ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿಷ್ಠಿತ ಮೈಸೂರು ದಸರಾ (Mysuru Dasara) ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಕರಾಟೆ ಕ್ರೀಡೆಯನ್ನು ಸೇರ್ಪಡೆಗೊಳಿಸಿರುವುದು ಕ್ರೀಡಾಪಟುಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ ಎಂದು ಜಿಲ್ಲಾ ಕರಾಟೆ (Karate) ಅಸೋಸಿಯೇಷನ್‌ನ ಗೌರವಾಧ್ಯಕ್ಷ ಶಿವಮೊಗ್ಗ ವಿನೋದ್ ಸಂತಸ ವ್ಯಕ್ತಪಡಿಸಿದರು.
ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಮೈಸೂರು ದಸರಾ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಸಲುವಾಗಿ ಜಿಲ್ಲಾ ಮಟ್ಟದ ಆಯ್ಕೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಶಿವಮೊಗ್ಗ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 10ರಂದು ಜಿಲ್ಲಾ ಮಟ್ಟದ ಕರಾಟೆ ಆಯ್ಕೆ ಕ್ರೀಡಾಕೂಟ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ಕರಾಟೆ ತರಬೇತುದಾರರು ಹಾಗೂ ಕ್ರೀಡಾಪಟುಗಳನ್ನು ಒಳಗೊಂಡಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರತಿ ವಿಭಾಗದಿಂದ ಇಬ್ಬರು ಕ್ರೀಡಾಪಟುಗಳನ್ನು ವಿಭಾಗ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಬಳಿಕ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಪ್ರತಿ ತೂಕದ ವಿಭಾಗದಿಂದ ಇಬ್ಬರು ಕ್ರೀಡಾಪಟುಗಳನ್ನು ಅಂತಿಮವಾಗಿ ಮೈಸೂರು ದಸರಾ ಕ್ರೀಡಾಕೂಟದ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ ಎಂದು ವಿವರಿಸಿದರು.
Mysuru Dasara : ಆಯ್ಕೆಯಾದ ಕ್ರೀಡಾಪಟುಗಳಿಗೆ ಇಲಾಖೆಯಿಂದ ಸೌಲಭ್ಯ
ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕ್ರೀಡಾಪಟುಗಳಿಗೆ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅಗತ್ಯವಿರುವ ಡಿಎ ಮತ್ತು ಟಿಎ ಸೌಲಭ್ಯವನ್ನು ಕ್ರೀಡಾ ಇಲಾಖೆಯ ವತಿಯಿಂದ ಒದಗಿಸಲಾಗುತ್ತದೆ. ಅದೇ ರೀತಿ ರಾಜ್ಯ ಮಟ್ಟದ ಮೈಸೂರು ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರವನ್ನು ಇಲಾಖೆ ವತಿಯಿಂದ ನೀಡಲಾಗುತ್ತದೆ ಎಂದು ಶಿವಮೊಗ್ಗ ವಿನೋದ್ ತಿಳಿಸಿದರು.
ಜಿಲ್ಲೆಯಲ್ಲಿ ಕರಾಟೆ ಕ್ರೀಡೆಯಲ್ಲಿ ಉತ್ತಮ ಪ್ರತಿಭೆ ಹೊಂದಿರುವ ಹಲವಾರು ಕ್ರೀಡಾಪಟುಗಳಿದ್ದು, ಅವರಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಮೈಸೂರು ದಸರಾ ಕ್ರೀಡಾಕೂಟ ಉತ್ತಮ ವೇದಿಕೆಯಾಗಲಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ಪ್ರತಿಭಾನ್ವಿತ ಕರಾಟೆ ಕ್ರೀಡಾಪಟುಗಳು ಯಾವುದೇ ಹಿಂಜರಿಕೆಯಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಮಟ್ಟದ ಆಯ್ಕೆ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
Also read>> ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಡಿಕೆಶಿ ದಿಢೀರ್ ಭೇಟಿ; ಕೂಲಿಕಾರರ ಜೊತೆ ಇಡ್ಲಿ ಸೇವಿಸಿ ಸಮಸ್ಯೆ ಆಲಿಕೆ
ಕರಾಟೆ ಸಂಸ್ಥೆಗೆ ಹೊಸ ಪದಾಧಿಕಾರಿಗಳ ನೇಮಕ
ಜಿಲ್ಲಾ ಕರಾಟೆ ಸಂಸ್ಥೆಯನ್ನು ಮತ್ತಷ್ಟು ಸಂಘಟನಾತ್ಮಕವಾಗಿ ಬಲಪಡಿಸುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಂಸ್ಥೆಯ ಚಟುವಟಿಕೆಗಳನ್ನು ಜಿಲ್ಲಾದ್ಯಂತ ವಿಸ್ತರಿಸುವುದು, ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ಮತ್ತು ಸ್ಪರ್ಧೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಶಿಕಾರಿಪುರದ ಕರಾಟೆ ತರಬೇತುದಾರ ಮಿಥುನ್ ಅವರನ್ನು ಜಿಲ್ಲಾ ಕರಾಟೆ ಅಸೋಸಿಯೇಷನ್‌ನ ನೂತನ ಸಹ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಅವರು ಪ್ರಕಟಿಸಿದರು.
Karate : ಆನ್‌ಲೈನ್ ನೋಂದಣಿ ಕಡ್ಡಾಯ
ಜಿಲ್ಲಾ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಇಚ್ಛಿಸುವ ಕ್ರೀಡಾಪಟುಗಳು ಕ್ರೀಡಾ ಇಲಾಖೆಯ ಅಧಿಕೃತ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಂಡು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಆಯ್ಕೆ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಹಾಗೂ ನೋಂದಣಿ ಪ್ರಕ್ರಿಯೆ ಕುರಿತು ವಿವರಗಳಿಗಾಗಿ 9900933653 ಅಥವಾ 9611474304 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಶಿವಮೊಗ್ಗ ವಿನೋದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖೀಬ್, ಅಹಮದ್, ಮೀನಾಕ್ಷಿ, ಬಾಲರಾಜ್, ಪಂಚಪ್ಪ, ದೇವರಾಜ್, ನರಸಿಂಹ ಸ್ವಾಮಿ, ಮಿಥುನ್, ಇಫ್ರಾನ್ ಹಾಗೂ ಹರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







