ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಿಶ್ವವೇ ತಲ್ಲಣಿಸಿ, ಪರದಾಡುವ ಸ್ಥಿತಿಗೆ ತಂದು ನಿಲ್ಲಿಸಿದೆ ಕೊರೋನಾ ಮಹಾಮಾರಿ. ಸಿರಿವಂತ ರಾಷ್ಟ್ರಗಳೂ ಕೈಚೆಲ್ಲುವ ಪರಿಸ್ಥಿತಿಯಲ್ಲಿವೆ. ಮುಂದುವರೆದ ದೇಶಗಳಾದ ಇಟಲಿ, ಫ್ರಾನ್ಸ್, ಅಮೆರಿಕಾ ದೇಶಗಳೂ ಕಂಗಲಾಗಿವೆ. ತಮ್ಮಲ್ಲಿ ವಿಶ್ವದರ್ಜೆಯ ವೈದ್ಯಕೀಯ ಸವಲತ್ತುಗಳು ಇದ್ದರೂ ಕೊರೋನಾ ಸಾಂಕ್ರಾಮಿಕವನ್ನು ತಡೆಗಟ್ಟಲು ಆಗುತ್ತಿಲ್ಲ.
ಮುಂಜಾನೆಯ ಸೂರ್ಯನ ತಾಪದಂತೆ ಏರುತ್ತಿರುವ ಸಾವಿನ ಗಣತಿಯನ್ನು ನಿಲ್ಲಿಸಲಾಗುತ್ತಿಲ್ಲ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪರಿಸ್ಥಿತಿ ಹೀಗಾದರೆ ಅಭಿವೃದ್ಧಿಶೀಲ ರಾಷ್ಟ್ರಗಳ ಕತೆಯಂತೂ ಇನ್ನಷ್ಟೂ ಶೋಚನೀಯ ಆಗಿವೆ. ವಿಶ್ವದಾದ್ಯಂತ ಲಕ್ಷಗಟ್ಟಲೆ ಜನರು ಗತ ಪ್ರಾಣರಾಗಿದ್ದಾರೆ. ಸುದ್ದಿ ಮೂಲಗಳ ಪ್ರಕಾರ ಸಾವಿರದ (ಸಾವು ಇರದ) ದೇಶಗಳೇ ಇಲ್ಲ. ಭಾರತಕ್ಕೆ ಜನವರಿ ತಿಂಗಳಲ್ಲಿ ಆಮದಾದ ಕೊರೋನಾ ಡ್ರ್ಯಾಗನ್… ಮೆಲ್ಲ… ಮೆಲ್ಲನೆ… ಬಂದು..ಉಸಿರಾಡಿ….. ಹರಿದಾಡಿ ಈಗ ಹೆಡೆಯೆತ್ತಿ ಬುಸುಗುಟ್ಟುತ್ತಿದೆ. ಬುಸುಗುಡುತ್ತಿರುವ ವಿಷಗಾಳಿಗೆ ಸತ್ತವರ ಸಂಖ್ಯೆ ಸಾವಿರದ ಮೇಲಾಗಿದೆ.
ಸೋಂಕಿತರ ಸಂಖ್ಯೆ ಲಕ್ಷದತ್ತ ಲಕ್ಷ ವಹಿಸಿದೆ. ದೂರದೃಷ್ಟಿಯ ನಮ್ಮ ರಾಷ್ಟ್ರದ ನಾಯಕರು ಮಾರ್ಚ್ 22ರಂದು ಜನತಾ ಕರ್ಫ್ಯೂ ಆಚರಿಸಿ ಎಂದು ಕರೆಕೊಟ್ಚರು. ಮಾರ್ಚ್ 25ರಿಂದ ಎಪ್ರಿಲ್ 14, ಎಪ್ರಿಲ್ 15ರಿಂದ ಮೇ 4, ಹಾಗೂ ಮೇ 5ರಿಂದ ಮೇ 17ರವರೆಗಿನ ಮೂರು ಹಂತದ ಲಾಕ್ ಡೌನ್ ಜಾರಿಗೆ ತಂದರು. ಇನ್ನು ಮುಂದಕ್ಕೆ ಆಯಾ ರಾಜ್ಯಗಳು ಮುಂದುವರಿಸುವ ಸಂಭವಗಳೂ ಒದಗಿಬರಬಹುದು.
ಶೇಕಡಾ 70ರಿಂದ 80 ಜನರು ಲಾಕ್ ಡೌನ್ ನಿಯಮಗಳನ್ನು ಪಾಲಿಸಿದರೆ ಉಳಿದ ಜನರು ಪಾಲಿಸುತ್ತಿಲ್ಲ. ನಮ್ಮ ದೇವರು ಕಾಪಾಡುತ್ತಾನೆಂದು ಸಾಂಕ್ರಾಮಿಕವನ್ನು ಸಾಂಘಿಕವಾಗಿ ಪಸರಿಸುವ ಪ್ರಯತ್ನವನ್ನು ಮಾಡುತ್ತಿರುವುದು ಖಂಡನೀಯ ಮತ್ತು ಯೋಚನೀಯವೂ ಆಗಿದೆ. ಲಾಕ್ ಡೌನ್ ಸಮಯದಲ್ಲಿ ಸಮಾಜದ ವಿವಿಧ ವರ್ಗಗಳ ಮನಃಸ್ಥಿತಿ ಹೇಗಿರಬಹುದು ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಇಲ್ಲಿ ಹೇಳಿರುವುದು ಎಲ್ಲವೂ ಪರಮ ಸತ್ಯವಾಗಿರಬೇಕೆಂದೇನೂ ಇಲ್ಲ. ಊರಿನಿಂದ ಊರಿಗೆ, ಜನರಿಂದ ಜನರಿಗೆ ಬದಲಾಗಬಹುದು.
ವಿದ್ಯಾರ್ಥಿಗಳು
ಪರೀಕ್ಷೆಗೆ ಹಾಜರಾಗುತ್ತಿದ್ದ ಹಾಗೂ ಹಾಜರಾಗಬೇಕಿದ್ದ ವಿದ್ಯಾರ್ಥಿಗಳಲ್ಲಿ ಮಿಶ್ರ ಅಭಿಪ್ರಾಯಗಳು ವ್ಯಕ್ತಗೊಂಡಿವೆ. ಕಷ್ಟಪಟ್ಟು ಅಭ್ಯಾಸ ಮಾಡಿರುವ, ಹೆಚ್ಚು ಅಂಕಗಳನ್ನು ಗಳಿಸುವ ವಿಶ್ವಾಸವಿದ್ದ ವಿದ್ಯಾರ್ಥಿಗಳಿಗೆ ಲಾಕ್ ಡೌನ್ ಮೊದಲಿಗೆ ಸಂತೋಷದಾಯಕವಾಗಿರಲಿಲ್ಲ. ನಡೆಯುತ್ತೆ… ಚಲ್ತಹಿ ಗುಂಪಿಗೆ.. ಮುಂದೂಲ್ಪಡುತ್ತದೆ.. ಎಂದಾಗ ಸಂತಸವೇ ಆಗಿದೆ. ಇನ್ನೂ ಪರೀಕ್ಷೆ ಮಾಡದೆ ಮೇಲಕ್ಕೆರಿಸುತ್ತೇವೆ ಎಂದಾಗ ಉಲಿದು ನಲಿದವರೂ ಇರಬಹುದು. ತಾಂತ್ರಿಕ ವಿದ್ಯಾರ್ಥಿಗಳ ಪ್ರಾಜೆಕ್ಟ್ ಮೊದಲಾದವುಗಳನ್ನು ’ಸಕ್ರಿಯ ಜಾಲದ’ (Online) ಮೂಲಕ ಮಾಡುವಂತೆ ಹೇಳಲಾಯಿತು. ಈಗ ಹೆಚ್ಚಿನ ವಿದ್ಯಾರ್ಥಿಗಳು ’ಬೋರ’ (Bore) ’ಮೂಢ(Mood) ರ’ ವಶವಾಗಿದ್ದಾರೆ. ದಿನಪೂರ್ತಿ ದೂರದರ್ಶನ, ಜಂಗಮವಾಣಿ, ಅಂತರ್ಜಾಲಗಳಲ್ಲಿ ಸಮಯ ವ್ಯಥಿಸುತ್ತಿದ್ದಾರೆ. ಹೆತ್ತವರ ಬಿಸಿಯಾದ ತಲೆಯನ್ನು ಇನ್ನಷ್ಟು ಬಿಸಿಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಉದ್ಯೋಗಪತಿಗಳು
ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಉದ್ಯೋಗಪತಿಗಳ ಸ್ಥಿತಿಗಳು ನಿಜಕ್ಕೂ ಚಿಂತಾಜನಕವಾಗಿದೆ. ಕಾರ್ಖಾನೆ, ಕಾರ್ಯಾಲಯ, ಹೋಟೆಲು ಮುಂತಾದುಗಳನ್ನು ತೆರೆಯುವಂತಿಲ್ಲ. ತೆರೆದರೂ ಉದ್ಯೋಗಿಗಳ ಗೈರು ಹಾಜರಿ. ಮನೆಯಿಂದ ಕೆಲಸ ಎಂಬ ನಿಯಮ ಹೆಚ್ಚಿನ ಕ್ಷೇತ್ರಗಳಲ್ಲಿ ನಡೆಯುವಂತಿಲ್ಲ. ಕೆಲಸಕ್ಕೆ ಬಾರದಿದ್ದರೂ ಸಂಬಳ ಪಾವತಿಸಿ, ಮುಂಗಡ ನೀಡಿ ಎನ್ನುವ ಸರಕಾರದ ನೀತಿ. ಆರ್ಥಿಕ ಸಬಲತೆ ಇಲ್ಲದವರು ಏನು ಮಾಡವುದು? ಎತ್ತ ಹೋಗುವುದು? ಈಗಾಗಲೇ ಹಳಿ ತಪ್ಪಿ ನಿಂತು ಎಂದೂ ದುರಸ್ತಿಯಾಗದ ವ್ಯವಹಾರವನ್ನು ಹೇಗೆ ಸರಿಪಡಿಸುವುದು? ಸಾಲಗಳ ಮೇಲಿನ ಬಡ್ಡಿ, ಚಕ್ರಬಡ್ಡಿಗಳು ಉರುಳದೆ ನಿಲ್ಲುತ್ತದೆಯೇ? ಕಟ್ಟಬೇಕಾದ ತೆರಿಗೆಗಳನ್ನು ಮನ್ನಾ ಮಾಡಲಾಗುತ್ತದೆಯೇ? ಹೋಟೆಲಿಗರಿಗೆ ಇಪ್ಪತ್ತೊಂದು ಬಗೆಯ ಲೈಸೆನ್ಸ್ ಶುಲ್ಕ ಕಟ್ಚಬೇಡವೇ? ಸಿಬ್ಬಂದಿಗಳು ಹೆಚ್ಚಿನವರು ಈಗಾಗಲೇ ಊರಿಗೆ ಹೋಗಿದ್ದಾರೆ ಅಥವಾ ಹೊರಟಿದ್ದಾರೆ. ಕಾರ್ಖಾನೆ, ಕಾರ್ಯಾಲಯ ಆರಂಭವಾದರೂ ಕೆಲಸದವರನ್ನು ಎಲ್ಲಿಂದ ತರಲಿ? ಏನೇನೋ ಎಂದೆಂದೂ ಮೇಲೆರದ ಚಿಂತೆಗಳ ಸುಳಿಯಲ್ಲಿದ್ದಾರೆ ಉದ್ಯೋಗಪತಿಗಳು.
ಉದ್ಯೋಗಿಗಳು
ಮಾರ್ಚ್ ಅಂತ್ಯದ ವರೆಗೆ ಕೆಲಸಕ್ಕೆ ಹೋಗದಿದ್ದರೂ ಪೂರ್ಣ ಸಂಬಳ ಬರುತ್ತದೆ ಎಂದು ಉಲ್ಲಾಸಿತರಾಗಿದ್ದರು. ಈಗ ನಿಜದ ಅರಿವಾಗತೊಡಗಿದಂತೆ ಸರಕಾರೇತರ ಉದ್ಯೋಗಿಗಳು ಚಿಂತೆಗೆ ಒಳಪಟ್ಚಿದ್ದಾರೆ. ಸಿಕ್ಕಿರುವುದು ರಜೆಯಲ್ಲ ಸಜೆ ಎಂಬುದೂ ಅವರಿಗೂ ಅನಿಸತೊಡಗಿದೆ. ಹೀಗೆ ಮುಂದುವರಿದರೆ ಕಂತಿನಲ್ಲಿ ಪಡೆದಿರುವ ಮನೆ, ಗಾಡಿ, ಐಷಾರಾಮಿ ವಸ್ತುಗಳ ಮಾಸಿಕ ಕಂತು ಹೇಗೆ ಕಟ್ಟುವುದು ಎಂಬ ಕಳವಳಕ್ಕೆ ಈಡಾಗಿದ್ದಾರೆ. ಮನೆ ಮಕ್ಕಳ ನಿಭಾವಣೆಯ ಚಿಂತೆಯೂ ಕಾಡತೊಡಗಿದೆ.
ಬಡತನ ರೇಖೆಗಿಂತ ಕೆಳಗಿನವರು
ಸಮುದ್ರಗುಪ್ತನ ಸುವರ್ಣಯುಗ ಬಂದರೂ ಅದು ನಮಗಲ್ಲ ಎನ್ನುವವರಿಗೆ ವ್ಯತಿರಿಕ್ತವಾದ ರೀತಿಯಲ್ಲಿ ಲಾಕ್ ಡೌನ್ ಸಂತಸವನ್ನು ತಂದುಕೊಟ್ಟಿದೆ. ಹೇಗೂ ಕೆಲವು ವರ್ಷಗಳಿಂದ ಸರಕಾರದಿಂದ ಪಡೆದ ಪಡಿತರವನ್ನು ಮಧ್ಯಮ ವರ್ಗದವರಿಗೆ ಮಾರಿ ನಗದು ಪಡೆದು ಖರ್ಚುಮಾಡುತ್ತಿದ್ದರು. ಲಾಕ್ ಡೌನ್ ನಲ್ಲಿ ಸರಕಾರ, ರಾಜಕೀಯ ಪಕ್ಷಗಳು, ರಾಜಕೀಯ ಪುಢಾರಿಗಳು, ಸಾಮಾಜಿಕ ಕಾರ್ಯಕರ್ತರು, ಸರಕಾರೇತರ ಸಂಸ್ಥೆಗಳು, ದಾನಿಗಳು ತಾ ಮುಂದು ನಾ ಮುಂದು ಎಂದು ಪಡಿತರ, ನಗದುಗಳನ್ನು ಹಂಚಿವೆ. ಹಂಚುತ್ತಿವೆ. ಲಾಕ್ ಡೌವುನ್ ಮುಂದುವರಿಯಲಿ, ಮದಿರೆ ಮಾರಾಟವಾಗಲಿ ಎನ್ನುವ ಉಲ್ಲಾಸೀತ ಭಾವನೆ. ಸಂತೃಪ್ತಿ ಎನ್ನಲಾಗದಿದ್ದರೂ. ದುಃಖಿತರಂತೂ ಅಲ್ಲ. ಈಗಾಗಲೇ ಒಟ್ಟು ಮಾಡಿರುವ ಪಡಿತರವನ್ನು ಮಾರದೆ ಇಟ್ಟಲ್ಲಿ 6-7 ತಿಂಗಳು ಬರಬಹುದು. ಇನ್ನೂ ಸಿಗುವ ಭರವಸೆಯಂತೂ ಇದೆ. ಆದ್ದರಿಂದ ಲಾಕ್ ಡೌವುನ್ ಮುಂದುವರಿಯಲಿ ಎಂಬ ಭಾವನೆಗಳೂ ಇರಬಹುದು.
ಗೃಹಿಣಿಯರು
ಶ್ರೀಮಂತರಿಂದ ಹಿಡಿದು ಎಲ್ಲ ವರ್ಗಗಳ ಗೃಹಿಣಿಯರ ಮನಸ್ಥಿತಿಗಳು ಹೆಚ್ಚು ಕಡಿಮೆ ಒಂದೇ ಆಗಿರಬಹುದು. ಒಂದೆರಡು ವಾರ ಮನೆಯವರು, ಮಕ್ಕಳೂ ಮನೆಯಲ್ಲಿಯೇ ಇರುತ್ತಾರೆ ಎಂಬ ಕೌಟುಂಬಿಕ ಏಕತ್ರತೆಯ ಭಾವನೆ ಬಂದಿರಬಹುದು. ಎಚ್ಚರಿಸುವ ಗಂಟೆಗಳಿಗನುಗುಣವಾಗಿ ಏಳಬೇಕೆಂದಿಲ್ಲ. ಕಾಲು ಚಾಚಿ ಮಲಗಿ, ನಿಧಾನವಾಗಿ ಏಳುವ ಎಣಿಕೆ ಬಂದಿರಬಹುದು. ಯಾವಾಗ ಮನೆಗೆಲಸದವರೂ ಬರುವುದಿಲ್ಲ ಎಂಬುದು ತಿಳಿಯುತ್ತೋ.. ಆಗ ಕಂಡದ್ದು ಕನಸು ಎಂದರ್ಥವಾಯಿತು. ಮನೆಯವರು, ಮಕ್ಕಳು ಬಗೆ ಬಗೆಯ ಊಟ ತಿಂಡಿಗಳಿಗೆ ಬೇಡಿಕೆ ಇಡತೊಡಗಿದಾಗ… ತಮ್ಮ ಧಾರಾವಾಹಿಗಳು ತಪ್ಪತೊಡಗಿದಾಗ.. ದಿನವೂ ಗಂಡನ ಜೇಬಿನಿಂದ ಸವರುತ್ತಿದ್ದ ಕಾಂಚಾಣ ನಿಂತಾಗ… ತಿನ್ನುತ್ತ ಬಿದ್ದಿರುವ… ಬಿದ್ದಲ್ಲೇ ತಿನ್ನುವವರನ್ನು ಕಂಡಾಗ… ಪಡಿತರ, ತರಕಾರಿ ಮುಗಿದಾಗ… ಅಡುಗೆ ಕೋಣೆಯ ತಾಪದೊಂದಿಗೆ ಸೆಖೆಯ ಪರಿತಾಪವೂ ಸೇರಿರುವಾಗ.. ಯಾವಾಗ ಇದಕ್ಕೆಲ್ಲ ಅಂತ್ಯ ಎಂದೆಣಿಸುತ್ತಿರಬಹುದು.
ಮೈ.. ಮನಗಳಿಗೆ ಸರಿಯಾದ ವ್ಯಾಯಾಮ ಸಿಗದೆ ಎಲ್ಲರನ್ನೂ ಒಂದು ರೀತಿಯ ಆಲಸ್ಯತನ ಕಾಡುತ್ತಿದೆ. ದೀರ್ಘಕಾಲ ಜ್ವರ ಬಂದು… ಈಗಷ್ಟೇ ಬಿಟ್ಟಿದೆ ಎಂಬಂಥ ಮನಸ್ಥಿತಿ ಎಲ್ಲರದ್ದಾಗಿದೆ.
Get in Touch With Us info@kalpa.news Whatsapp: 9481252093
Discussion about this post