ಡಿಯೆ ಪರೀಕ್ಷಿಸಿದ ನಂತರ ಗುಣಮಟ್ಟದ ಆಧಾರದ ಮೇಲೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಅವಕಾಶ ನೀಡುತ್ತದೆ. ಗುಣಮಟ್ಟದಲ್ಲಿನ ವ್ಯತ್ಯಾಸ ಕಂಪನಿಗಳಿಗಾಗಲಿ, ಮನುಷ್ಯರಿಗಾಗಲಿ ಅತೀಯಾದ ನಷ್ಟವನ್ನು ಉಂಟುಮಾಡಲಿದ್ದು, ಫಾರ್ಮಸಿಸ್ಟ್ಗಳು ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್ ಉದ್ಘಾಟಿಸಿದರು. ಮಣಿಪಾಲ್ ಫಾರ್ಮಸಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಬಿ.ಎಸ್.ಮುದ್ದುಕೃಷ್ಣ, ರಾಷ್ಟ್ರೀಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಉಪಸ್ಥಿತರಿದ್ದರು.
Also read: ಸ್ಟ್ಯಾನ್ಫೋರ್ಡ್ ವಿಶ್ವವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿ ಪ್ರಾಧ್ಯಾಪಕರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post