ಬೆಂಗಳೂರು: ನಿನ್ನೆ ಇಹಲೋಕ ತ್ಯಜಿಸಿದ ಕೇಂದ್ರ ಸಚಿವ ಅನಂತ ಕುಮಾರ್ ಅವರ ಪಾರ್ಥಿವ ಶರೀರವನ್ನು ಬಿಜೆಪಿ ಕಚೇರಿಯಿಂದ ನ್ಯಾಶನಲ್ ಕಾಲೇಜು ಮೈದಾನಕ್ಕೆ ತಂದು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಿಂದ ಕಾಡುಮಲ್ಲೇಶ್ವರ, ಸಂಪಿಗೆ ರಸ್ತೆ, ಸ್ಯಾಂಕಿಟ್ಯಾಂಕ್, ಭಾಷ್ಯಂ ಸರ್ಕಲ್, ಮಹಾರಾಣಿ ಕಾಲೇಜು ರಸ್ತೆ, ಕೆ.ಆರ್. ಸರ್ಕಲ್, ನೃಪತುಂಗ ರಸ್ತೆ, ಕಾರ್ಪೋರೇಷನ್, ಊರ್ವಶಿ ಜಂಕ್ಷನ್ ಹಾದಿಯ ಮೂಲಕ ನ್ಯಾಷನಲ್ ಕಾಲೇಜು ಮೈದಾನಕ್ಕೆ ತಂದು ಸಾರ್ವಜನಿಕರ ದರ್ಶನಕ್ಕಾಗಿ ಅವಕಾಶ ಮಾಡಿಕೊಡಲಾಗಿದೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಪಾಲ ವಿ.ಆರ್. ವಾಲಾ ಅವರುಗಳು ನ್ಯಾಶನಲ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿದ ಅಂತಿಮ ನಮನ ಸಲ್ಲಿಸಿದರು. ತಮ್ಮ ಆತ್ಮೀಯ ಗೆಳೆಯನ ಅಗಲಿಕೆಯಿಂದ ಉಪರಾಷ್ಟ್ರಪತಿಗಳು ತೀವ್ರವಾಗಿ ದುಃಖಿತರಾಗಿದ್ದರು.
ಬೆಂಗಳೂರು ದಕ್ಷಿಣದಲ್ಲಿ ಜನಾನುರಾಗಿಯಾಗಿದ್ದ ಅನಂತಕುಮಾರ್ ಅವರ ಅಂತಿಮ ದರ್ಶನ ಪಡೆಯಲು ಸಾವಿರಾರು ಮಂದಿ ಸಾಲುಗಟ್ಟಿ ನಿಂತಿದ್ದಾರೆ. ಅಲ್ಲದೇ, ಈ ಭಾಗದ ನೂರಾರು ಶಾಲಾ ಕಾಲೇಜು ಮಕ್ಕಳು ಸರತಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಇನ್ನು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯ, ರಾಷ್ಟ್ರದಿಂದ ಗಣ್ಯಾತಿಗಣ್ಯರು, ಬೆಂಬಲಿಗರು ಅಪಾರ ಅಭಿಮಾನಿಗಳು ಸಾಗರೋಪಾದಿಯಲ್ಲಿ ಹರಿದು ಬಂದಿದ್ದಾರೆ.
ನ್ಯಾಶನಲ್ ಕಾಲೇಜು ಮೈದಾನದ ಸುತ್ತಲೂ ಅನಂತಕುಮಾರ್ ಅಮರ್ ರಹೇ ಎಂಬ ಘೋಷಣೆಗಳನ್ನು ಅಭಿಮಾನಿಗಳು ಕೂಗುತ್ತಿದ್ದಾರೆ.
Discussion about this post