ಶಿವಮೊಗ್ಗ: ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಆತ್ಮಾಹುತಿ ದಾಳಿ ನಡೆಸಲು ಉಗ್ರರಿಗೆ ತರಬೇತಿ ನೀಡಲು ಬಾಲಾಕೋಟ್’ನಲ್ಲಿ ಉಗ್ರ ಸಂಘಟನೆಗಳು ಸಿದ್ದತೆ ಮಾಡಿಕೊಂಡದ್ದವು. ಹೀಗಾಗಿ, ಖಚಿತ ಮಾಹಿತಿ ಆಧರಿಸಿ, ವಾಯು ದಾಳಿ ನಡೆಸಲಾಯಿತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸತ್ಯ ಬಿಚ್ಚಿಟ್ಟಿದ್ದಾರೆ.
ಸೋಮವಾರ ನಗರದಲ್ಲಿ ಆಯೋಜಿಸಲಾಗಿದ್ದು ಬಿಜೆಪಿ ಬೃಹತ್ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರೀ ದಾಳಿ ನಡೆಸಲು ಅಲ್ಲಿನ ಮದರಸಾದಲ್ಲಿ ಸಂಘಟನೆಯ ಪ್ರಮುಖರು ಸೇರಿಕೊಂಡಿದ್ದಾರೆಂಬ ಖಚಿತ ಮಾಹಿತಿ ಇತ್ತು. ಹಾಗಾಗಿ ನಿಖರ ದಾಳಿ ನಡೆಸಲಾಯಿತು ಎಂದರು.
ಬಾಲಾಕೋಟ್ ಮೇಲಿನ ದಾಳಿ ಹಾಗೂ ಸೇನೆಯನ್ನು ನಾವು ರಾಜಕೀಯ ವಿಚಾರಕ್ಕೆ ಬಳಸಿಕೊಳ್ಳುತ್ತಿದ್ದೇವೆ ಎಂಬ ಕಾಂಗ್ರೆಸ್ ಟೀಕೆಯಲ್ಲಿ ಯಾವುದೇ ಅರ್ಥವಿಲ್ಲ ಎಂದು ತಿರುಗೇಟು ನೀಡಿದರು.
2008ರಲ್ಲಿ ಮುಂಬೈನಲ್ಲಿ ಉಗ್ರರ ದಾಳಿ ನಡೆದಾಗಲೇ ಅಂದಿನ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ 10 ವರ್ಷಗಳ ಕಾಲ ಉಗ್ರ ಕೃತ್ಯಗಳಿಂದ ಪರಿತಪಿಸುವುದು ಬೇಕಿರಲಿಲ್ಲ. 1947ರಿಂದಲೂ ಪಾಕ್ ಪ್ರಚೋದಿತ ಉಗ್ರ ಕೃತ್ಯಗಳು ನಡೆಯುತ್ತಲೇ ಇವೆ. ಆದರೆ ಆಡಳಿತ ನಡೆಸಿದ ಸರ್ಕಾರಗಳು ಕಠೋರ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. ಆದರೆ ಮೋದಿ ನೇತೃತ್ವದಲ್ಲಿ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಸೈನಿಕರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಅಲ್ಲದೇ, ಭೂ, ವಾಯು ಹಾಗೂ ನೌಕಾ ಸೇನೆಯಲ್ಲಿ ಮಹಿಳೆಯರಿಗೆ ಪುರುಷರಷ್ಟೆ ಪ್ರಾಧಾನ್ಯತೆ ನೀಡಲಾಗಿದ್ದು, ಸ್ತ್ರೀಯರ ಹಾಗೂ ಬಡವರ ಸಶಕ್ತೀಕರಣಕ್ಕಾಗಿ ಕೇಂದ್ರ ಸರ್ಕಾರ ಮುದ್ರಾ ಯೋಜನೆ ಜಾರಿಗೆ ತಂದಿದೆ ಎಂದರು.
ಕಾಂಗ್ರೆಸ್’ಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಡವರ ನೆನಪಾಗುತ್ತದೆ. 1971ರಲ್ಲಿ ಇಂದಿರಾಗಾಂಧಿ ಗರೀಬಿ ಹಠಾವೋ ಘೊಷಣೆ ಮಾಡಿದರು. ಆದರೆ ಮನಮೋಹನ್ ಸಿಂಗ್ ಆಡಳಿತದಲ್ಲೂ ಬಡತನ ನಿರ್ಮೂಲನೆಯಾಗಿಲ್ಲ. ಅಜ್ಜಿ ಕಾಲದಿಂದಲೂ ಇರುವ ದೇಶದ ಬಡವರ ಸಮಸ್ಯೆ ದೂರ ಮಾಡಲು ನ್ಯಾಯ ಯೋಜನೆ ರೂಪಿಸಿರುವುದಾಗಿ ರಾಹುಲ್ ಹೇಳುತ್ತಿದ್ದಾರೆ ಎಂದು ಕಟಿಕಿಯಾಡಿದರು.
2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ದೊರೆತು 100 ವರ್ಷ ಪೂರ್ಣಗೊಳ್ಳಲಿದ್ದು, ಆ ಸಂದರ್ಭದಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶದ ಸ್ಥಾನ ಪಡೆಯಬೇಕು. 2022ಕ್ಕೆ ಪ್ರತಿಯೊಬ್ಬರೂ ಸೂರು ಹೊಂದಬೇಕು. ರೈತರ ಆದಾಯ ದ್ವಿಗುಣವಾಗಬೇಕೆಂಬುದು ಪ್ರಧಾನಿಯವರ ಆಶಯವಾಗಿದೆ. ಕೇವಲ ಯೋಜನೆಗಳನ್ನು ಘೋಷಣೆ ಮಾಡುವುದು ಮಾತ್ರವಲ್ಲ, ಅವುಗಳನ್ನು ಅನುಷ್ಠಾನ ಮಾಡುವ ತಾಕತ್ತು ಇರುವ ದೇಶದ ಏಕೈಕ ನಾಯಕ ಮೋದಿ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಶಾಸಕ ಕೆ.ಎಸ್. ಈಶ್ವರಪ್ಪ, ಮಾಜಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಪ್ರಮುಖರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್. ರುದ್ರೇಗೌಡ, ಆಯನೂರು ಮಂಜುನಾಥ್, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಅಶೋಕ್ ನಾಯ್ಕ, ಆರ್.ಕೆ. ಸಿದ್ದರಾಮಣ್ಣ, ವೀರಯ್ಯ, ಭಾರತಿ ಶೆಟ್ಟಿ, ಎಸ್. ದತ್ತಾತ್ರಿ, ಮಂಜುಳ, ಲತಾ ಗಣೇಶ್, ಚನ್ನಬಸಪ್ಪ, ಡಿ.ಎಸ್. ಅರುಣ್, ಟಿ.ಡಿ. ಮೇಘರಾಜ್, ಸುಭಾಷ್, ಮಧುಸೂದನ್, ಪದ್ಮಿನಿ ಇದ್ದರು.
(ವರದಿ: ಡಾ.ಸುಧೀಂದ್ರ, ಶಿವಮೊಗ್ಗ)
Discussion about this post