ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ವಿಶ್ವೇಶ್ವರಾಯ ಅವರ ಪರಿಶ್ರಮದಿಂದ ಸ್ಥಾಪಿತವಾದ ಎಂಪಿಎಂ ಕಾರ್ಖಾನೆಯನ್ನು ಪುನರಾರಂಭಿಸುವ ನಿಟ್ಟಿಲ್ಲಿ ಸರ್ವ ಪ್ರಯತ್ನಗಳು ನಡೆದಿವೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಅವರು ಬುಧವಾರ ಎಂಪಿಎಂ ಕಾರ್ಖಾನೆಗೆ ಭೇಟಿ ನೀಡಿದ ನಂತರ ಅಥಿತಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನೌಕರರ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಕಾರ್ಖಾನೆಗೆ ಸೇರಿದ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ವಹಿಸುವಂತೆ ಕೋರಲಾಗಿತ್ತು. ಈ ಕುರಿತು ಚರ್ಚಿಸಲು ಏರ್ಪಡಿಸಿದ್ದ ಸಭೆಯಲ್ಲಿ ಅರಣ್ಯ ಭೂಮಿಯನ್ನು ಕಾರ್ಖಾನೆಯ ಅಧೀನದಲ್ಲೇ ಉಳಿಸಿಕೊಳ್ಳುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಕಾರ್ಖಾನೆ ಉಳಿದರೆ ಈ ಭಾಗದ ರೈತರು, ಕಾರ್ಮಿಕರು ಬದುಕು ಕಟ್ಟಿಕೊಳ್ಳುವಂತಾಗುವುದು. ಕಾರ್ಖಾನೆಯನ್ನು ಆರ್ಥಿಕವಾಗಿ ಸಧೃಡಗೊಳಿಸುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಆಸಕ್ತಿ ತೋರಿದ್ದಾರೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಬೆಂಗಳೂರಿನಲ್ಲಿ ಕೂತು ಕಾರ್ಖಾನೆ ಉಳಿಸಲು ಚರ್ಚಿಸಿದರೆ ಫಲಪ್ರದವಾಗುವುದಿಲ್ಲವೆಂದು ನೇರವಾಗಿ ಸಚಿವರನ್ನು ಇಲ್ಲಿಗೆ ಕರೆತಂದು ವಾಸ್ತವವನ್ನು ತೋರಿಸುವ ಪ್ರಯತ್ನ ನಡೆಸಲಾಗಿದೆ. ಕಾರ್ಖಾನೆಗೆ ಒಳಪಟ್ಟ ಮನೆಗಳನ್ನು ಟೌನ್ ಶಿಪ್ ಅಡಿಯಲ್ಲಿ ಉಳಿಸುವ ಸಂಬಂಧ ಚರ್ಚಿಸಲಾಗಿದೆ. ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ ವಿಆರ್‌ಎಸ್ ನಡಿ ನಿವೃತ್ತಿಗೊಂಡ ಕಾರ್ಮಿಕರಿಗೆ ಉಳಿದಿರುವ ಬಾಕಿ ಹಣವನ್ನು ಅವರಿಗೆ ಕೊಡುವ ಕೆಲಸವಾಗಿದೆ ಎಂದರು.
ಕಾರ್ಖಾನೆಯನ್ನು ಆರು ಬ್ಯಾಂಕುಗಳಿಗೆ ಫ್ಲೆಡ್ಜ್ ಮಾಡಿ ಪಡೆದ ಸಾಲ ಬಡ್ಡಿ ಸೇರಿ 260 ಕೋಟಿ ಆಗಿದೆ. ಅದನ್ನು 130 ಕೋಟಿ ಇಳಿಕೆ ಮಾಡುವಲ್ಲಿ ಈಗಾಗಲೇ ಮಾತುಕತೆ ನಡೆದಿದೆ. ಮೆಸ್ಕಾಂ ಇಲಾಖೆಯ ಬಿಲ್ಲು 108 ಕೋಟಿಯಾಗಿದ್ದು, ಬಡ್ಡಿ ಸೇರಿ 167 ಕೋಟಿ ಆಗಿದೆ ಎಂಬ ವಿವರನ್ನು ತಿಳಿಸಿದರು.
ಎಂಪಿಎಂ ಕಾರ್ಖಾನೆಯನ್ನು ಖಾಸಗೀ ಒಡೆತನಕ್ಕೆ ಸೇರಿದ ಕಂಪನಿಗಳು ನಡೆಸಲು ಮುಂದೆ ಬಂದಿವೆ. ಸಚಿವರು ದೊಡ್ಡ ಮನಸು ಮಾಡಿ ಆಸಕ್ತಿ ತೆಗೆದುಕೊಂಡಲ್ಲಿ ಜಿಲ್ಲೆಯ ಎರಡು ಕಾರ್ಖಾನೆಗಳು ಉಳಿಯುವುದಾಗಿ ತಿಳಿಸಿದರು.
ಶಾಸಕ ಬಿ.ಕೆ. ಸಂಗಮೇಶ್ವರ ಮಾತನಾಡಿ, ಈ ಭಾಗದ ರೈತರು ಕಾರ್ಖಾನೆಯ ಮೇಲೆ ಅವಲಂಭಿತರಾಗಿ 5 ಲಕ್ಷ ಟನ್ ಕಬ್ಬು ಬೆಳೆಯುತ್ತಿದ್ದರು. ಕಾರ್ಖಾನೆ ಮುಚ್ಚಿದ ಕಾರಣ ಬೆಳೆದ ಕಬ್ಬನ್ನು ಸಾಗಿಸಲು ಕಷ್ಟ ಪಡುವಂತಾಗಿದೆ. ಈಗಾಗಲೇ ವಿಆರ್‌ಎಸ್ ಯೋಜನೆಯಡಿ ನಿವೃತ್ತಿಗೊಂಡ ಕಾರ್ಮಿಕರಿಗೆ ಮನೆ ಖಾಲಿ ಮಾಡದ ಕಾರಣದಿಂದ ಅವರಿಗೆ ಬರಬೇಕಿದ್ದ ಶೇ. 20/ ಮತ್ತು ಆಡಿಟ್ ಆಗಿಲ್ಲವೆಂಬ ಕಾರಣಿದಿಂದ ಶೇ. 10 ರಷ್ಟು ಹಣವನ್ನು ಹಿಡಿದಿಟ್ಟುಕೊಳ್ಳಲಾಗಿದೆ. ಕೂಡಲೇ ಅದನ್ನು ಕಾರ್ಮಿಕರಿಗೆ ನೀಡಬೇಕು ಎಂದು ಒತ್ತಾಯಿಸಿದ ಅವರು ಕಾರ್ಖಾನೆ ಈ ದುಸ್ಥಿತಿಗೆ ಬರಲು ಅಧಿಕಾರಿಗಳೇ ಕಾರಣ ಎಂದರು.
ಧರ್ಮಪ್ರಸಾದ್ ಮಾತನಾಡಿ, ಕಾರ್ಖಾನೆಯಲ್ಲಿನ ಹಳೆಯ ಮಿಷನರಿಗಳನ್ನು ಬದಲಿಸಿ ನೂತನ ಮಿಷನರಿಗಳನ್ನು ಅಳವಡಿಸಬೇಕು, 220 ಬ್ಯಾಕ್ ಲಾಕ್ ಕಾರ್ಮಿಕರಿಗೆ ಡೆಪ್ಟೇಷನ್, ಹುದ್ದೆ ವಿಲೀನಿಕರಣ, ವೇತನ ಹೆಚ್ಚಿಸಿದಲ್ಲಿ ಸಮಸ್ಯೆ ಬಗೆಹರಿಯುವುದಾಗಿ ತಿಳಿಸಿದರು.
ಕಾಂಗ್ರೆಸ್‌ನ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಮಾತನಾಡಿ, ಈ ಭಾಗದ ರೈತರು ಕಾರ್ಮಿಕರು ಪರಿಸ್ಥಿತಿಯನ್ನು ಎದುರಿಸಲಾರದೆ ಈ ಊರನ್ನು ಬಿಟ್ಟು ಹೋಗಿದ್ದಾರೆ. ತಾಲೂಕು ಆಡಳಿತವು ಸಹ ಅಂತಹವರ ಹೆಸರನ್ನು ಚುನಾವಣಾ ಪಟ್ಟಿಯಿಂದ ಕಿತ್ತುಹಾಕಿದೆ. ಕಾರ್ಖಾನೆ ಉಳಿಸುವಲ್ಲಿ ಮುತುವರ್ಜಿ ವಹಿಸಿದರೆ ಭದ್ರಾವತಿ ಪುಃ ಬೆಳಗುತ್ತದೆ ಎಂದರು.
ಸಭೆಯಲ್ಲಿ ಕಾರ್ಖಾನೆಯ ಎಂಡಿ ಸೇರಿದಂತೆ ಅಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.
Get In Touch With Us info@kalpa.news Whatsapp: 9481252093
Discussion about this post