ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಮಂಗಳವಾರ ಮುಂಜಾನೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ (APMC Market) ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ರೈತರು, ವ್ಯಾಪಾರಿಗಳು ಮತ್ತು ಕೂಲಿಕಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸ್ಥಳದಲ್ಲೇ ಪರಿಶೀಲನೆ ನಡೆಸಿದರು.
ಬೆಳಗ್ಗೆ ಸುಮಾರು 7 ಗಂಟೆಗೆ ಮಾರುಕಟ್ಟೆಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು, ಈರುಳ್ಳಿ ಮಂಡಿಗಳಿಗೆ ತೆರಳಿ ಸ್ಥಳೀಯ ವರ್ತಕರು, ರೈತರು ಹಾಗೂ ಕೂಲಿಕಾರರೊಂದಿಗೆ ನೇರವಾಗಿ ಮಾತುಕತೆ ನಡೆಸಿದರು. ಮಾರುಕಟ್ಟೆಯಲ್ಲಿನ ವಾಸ್ತವ ಸ್ಥಿತಿಯನ್ನು ಅರಿಯಲು ಅಧಿಕಾರಿಗಳ ವರದಿಗಿಂತ ಸ್ಥಳದಲ್ಲಿರುವವರಿಂದಲೇ ಮಾಹಿತಿ ಪಡೆಯಲು ಮುಂದಾದರು.
D.K. Shivakumar : ಕೂಲಿಕಾರರ ಜೊತೆ ಕುಳಿತು ಇಡ್ಲಿ ಸೇವಿಸಿದ ಡಿಕೆಶಿ
ಮಾರುಕಟ್ಟೆ ಪರಿಶೀಲನೆ ವೇಳೆ ರಸ್ತೆ ಬದಿಯಲ್ಲಿದ್ದ ಸಣ್ಣ ಪೆಟ್ಟಿಗೆ ಹೋಟೆಲ್‌ಗೆ ತೆರಳಿದ ಡಿ.ಕೆ. ಶಿವಕುಮಾರ್, ಅಲ್ಲಿದ್ದ ಕೂಲಿ ಕಾರ್ಮಿಕರೊಂದಿಗೆ ಕುಳಿತು ಇಡ್ಲಿ ಸೇವಿಸಿದರು.
ಈ ವೇಳೆ ತಮ್ಮೊಂದಿಗೆ ಕುಳಿತಿದ್ದ ಕೂಲಿಕಾರರ ಉಪಹಾರದ ಹಣವನ್ನು ತಾವೇ ಪಾವತಿಸಲು ಮುಂದಾದ ಅವರು, ಹೋಟೆಲ್ ಮಾಲೀಕರಿಗೆ ₹500 ನೀಡಿ, ಕೂಲಿಕಾರರಿಂದ ಹಣ ಪಡೆಯಬೇಡಿ ಎಂದು ಹೇಳಿದರು. ಮುಖ್ಯಮಂತ್ರಿಗಳಂತೆಯೇ ಸರಳವಾಗಿ ಕೂಲಿಕಾರರೊಂದಿಗೆ ಕುಳಿತು ಉಪಹಾರ ಸೇವಿಸಿರುವುದು ಸ್ಥಳದಲ್ಲಿದ್ದವರ ಗಮನ ಸೆಳೆಯಿತು.
ಮಾರುಕಟ್ಟೆಯ ಅವ್ಯವಸ್ಥೆ ಕುರಿತು ದೂರು
ಮಾರುಕಟ್ಟೆ ಪರಿಶೀಲನೆ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಸದಸ್ಯ ಅರುಣ್ ಪರಮೇಶ್ವರ್ ಸೇರಿದಂತೆ ಸ್ಥಳೀಯರು ಮಾರುಕಟ್ಟೆಯಲ್ಲಿರುವ ವಿವಿಧ ಸಮಸ್ಯೆಗಳನ್ನು ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದರು.
ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳ ಕೊರತೆ ಹಾಗೂ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಅವರು ದೂರಿದರು. ರೈತರು ಹಾಗೂ ಕೂಲಿಕಾರರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
‘20 ರೂ. ಕೊಟ್ಟು ನೀರು ಖರೀದಿಸಬೇಕು’
ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಬರುವ ರೈತರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬ ಪ್ರಮುಖ ದೂರು ಕೇಳಿಬಂತು. ನೀರಿನ ಸೌಲಭ್ಯವಿಲ್ಲದ ಕಾರಣ ರೈತರು ಒಂದು ಬಾಟಲಿ ನೀರಿಗೆ ₹20 ನೀಡಿ ಖರೀದಿಸುವ ಪರಿಸ್ಥಿತಿ ಇದೆ ಎಂದು ಸ್ಥಳೀಯರು ಸಚಿವರ ಗಮನಕ್ಕೆ ತಂದರು.
ಅದೇ ರೀತಿ ಮಾರುಕಟ್ಟೆಯಲ್ಲಿರುವ ಶೌಚಾಲಯಗಳ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಎಂದು ದೂರಿದರು. ದೂರದ ಊರುಗಳಿಂದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಬರುವ ರೈತರಿಗೆ ಮೂಲಭೂತ ಸೌಲಭ್ಯಗಳೇ ಇಲ್ಲದಿರುವುದು ಮಾರುಕಟ್ಟೆಯ ಆಡಳಿತಾತ್ಮಕ ನಿರ್ವಹಣೆಯ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದು ಸ್ಥಳೀಯರು ಹೇಳಿದರು.
ಹಿಂದಿನ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ
ರೈತರಿಗಾಗಿ ನಿರ್ಮಿಸಲಾಗಿರುವ ಈ ಮಾರುಕಟ್ಟೆಯಲ್ಲಿ ಹಿಂದಿನ ಅವಧಿಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ಹಾಗೂ ಹಣಕಾಸಿನ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇದ್ದು, ಅಗತ್ಯವಿದ್ದರೆ ಅವುಗಳನ್ನು ಒದಗಿಸುವುದಾಗಿ ಸ್ಥಳೀಯರು ಡಿ.ಕೆ. ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ.
Also read>> ದೆಹಲಿ PG ಕಟ್ಟಡ ಕುಸಿತ ದುರಂತ: FIRನಲ್ಲಿ ಸ್ಫೋಟಕ ಮಾಹಿತಿ
‘ಮಧ್ಯವರ್ತಿಗಳ ಹಾವಳಿ ವಿಪರೀತ’
ಮಂಡಿ ವ್ಯಾಪಾರಿಗಳು ಹಾಗೂ ರೈತರೊಂದಿಗೆ ನಡೆಸಿದ ಮಾತುಕತೆಯಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಚಿವರ ಮುಂದೆ ತೋಡಿಕೊಂಡರು.
ಮಾರುಕಟ್ಟೆಯಲ್ಲಿ ಅಧಿಕಾರಿಗಳ ಸಮರ್ಪಕ ನಿಯಂತ್ರಣ ಇಲ್ಲದ ಕಾರಣ ವ್ಯಾಪಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಇದರಿಂದ ಕೃಷಿ ಉತ್ಪನ್ನಗಳನ್ನು ಬೆಳೆದ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಚಿತ್ರದುರ್ಗ ಸೇರಿದಂತೆ ಹೊರ ಜಿಲ್ಲೆಗಳಲ್ಲಿಯೂ ಮಾರುಕಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿರುವುದರಿಂದ ರೈತರು ಯಶವಂತಪುರ ಎಪಿಎಂಸಿಗೆ ಬರುತ್ತಿದ್ದಾರೆ. ಆದರೆ ಇಲ್ಲಿಯೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ರೈತರಿಗೆ ನಿರೀಕ್ಷಿತ ಲಾಭ ಸಿಗುತ್ತಿಲ್ಲ ಎಂದು ಹೇಳಿದರು.
65 ಕೆಜಿ ಮೂಟೆಗೆ 50 ಕೆಜಿ ಲೆಕ್ಕ?
ತೂಕದಲ್ಲಿಯೂ ಭಾರೀ ಪ್ರಮಾಣದ ಮೋಸ ನಡೆಯುತ್ತಿದೆ ಎಂಬ ಆರೋಪವನ್ನು ರೈತರು ಸಚಿವರ ಮುಂದಿಟ್ಟರು. 65 ಕೆಜಿ ತೂಕದ ಮೂಟೆಯನ್ನು ಕೇವಲ 50 ಕೆಜಿ ಎಂದು ಲೆಕ್ಕ ಹಾಕಲಾಗುತ್ತಿದೆ ಎಂದು ರೈತರು ದೂರಿದರು.
ತೂಕದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಹಾಗೂ ಅಧಿಕಾರಿಗಳ ಸಮರ್ಪಕ ಮೇಲ್ವಿಚಾರಣೆ ಇಲ್ಲದಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಅವರು ಹೇಳಿದರು. ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಮತ್ತು ರೈತರಿಗೆ ನ್ಯಾಯಯುತ ದರ ಹಾಗೂ ನಿಖರ ತೂಕ ದೊರೆಯುವಂತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಥಳದಲ್ಲೇ ಸಮಸ್ಯೆ ಆಲಿಸಿದ ಡಿಕೆಶಿ
ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ದಿಢೀರ್ ಭೇಟಿಯ ವೇಳೆ ಡಿ.ಕೆ. ಶಿವಕುಮಾರ್ ಅವರು ರೈತರು, ವ್ಯಾಪಾರಿಗಳು, ಕೂಲಿಕಾರರು ಹಾಗೂ ಸ್ಥಳೀಯರಿಂದ ನೇರವಾಗಿ ಮಾಹಿತಿ ಪಡೆದುಕೊಂಡರು. ಮಾರುಕಟ್ಟೆಯಲ್ಲಿನ ಮೂಲಸೌಕರ್ಯ ಕೊರತೆ, ಕುಡಿಯುವ ನೀರು, ಶೌಚಾಲಯ, ಮಧ್ಯವರ್ತಿಗಳ ಹಾವಳಿ, ತೂಕದಲ್ಲಿ ಮೋಸ ಹಾಗೂ ಆಡಳಿತಾತ್ಮಕ ಅವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳು ಅವರ ಗಮನಕ್ಕೆ ಬಂದಿವೆ.
ರೈತರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿರುವ ಹಿನ್ನೆಲೆಯಲ್ಲಿ, ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿನ ಅವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







