ಕಲ್ಪ ಮೀಡಿಯಾ ಹೌಸ್
ಬಿಆರ್‌ಪಿ: ಮಾನವ ಕುಲವು ಇತ್ತೀಚಿನ ದಶಕಗಳಲ್ಲಿ ಕಂಡ ಭೀಕರ ಕೋವಿಡ್ ಸಾಂಕ್ರಾಮಿಕವು ಬದುಕನ್ನು ದುರ್ಬರಗೊಳಿಸಿದೆ. ಎಲ್ಲ ಬಡವರು, ಜನಸಾಮಾನ್ಯರು, ಅಶಕ್ತರಿಗೆ ಇಂತಹ ತುರ್ತು ಸಂದರ್ಭದಲ್ಲಿ ಸೇವೆ ಒದಗಿಸುವ ಮೂಲಕ ಸಮಾಜದ ಎಲ್ಲ ವರ್ಗ ಸಮುದಾಯಗಳ ನಡುವೆ ಸೌಹಾರ್ದತೆ ಬೆಸೆಯುವ ಕೆಲಸವನ್ನು ಕಾರ್ಯಕರ್ತರು ಕೈಗೊಳ್ಳಬೇಕೆಂದು ಲಯನ್ಸಕ್ಲಬ್‌ನ (ಲಯನ್ಸ್ ಡಿಸ್ಟಿಕ್ 317ಸಿ)ನ ನಿಕಟಪೂರ್ವ ಜಿಲ್ಲಾ ಗೌವರ್ನರ್ ಹೆಚ್.ಎನ್. ಶಿವಕುಮಾರ್ ಕರೆ ನೀಡಿದರು.
ಲಯನ್ಸ್‌ಕ್ಲಬ್‌ನ ಲೇಕ್ ಸಿಟಿ- ಬಿ. ಆರ್. ಪ್ರಾಜೆಕ್ಟ್ (ಡಿಸ್ಟಿಕ 317 ಸಿ, ರೀಜನ್7 ಜೋನ್ 2) ಘಟಕವು ಬುಧವಾರ ಸಂಜೆ ಪಟ್ಟಣದ ಕೆ.ಪಿ.ಸಿ. ರಂಗಮಂದಿರದಲ್ಲಿ ಆಯೋಜಿಸಿದ್ದ ಹೊಸಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಧಾಟಿಸಿ ಅವರು ಮಾತನಾಡಿದರು.
ಕೊರೋನಾ ಸಂಕಷ್ಟದಿಂದಾಗಿ ಹಸಿವು, ನಿರುದ್ಯೋಗ, ಸಾರಿಗೆ ಸೌಲಭ್ಯ, ಮಾಹಿತಿ ರಹಿತತೆ, ಇತರೆ ಮೂಲಭೂತ ಅಗತ್ಯಗಳಿಂದ ವಂಚಿತಗೊಂಡ ಹಲವು ಸಮುದಾಯಗಳು ತತ್ತರಿಸಿ ಹೋಗಿವೆ. ಅಂತಹವರಿಗೆ ಬೆಂಬಲವಾಗಿ ನಿಲ್ಲುವ ಸೇವಾ ಮನೋಭಾವ ಸಮಾಜದ ಸಮತೋಲನವನ್ನು ಕಾಪಾಡುತ್ತದೆ. ಸೇವೆಯು ಮೂಲಭೂತವಾಗಿ ಎರಡು ಮುಖಗಳನ್ನು ಒಳಗೊಂಡಿದೆ. ಮೊದಲನೆಯದು ಸೇವೆಯಿಂದ ಎಲ್ಲ ವರ್ಗ, ಸಮುದಾಯ, ಶೋಷಿತರು-ಉಳ್ಳವರ ನಡುವೆ ಸೌಹಾರ್ದ ಸಂಬಂಧವನ್ನು ಏರ್ಪಡಿಸುವುದಾಗಿರುತ್ತದೆ. ನಂತರ ಸೇವೆ ಮಾಡಿದ ವ್ಯಕ್ತಿಗಳಿಗೆ ಅದು ಸಂತೋಷ, ಸಾರ್ಥಕತೆಯ ಭಾವ ನೀಡುವ ಮೂಲಕ ಬದುಕನ್ನು ಸುಂದರಗೊಳಿಸುತ್ತದೆ. ಜೀವನದ ಅರ್ಥಸಾರವನ್ನು ಅರಿಯಲು ಪ್ರತಿಯೊಬ್ಬರು ಸೇವಾಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಲಯನ್ಸ್‌ಕ್ಲಬ್ ಇದಕ್ಕೆ ಸೂಕ್ತ ವೇದಿಕೆ ಒದಗಿಸುತ್ತದೆ ಎಂದು ನುಡಿದರು.
2021-22ರ ಸಾಲಿಗೆ ಲೇಕ್ ಸಿಟಿ- ಬಿ.ಆರ್. ಪ್ರಾಜೆಕ್ಟ್ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮಹೇಶ್ ಪಿ. ಮಾತನಾಡಿ, ಈ ಬಾರಿ ಲಯನ್ಸ್ ಕ್ಲಬ್ ಮೂಲಕ ನೇತ್ರ, ದಂತ, ಹೃದ್ರೋಗ ತಪಾಸಣಾ ಶಿಬಿರ, ವನಮಹೋತ್ಸವ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲು ಪ್ರಯತ್ನಿಸಲಾಗುತ್ತದೆ. ಜೊತೆಗೆ ಸ್ಥಳೀಯವಾಗಿ ಕೊರೊನಾದಿಂದ ಪೀಡಿತರಾದ ಬಡ, ಶ್ರಮಿಕವರ್ಗಗಳನ್ನು ಗುರುತಿಸಿ ಅವರ ನೆರವಿಗೆ ನಿಲ್ಲುವ ಉದ್ದೇಶಗಳನ್ನು ಹೊಂದಿದೆ ಎಂದರು.
ಕಳೆದ ವರ್ಷದಲ್ಲಿ ಅಧ್ಯಕ್ಷರಾಗಿದ್ದ ಹೆಚ್.ಎಲ್. ರಮೇಶ್, ಕಾರ್ಯದರ್ಶಿ ಸ್ವರೂಪ್ ಜೈನ್, ಖಜಾಂಚಿ ತಮ್ಮಣ್ಣ ಜೆ.ಬಿ. ಅವರು ಹೊಸ ಅಧ್ಯಕ್ಷರಾದ ಮಹೇಶ್ ಪಿ., ಕಾರ್ಯದರ್ಶಿ ತಮ್ಮಣ್ಣ ಜೆ.ಬಿ. ಮತ್ತು ಖಜಾಂಚಿ ಅರವಿಂದ ಜಿ.ಎಂ. ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಪದಗ್ರಹಣ ಅಧಿಕಾರಿಗಳಾಗಿ ಪಿ.ಜಿ. ಶಿವಕುಮಾರ್ ಅವರು ಪ್ರತಿಜ್ಞಾ ವಿಧಿ ಭೋಧಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ವಿವಿಧ ಸದಸ್ಯರು, ಸ್ಥಳಿಯರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post