ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಜಗತ್ತಿನ ಸಾಹಿತ್ಯದಲ್ಲಿಯೇ ಅಗ್ರಮಾನ್ಯವಾದ ಕೃತಿಯೆಂದು ಭಾಜನವಾಗಿರುವ ಆದಿ ಕಾವ್ಯವೆಂದೇ ಕರೆಸಿಕೊಳ್ಳುವ ಕೃತಿ ಶ್ರೀಮದ್ ರಾಮಾಯಣ. ಇದು ಆದಿ ಕವಿಯಾದ ವಾಲ್ಮೀಕಿಯಿಂದ ವಿರಚಿತವಾಗಿದ್ದು ‘ಚತುರ್ವಿಂಶತಿ ಸಾಹಸ್ರೀ ಸಂಹಿತಾ’ ಎಂದು ಕರೆಯುವ ಈ ಐತಿಹಾಸಿಕ ಮಹಾಕಾವ್ಯ ಪ್ರಸಿದ್ಧ ಗಾಯತ್ರಿ ಮಂತ್ರದ ಅಕ್ಷರಗಳಲ್ಲಿರುವ ಸಂಖ್ಯೆಯ ಸಹಸ್ರಗುಣವಾದ 24,000 ಶ್ಲೋಕಗಳನ್ನು ಹೊಂದಿದೆ.
ಪ್ರಸ್ತುತ ರಾಮಾಯಣ #Ramayana ಕಾವ್ಯದಲ್ಲಿ ರಾಮನು ಮಾತಾ ಪಿತೃ ಭಕ್ತನೂ, ಬಂಧು ನಿಷ್ಠೆ ಹೊಂದಿದವನೂ, ಮಹಾವೀರ, ಸತ್ಯವಾದಿ, ಧರ್ಮಪಾಲಕ, ದುಷ್ಟಸಂಹಾರಕನಾಗಿ ಚಿತ್ರಿತನಾದರೆ, ಪಾವಿತ್ರ್ಯ ದ ಸಂಕೇತವೇ ಸೀತೆಯಾಗಿದ್ದಾಳೆ. ಆಕೆ ಶ್ರೀರಾಮನ ಸಹಧರ್ಮಚಾರಿಣಿ. ಲಕ್ಷ್ಮಣ ರಾಮನ ನೆರಳಿನಂತೆ ಆತನ ಹಿಂಬಾಲಕ. ಭರತನ ಭ್ರಾತೃಪ್ರೇಮ, ಹನುಮನ ಸ್ವಾಮಿ ಭಕ್ತಿ, ಶ್ರೀರಾಮ – ಸುಗ್ರೀವ – ವಿಭೀಷಣರ ಸ್ನೇಹ. ಆನಂತರ ದುಷ್ಟತೆಯ ಪ್ರತೀಕವಾದ ರಾವಣ ಸಂಹಾರ. ಅಂತ್ಯದಲ್ಲಿ ಧರ್ಮಕ್ಕೆ ಜಯವೆಂಬ ಪ್ರತಿಪಾದನೆ. ಮೊದಲಾದ ವಿಷಯಗಳು ನಿರೂಪಿತವಾಗಿದೆ. ಹೀಗೆ ಉತ್ತಮ ಆದರ್ಶಗಳನ್ನು, ಉಜ್ವಲ ಧರ್ಮವನ್ನು, ಸುಂದರವಾಗಿ ಮತ್ತು ಹೃದಯ ಸ್ಪರ್ಶಿಯಾಗಿ ಕಟ್ಟಿಕೊಡುವ ಕಾವ್ಯ ಬೇರೆಲ್ಲಿಯೂ ಕಾಣಬರದು. ಇದರಲ್ಲಿನ ರಾಮ ಆದರ್ಶದ ಕೇಂದ್ರ ಬಿಂದು. ಪ್ರಸ್ತುತ ಸಮಾಜದ ತಲ್ಲಣಗಳಿಗೆ ರಾಮರಾಜ್ಯದ ಕಲ್ಪನೆ ಪರಿಹಾರವಾಗಬಲ್ಲದು. ಹಾಗಾಗಿ ಬರೀ ರಾಮರಾಜ್ಯ ಅಂದರೆ ಸಾಕಾಗದು, ಬದಲಿಗೆ ರಾಮನ ಆದರ್ಶ ಹೇಗಿತ್ತು ಅನ್ನೋದನ್ನ ತಿಳಿಯಬೇಕು.
‘ರಾಮೋ ವಿಗ್ರಹವಾನ್ ಧರ್ಮಃ’ ಎಂದು ಹೇಗೆ ಹೇಳಿದ್ದಾರೆಂದು ತಿಳಿಯುವ ಅಗತ್ಯವಿದೆ. ಆಗ ಮಾತ್ರ ಮಾತು ಕೃತಿಯಾಗಬಹುದು. ಆದ್ದರಿಂದ ಈ ಒಂದು ಉದಾತ್ತ ಚಿಂತನೆಯಿಂದಲೇ ರಾಮರಾಜ್ಯದ ಕಲ್ಪನೆಯೊಂದಿಗೆ ರಾಮನ ಸಂದೇಶ ಪ್ರಸಾರವಾಗಬೇಕು ಅನ್ನುವ ದೃಷ್ಟಿಯಿಂದಲೇ ಸ್ವಾಮಿಗಳವರಲ್ಲಿ ವಿಶೇಷವಾಗಿ ವಿನಂತಿ ಮಾಡಿ ಈ ವಿಷಯವನ್ನೇ ಪ್ರವಚನ ಹಾಗೂ ಅನುಗ್ರಹ ಸಂದೇಶಕ್ಕೆ ಇಡಲಾಗಿದೆ.
ಮೌಲ್ಯಗಳ ಕೊರತೆ ಈ ದಿನಗಳಲ್ಲಿ ಹೆಚ್ಚು ಕಂಡುಬರುವ ವಿಷಯ. ಕುಟುಂಬ ವ್ಯವಸ್ಥೆ ಸದೃಢವಾಗಿರಲು ರಾಮನ ಆದರ್ಶ ಬೇಕು. ಆತ ಏಕಪತ್ನಿ ವ್ರತಸ್ಥ, ಭರತ ಲಕ್ಷ್ಮಣರನ್ನು ಒಟ್ಟಿಗೆ ಕರೆದೊಯ್ದು ಭಾತೃತ್ವದ ಗಟ್ಟಿಯಾದ ಪರಿಕಲ್ಪನೆ ನೀಡಿದ. ಅಸೂಯೆ ಅಂದು ಕೂಡ ಇತ್ತು. ಆದರೆ ಕುಟುಂಬ ಹಾಳಾಗಲಿಲ್ಲ. ಹೀಗೆ ಇನ್ನೂ ಹತ್ತು ಹಲವು ಕೌಟುಂಬಿಕ ಮೌಲ್ಯಗಳನ್ನು ರಾಮಾಯಣದಲ್ಲಿರುವುದನ್ನು ಶ್ರೀಗಳವರು ತಮ್ಮ ಪ್ರವಚನದಲ್ಲಿ ಕಟ್ಟಿಕೊಡಲಿದ್ದಾರೆ. ನಮ್ಮ ಯೋಚನೆಗಿಂತಲೂ ಬೇರೆ ಬೇರೆ ಆಯಾಮಗಳಲ್ಲಿ, ಕ್ಲಿಷ್ಟ ವಿಷಯಗಳನ್ನು ಸರಳ ಸುಲಭವಾದ ಶೈಲಿಯಲ್ಲಿ ತಿಳಿಸುವುದೇ ಸ್ವಾಮಿಗಳವರ ವಿಶೇಷತೆ. ಹಾಗಾಗಿಯೇ ಶ್ರೀಗಂಧ ಆಯೋಜಿಸಿದೆ ಈ ಕಾರ್ಯಕ್ರಮ.
ಶ್ರೀಗಂಧ #SriGandha ಎಂದರೆ ಸದ್ಭಾವ, ಸದ್ವಿಚಾರ, ಸದಭಿರುಚಿ, ಸತ್ಕಾರ್ಯ ಎನ್ನುವುದಕ್ಕೆ ಅನ್ವರ್ಥವಾಗಿರುವಂತೆ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿ ಕಲಾರಾಧಕರ ಮೆಚ್ಚುಗೆಗೆ ಪಾತ್ರವಾಗಿದ್ದು. ಇದಕ್ಕೆ ಪ್ರೇರಕ ಶಕ್ತಿಯಾಗಿ ನಿಂತವರು ಸನ್ಮಾನ್ಯ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶ್ರೀಗಂಧದ ಅಧ್ಯಕ್ಷರಾದ ಶ್ರೀ ಕೆ.ಎಸ್. ಈಶ್ವರಪ್ಪನವರು. #KSEshwarappa ನಾಡಿನ ಖ್ಯಾತನಾಮರ ಉಪನ್ಯಾಸ, ಗಾಯನ, ನಾಟ್ಯವೇ ಮೊದಲಾದ ಆಧ್ಯಾತ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದ ಸಂಸ್ಥೆ. ಈಗ ಮತ್ತೊಂದು ಜ್ಞಾನ ಯಜ್ಞಕ್ಕೆ ತಯಾರಾಗಿದೆ. ಖ್ಯಾತವಾಗ್ಮಿಗಳು ನಾಡಿನ ಅಗ್ರಮಾನ್ಯ ಸಂತರಲ್ಲಿ ಒಬ್ಬರಾದ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ #Madhvacharya ಮೂಲ ಮಹಾಸಂಸ್ಥಾನ ಶ್ರೀಮದ್ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರಿಂದ ಸಾರ್ವಜನಿಕವಾಗಿ ಮೂರು ದಿನಗಳ ‘ಶ್ರೀ ರಾಮನ ಆದರ್ಶ’ ಎಂಬ ವಿಶೇಷ ಪ್ರವಚನ ಹಾಗೂ ಆಶೀರ್ವಚನ ನೀಡುವ ಕಾರ್ಯಕ್ರಮ ಆಯೋಜಿಸಿದೆ.
ಉತ್ತರಾದಿ ಮಠಾಧೀಶರು ಗುರುಗಳೂ ಹೌದು. ಖ್ಯಾತ ವಾಗ್ಮಿಗಳೂ ಹೌದು. ತಮ್ಮ ಪ್ರಖರ ವಾಗ್ಝರಿಯಿಂದಲೇ ಎಲ್ಲರಿಗೂ ಚಿರಪರಿಚಿತರಾದ ಶ್ರೀಗಳು ಸೆಲೆಬ್ರಿಟಿ ಪಟ್ಟಕ್ಕೇರಿದ್ದಾರೆ. ಅವರ ಪ್ರವಚನದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿಯಾಗಿರುವುದನ್ನು ನಾವಿಗಾಗಲೇ ಕಂಡಿದ್ದೇವೆ. ಅತ್ಯಂತ ಪ್ರೇರಣಾದಾಯಿಯಾದ ಪ್ರವಚನ ಅವರದು. ಅವರ ಪ್ರವಚನದಿಂದಲೇ ಅನೇಕರ ಬಾಳು ಬೆಳಗಿದ್ದನ್ನು ಕಂಡಿದ್ದೇವೆ. ಅಂತಹ ಮಹನೀಯರು ನಮ್ಮ ಶಿವಮೊಗ್ಗ ನಗರಕ್ಕೆ ಆಗಮಿಸಿ ನಮ್ಮನ್ನೆಲ್ಲ ಅನುಗ್ರಹಿಸಲಿದ್ದಾರೆ.
1996 ಏಪ್ರಿಲ್ 24ರಂದು ಶ್ರೀ ಸತ್ಯಪ್ರಮೋದ ತೀರ್ಥ ಸ್ವಾಮೀಜಿಯವರ #SatyatmaThirthaSwamiji ಸಮ್ಮುಖದಲ್ಲಿ ತಮಿಳುನಾಡಿನ ತಿರು ಕೊಯ್ಲೂರು ರಘೋತ್ತಮ ತೀರ್ಥ ಬೃಂದಾವನದ ಸನ್ನಿಧಿಯಲ್ಲಿ, ಬ್ರಹ್ಮಚರ್ಯದಿಂದ ತಮ್ಮ 23ನೇ ವಯಸ್ಸಿನಲ್ಲಿ ಸರ್ವಜ್ಞರಾಗಿದ್ದವರು ಸನ್ಯಾಸ ದೀಕ್ಷೆ ಸ್ವೀಕರಿಸಿ ಸತ್ಯಾತ್ಮತೀರ್ಥರೆಂದು ನಾಮಾಂಕಿತರಾದರು. ಈ ರೀತಿಯಾಗಿ ಬ್ರಹ್ಮಚರ್ಯದಿಂದ ಸನ್ಯಾಸತ್ವ ಸ್ವೀಕರಿಸಿದ ಕಾರಣಕ್ಕಾಗಿ ಅವರನ್ನು ಅಭಿನವ ರಘೋತ್ತಮತೀರ್ಥರೆಂದು ಕರೆಯುತ್ತಾರೆ. ಗುರುಗಳು ಬೆಂಗಳೂರು, ಗುಲ್ಬರ್ಗ, ಮಳಖೇಡ, ಉಡುಪಿ, ರಾಜಮಂಡ್ರಿ, ಹೈದರಾಬಾದ್, ಪುಣೆ, ರಾಯಚೂರು, ಧಾರವಾಡವೇ ಮೊದಲಾದ ಕಡೆ ತಮ್ಮ ಆಧ್ಯಾತ್ಮಿಕ ಪ್ರವಚನ ನೀಡಿದ್ದಾರೆ. ವ್ಯಕ್ತಿತ್ವ ವಿಕಸನದಂತಹ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಧರ್ಮ ಮತ್ತು ತತ್ವಶಾಸ್ತ್ರ ದಂತಹ ವಿಷಯಗಳ ಕುರಿತು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮರಾಠಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಪ್ರವಚನ ನೀಡಿದವರಾಗಿದ್ದಾರೆ.
ದ್ವೈತ ತತ್ವಶಾಸ್ತ್ರವನ್ನು ಪುನರುಜ್ಜೀವನಗೊಳಿಸಿದ ಮಹಾ ಯತಿ ಇವರು. ತತ್ವಜ್ಞಾನಿ, ವಿದ್ವಾಂಸ, ಅಧ್ಯಾತ್ಮಿಕ ಚಿಂತಕರಾದ ಉತ್ತರಾದಿ ಮಠಾಧೀಶರು 1998ರಲ್ಲಿ ವಿಶ್ವ ಮಾಧ್ವ ಮಹಾ ಪರಿಷತ್ ನ ಸಂಸ್ಥಾಪಕರು. ಸಾಮಾಜಿಕವಾಗಿಯೂ ಅನೇಕ ಕೈಂಕರ್ಯಗಳನ್ನು ನೆರವೇರಿಸಿದ ಗುರುಗಳು ಪ್ರಸ್ತುತ ಯುವ ಸಮುದಾಯಕ್ಕೆ ಒಂದು ಪ್ರೇರಕ ಶಕ್ತಿಯಾಗಿದ್ದಾರೆ ಎಂಬುವುದರಲ್ಲಿ ಸಂಶಯವಿಲ್ಲ. ಇಂತಹ ಮಹನೀಯ ಸಂತರು ಶಿವಮೊಗ್ಗದ ನೆಲಕ್ಕೆ ಆಗಮಿಸಿ ನಮ್ಮನ್ನೆಲ್ಲ ಪಾವನಗೊಳಿಸಲೋಸುಗವೇ ಶ್ರೀಗಂಧ ಸಂಸ್ಥೆ ವಿಶೇಷವಾದ ಮನವಿ ಮಾಡಿ ಡಿಸೆಂಬರ್ 31, ಜನವರಿ 1 ಹಾಗೂ 2ರಂದು ಶುಭ ಮಂಗಳ ಸಮುದಾಯ ಭವನದಲ್ಲಿ ಪ್ರತಿನಿತ್ಯ ಸಂಜೆ 6ರಿಂದ ವಿವಿಧ ವಿದ್ವಾಂಸರುಗಳಿಂದ `ಸಾನಾತನ ಧರ್ಮ`ದ ಕುರಿತಾಗಿ ಚರ್ಚೆ ಹಾಗೂ 6.30ರಿಂದ ” ರಾಮನ ಆದರ್ಶ” ಎನ್ನುವ ಉತ್ತರಾದಿ #UttaradiMatha ಗುರುಗಳ ಪ್ರವಚನ ಆಯೋಜಿಸಿದೆ.
ಧಾರ್ಮಿಕ ಮನೋಭಾವವನ್ನು ಇನ್ನಷ್ಟು ಉದ್ದೀಪನಗೊಳಿಸುವ ಕಾರ್ಯಕ್ರಮ ಇದು. ಕ್ಯಾಲೆಂಡರ್ ಇಯರ್ ನ ಸ್ವಾಗತವನ್ನು ಈ ತರದ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ಕೊಡುವಂತೆ ಆಗಬೇಕೆಂಬುದು ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ, ಸಾಂಸ್ಕೃತಿಕ ರಾಯಭಾರಿಯಾದ ಶ್ರೀ ಕೆ.ಎಸ್. ಈಶ್ವರಪ್ಪನವರ ಅಭಿಲಾಷೆ. ಅದರಂತೆ ಅವರ ಪುತ್ರ ಕೆ.ಇ. ಕಾಂತೇಶ್ #KEKanteesh ಅವರು ಸಹ. ಇದು ಸಾರ್ವಜನಿಕವಾಗಿ ಆಯೋಜನೆಗೊಂಡ ಕಾರ್ಯಕ್ರಮ. ಸಮಾಜದ ಎಲ್ಲ ವರ್ಗದ ಜನರು ಭಾಗವಹಿಸಿ ಅದರಲ್ಲೂ ಮುಖ್ಯವಾಗಿ ಯುವ ಸಮುದಾಯ ಬಹು ಸಂಖ್ಯೆಯಲ್ಲಿ ಆಗಮಿಸಿ, ಈ ಜ್ಞಾನ ಯಜ್ಞದಲ್ಲಿ ಭಾಗಿಯಾಗಬೇಕೆಂದು ವಿನಂತಿಸಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post