ಸಂಭ್ರಮೋತ್ಸಾಹದಿ ಮನೆಗೆ ಎಡತಾಕುವ ಗೌರಿ, ಬಾಗಿನ ಸ್ವೀಕರಿಸುತ್ತಾಳೆ. ಪೂಜೆಯ ಬಳಿಕ ಸೋಬಲಕ್ಕಿ ಸ್ವೀಕರಿಸಿ ನೀರಿನಲ್ಲಿ ಕರಗಿ ಹೋಗುತ್ತಾಳೆ. ಪೂಜಿಸಿದ ಗೌರಿಯನ್ನೇಕೆ ವಿಸರ್ಜಿಸಬೇಕು ಎನ್ನುವ ಪ್ರಶ್ನೆ ಹಲವರದು.
ಸ್ವಲ್ಪ ಯೋಚಿಸಿ ನೋಡಿದರೆ ಅದರ ಹಿಂದಿನ ಅಂತರಾರ್ಥ ತಿಳಿಯುತ್ತದೆ. ಇಷ್ಟೊಂದು ಸುಂದರವಾದ ಶರೀರ ಜೀವ ಕಳೆದುಕೊಂಡ ನಂತರ ವಿಸರ್ಜನೆಯಾಗುತ್ತದೆ. ಅಂದರೆ ಬದುಕಿದು ನಶ್ವರ, ಜೀವನಯಾನದಲ್ಲಿ ಯಾರೂ ಶಾಶ್ವತವಲ್ಲ ಎನ್ನುವ ಸ್ಪಷ್ಟ ಸಂದೇಶ ಅದರ ಹಿಂದಿದೆ. ಗೌರಿದೇವಿಯ ಪ್ರತೀಕಗಳನ್ನು ಕಂಡಾಗ ಅನಿಸುವುದಿಷ್ಟು; ನಿರಾಕಾರನಾದ ಭಗವಂತನಿಗೇಕೆ ರೂಪ ಎನ್ನುವ ಪ್ರಶ್ನೆ ಕಾಡುತ್ತದೆ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ. ಯಾವುದೇ ವಸ್ತುವಿಗೊಂದು ರೂಪ ಇಲ್ಲದಿದ್ದರೆ ಅದರಲ್ಲಿ ಮನಸ್ಸನ್ನು ಕೇಂದ್ರೀಕರಿಸಲಾಗುವುದಿಲ್ಲ. ಮನಸ್ಸನ್ನು ಕೇಂದ್ರೀಕರಿಸದ ಹೊರತು ಭಕ್ತಿ, ನಂಬಿಕೆ, ಶ್ರದ್ಧೆ ಹುಟ್ಟುವುದು ಅಸಾಧ್ಯ. ಆ ಕಾರಣ ಭಗವಂತನಿಗೊಂದು ಪ್ರತಿಮಾ ರೂಪ ಬಂದಿತು. ಹೀಗೆ ಮಣ್ಣು ಅಥವಾ ಅರಿಶಿನ ಪ್ರತಿಮಾ ರೂಪದಲ್ಲಿ ಮನಸ್ಸಿನಲ್ಲಿ ನೆಲೆ ನಿಲ್ಲುವ ಗೌರಿ ವಿರ್ಸನೆಯಾಗುವ ಮೂಲಕ ನಿರಾಕಾರಳಾಗಿ ಸ್ಥಿತಗಳಾಗುತ್ತಾಳೆ. ಈ ಅಂಶವನ್ನು ಅರಿಯದ ಹಲವಾರು ಪ್ರತಿಮೆಗಳಿಗಷ್ಟೇ ತಮ್ಮ ಮನಸ್ಸನ್ನು ಸ್ಥಿತಗೊಳಿಸುತ್ತಾರೆ.
ಆಕಾರದಿಂದ ನಿರಾಕಾರದೆಡೆಗೆ ಎನ್ನುವ ಸಿದ್ಧಾಂತಕ್ಕೆ ಭಗವಾನ್ ರಾಮಕೃಷ್ಣ ಪರಮಹಂಸರು ಸಮುದ್ರದ ನೀರಿನ ಮೇಲೆ ತೇಲುವ ಮಂಜಿನಗಡ್ಡೆಯ ನಿದರ್ಶನವನ್ನು ಕೊಡುತ್ತಾರೆ. ಆಗಾಧ ಚಳಿಯಲ್ಲಿ ತೇಲುವ ಮಂಜಿನ ಗಡ್ಡೆಗಳು ಬಿಸಿಲಿನ ಝಳಕದೊಂದಿಗೆ ಮತ್ತೆ ನೀರಿನಲ್ಲೇ ಬೆರೆಯುತ್ತವೆ. ಮಂಜಿನ ಗಡ್ಡೆಗಳಂತೆ ದೈವೀ ಆಕಾರಗಳು. ಸಮುದ್ರದ ನೀರು ನಿರಾಕಾರ ನಿರ್ಗುಣ ಚೈತನ್ಯವಿದ್ದಂತೆ. ಸೂರ್ಯನ ಶಾಖವೇ ನಮ್ಮನ್ನು ಮುಕ್ತಿಗೊಯ್ಯುವ `ವಿವೇಕ’ ಎಂಬುದೇ ಇದರ ಹಿಂದಿನ ಅರ್ಥ.
ಶಿವನದು ಧ್ಯಾನಸ್ಥ ಸ್ಥಿತಿ. ಶಿವನ ಈ ಸ್ವರೂಪವು ಸೃಷ್ಟಿಯ ಮೂಲವಾದ ಭಗವತ್ ಚೈತನ್ಯುವು ಸ್ಥಿರ ಮತ್ತು ಚಅರ ಎಂದು ಸೂಚಿಸುತ್ತದೆ. ವಿಶ್ವ ಸೃಷ್ಟಿಗೆ ಚಿರ ಚೈತನ್ಯದ ಜತೆಗೆ ಮತ್ತೊಂದು ಶಕ್ತಿಯೂ ಕಾರಣವಾಗುತ್ತದೆ. ಅದುವೇ ದೇವಿ ಶಕ್ತಿ. ಕಾಲಮಾನ ಬದಲಾದಂತೆ ಪೂಜಾ ವಿಧಾನವೂ ಬದಲಾಗಿದೆ. ಬದಲಾದ ಪದ್ಧತಿಯಲ್ಲಿ ದೇವಿಯ ವಿವಿಧ ಗುಣಗಳನ್ನು ಆಧರಿಸಿ ಆರಾಧಿಸಲಾಗುತ್ತದೆ. ಅಂದರೆ ಸರಸ್ವತಿಯಲ್ಲಿ ಜ್ಞಾನ ಕಲೆಗಳನ್ನು, ಲಕ್ಷ್ಮಿಯಲ್ಲಿ ಸಮೃದ್ಧಿ, ಐಶ್ವರ್ಯಗಳನ್ನು ಮತ್ತು ಪ್ರಕೃತಿಯ ಹೇರಳತೆ, ದಯೆ, ಸುಮಂಗಲಿ ಭಾಗ್ಯ, ಸಂತಾನ ಶಕ್ತಿಗಳನ್ನು ಗೌರಿಯಲ್ಲಿ ಕಾಣುತ್ತೇವೆ.
ತಪಃಶಕ್ತಿಯ ಸಾಕಾರ ಮಹಾ ಗೌರಿ
ಪಾರ್ವತಿಯೇ ಗೌರಿ. ಆಕೆ ಸೃಷ್ಟಿ ಕ್ರಿಯೆ ಪ್ರತಿಯೊಂದು ಕಣದಲ್ಲೂ ತನ್ನ ಆಸ್ತಿತ್ವನ್ನು ಪ್ರಕಟಗೊಳಿಸುತ್ತಾಳೆ. ಆಕೆಯೇ ಕುಂಡಲಿನಿ ಶಕ್ತಿಯಾಗಿದ್ದಾಳೆ. ಭಗವಂತನದು ಪೂರ್ಣ ರೂಪ. ಆತ ಯಾವುದೇ ರೀತಿಯ ಉಪಾಧಿಗಳಿಂದ ಬಾಧಿತನಾಗುವುದಿಲ್ಲ. ನೈದಿಲೆಯ ಎಲೆಯ ಮೇಲಿನ ಬಿಂದುವಿನಂತೆ ಆತ ಕಳಂಕರಹಿತನಾಗಿರುತ್ತಾನೆ. ಆದರೆ ಅದೇ ಭಗವಂತ ಮಾನುಷ ಅವತಾರವನ್ನು ತಾಳಿದಾಗ, ವಸ್ತು ಸ್ಥಿತಿ ಬೇರೆಯಾಗುತ್ತದೆ. ಮನುಷ್ಯ ಸಹಜವಾದ ಗುಣಗಳು ಆತನಲ್ಲಿ ಮೇಳೈಸುತ್ತವೆ. ಭಾವನೆಯ ಅಲೆಗಳಲ್ಲಿ ಆತ ಮುಳುಗೇಳುತ್ತಾನೆ. ಹೀಗೆ ಉಪಾಧಿಗಳಿಂದ ಬಂಧಿತವಾದ ಮನುಷ್ಯನ ಶರೀರ ವಿಶ್ವಪ್ರಜ್ಞೆಯೊಂದಿಗೆ ಸಮ್ಮಿಳತವಾಗುವುದು ಸುಲಭವಲ್ಲ. ಅವೆರಡೂ ಒಂದಾಗಲು ವಿಶೇಷವಾದ ವೇದಿಕೆಯೊಂದು ಬೇಕು. ಆ ವೇದಿಕೆಯೇ ತಪಸ್ಸು. ತಪಸ್ಸು ಎಂದರೆ ಯಾವುದೋ ಕಾಡಿನ ಮೂಲೆಯಲ್ಲಿ ಕೂತು, ಪ್ರಾಪಂಚಿಕ ವ್ಯವಹಾರಗಳಿಂದ ದೂರವಾಗಿ, ಕಣ್ಮುಚ್ಚಿಕೊಂಡು ಮಾಡುವ ಧ್ಯಾನ ಕ್ರಮವಲ್ಲ. ಬದಲಿಗೆ ಅವಿರತವಾಗಿ ಅಂತರಾತ್ಮನೊಂದಿಗೆ ಸಂಭಾಷಿಸುವುದು. ಹೀಗೆ ಅತ್ಮನೊಂದಿಗೆ ಸಂವಹಿಸುವ ಪ್ರಕ್ರಿಯೆಯೇ ಆತ್ಮ ಶೋಧನೆಯಾಗುತ್ತದೆ. ಆತ್ಮ ಶೋಧನೆಯಿಂದ ಮನಸ್ಸು, ದೇಹ ಪರಿಶುದ್ಧವಾಗುತ್ತದೆ.
ಏನನ್ನಾದರೂ ಪಡೆಯಬಹುದು
ತಪಃಶಕ್ತಿಯ ಪ್ರಭಾವದಿಂದ ಏನನ್ನು ಬೇಕದರೂ ಪಡೆದುಕೊಳ್ಳಬಹುದು. ಆಧ್ಯಾತ್ಮಿಕ ಉನ್ನತಿಯ ಜತೆ ಜತೆಗೆ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು. ನಿಜವಾದ ತಪಸ್ಸಿಗೊಂದು ಉತ್ತಮ ಉದಾಹರಣೆಯೇ ಪಾರ್ವತಿ. ಪೂರ್ವದಲ್ಲಿ ದಾಕ್ಷಾಯಣಿಯಾಗಿ, ಶಿವನ ಸತಿಯಾಗಿ, ದಕ್ಷಯಜ್ಞದಲ್ಲಿ ಪತಿಗಾದ ಅವಮಾನವನ್ನು ಸಹಿಸದೆ ಜ್ವಾಲಾಗ್ನಿಗೆ ತನ್ನ ದೇಹವನ್ನೇ ಅರ್ಪಿಸಿಕೊಂಡ ಮಹಾಸತಿ. ಶಿವನನ್ನೇ ಮತ್ತೆ ಪಡೆಯಬೇಕೆನ್ನುವ ಉತ್ಕಟಾಂಕ್ಷೆಯಿಂದಲೇ ಹಿಮವಂತನ ಮಗಳಾಗಿ ಮತ್ತೆ ಅವತರಿಸಿದಳು. ಗಿರಿಜೆಯಾಗಿ, ಪಾರ್ವತಿಯಾಗಿ ತನ್ನ ಆದಿಶಕ್ತಿ ಸ್ವರೂಪವನ್ನು ಪ್ರಕಟಗೊಳಿಸಿದಳು. ಹೌದು, ಮಾತೆ ಮಹಾಗೌರಿಯೇ ಪರಾಶಕ್ತಿ. ಇಡೀ ಬ್ರಹ್ಮಾಂಡದ ತುಂಬಾ ಆಕೆಯ ಅವ್ಯಕ್ತ ಚೇತನ ವ್ಯಾಪಿಸಿದೆ. ಆಕೆ ಮೋಡಗಳಲ್ಲಿ ಮೋಡವಾಗಿದ್ದಾಳೆ. ಬಿಂದುವಿನಲ್ಲಿ ಬಿಂದುವಾಗಿದ್ದಾಳೆ.
ಒಲುಮೆಗೆ ಯತ್ನ
ಹೀಗೆ ಮಹಾಮಾಯಿ ಯಾಗಿದ್ದರೂ, ಸೃಷ್ಟಿ, ಸ್ಥಿತಿಗೆ ಕಾರಣಕರ್ತೆಯಾಗಿದ್ದರೂ ಹಿಮವಂತನ ಮಗಳಾಗಿ ಧರೆಯಲ್ಲಿ ಅವತರಿಸಿದ ಪಾರ್ವತಿ ಸಹಜ ಸ್ವಭಾವದಿಂದಲೇ ಶಿವನ ಒಲುಮೆಗೆ ಯತ್ನಿಸುತ್ತಾಳೆ. ಕಠೋರವಾದ ತಪಸ್ಸನ್ನು ಮಾಡುತ್ತಾಳೆ. ದೇವತೆಗಳು ಇತ್ತ ತಪೋ ನಿರತನಾದ ಶಿವನ ಏಕಾಗ್ರತೆಯನ್ನು ಭಂಗ ಮಾಡಲು ಯತ್ನಿಸುತ್ತಾರೆ. ಅವರ ಪರವಾಗಿ ಮನ್ಮಥನ ಪ್ರವೇಶವಾಗುತ್ತದೆ. ಮನ್ಮಥನ ಪ್ರಯತ್ನಕ್ಕೆ ರತಿ ಕೈಜೋಡಿಸುತ್ತಾಳೆ. ಮನ್ಮಥನ ಹೂಬಾಣ ಶಿವನ ಧೃತಿಯನ್ನು ಕೆಡಿಸುತ್ತದೆ. ಚಿತ್ತ ಚಂಚಲವಾಗುತ್ತದೆ. ಕಾಮನನ್ನು ದಹಿಸುತ್ತಾನೆ. ಆಗ ಪಾರ್ವತಿಗೆ ಶಿವನೊಲುಮೆ ಸಂಪಾದಿಸಲು ತಪಸ್ಸೊಂದು ಉತ್ತಮ ಮಾರ್ಗ ಎನ್ನುವ ಸತ್ಯ ವೇದ್ಯವಾಗುತ್ತದೆ. ಹೀಗೆ ಶಿವನ ಒಲಮೆಗಾಗಿ ಪಾರ್ವತಿ ತಪಸ್ಸಿಗೆ ಕೂತ ಸ್ಥಳವೇ ಗೌರಿ ಶಿಖರ. ಆಕೆಯದು ಅಂತಿಂತಹ ತಪಸ್ಸಲ್ಲ. ಕಠೋರವಾದ ತಪಸ್ಸು. ಆಯಾ ಋತುಮಾನಕ್ಕೆ ವೈರುಧ್ಯವಾದ ಮಾರ್ಗವನ್ನೇ ಆಕೆ ಅನುಸರಿಸುತ್ತಾಳೆ. ಬೆಂಕಿ, ನೀರು, ಗಾಳಿ, ಸುಖ, ದುಃಖ ಯಾವೊಂದು ಸಂಗತಿಯೂ ಆಕೆಯ ಧೃತಿಗೆಡಿಸುವುದಿಲ್ಲ. ಮನಸ್ಸು ಶಿವನ ಹೊರತಾಗಿ ಬೇರೆಡೆ ನಿಲ್ಲುವುದಿಲ್ಲ. ನಾರುಮುಡಿ ಉಟ್ಟ ಪಾರ್ವತಿ ತನ್ನ ಮುಡಿಯನ್ನು ಕಟ್ಟಿರುತ್ತಾಳೆ. ಇಂದ್ರಿಯಗಳನ್ನು ಬಿಗಿ ಹಿಡಿದಿಡುತ್ತಾಳೆ. ಶ್ವಾಸೋಚ್ಛಾಸಗಳನ್ನು ಬಿಗಿಹಿಡಿದು ಶಿವ ನಾಮವನ್ನು ನಿರಂತರವಾಗಿ ಜಪಿಸುತ್ತಾಳೆ. ಶಿವನನ್ನು ಹೊಂದುವ ಅಪೇಕ್ಷೆಯಲ್ಲಿ ಹಸಿವು, ನಿದ್ರೆ, ಬಾಯಾರಿಕೆ, ದಣಿವನ್ನು ಮರೆಯುತ್ತಾಳೆ. ಅನ್ನ ಆಹಾರಾದಿಗಳನ್ನು ತ್ಯಜಿಸುತ್ತಾಳೆ. ಆಕೆಯ ಅಪೇಕ್ಷೆಯಲ್ಲಿ ಸಾತ್ವಿಕ ಭಾವನೆಯಿದೆ.
ಸಾತ್ವಿಕತೆಯೇ ಮಹಾಶಕ್ತಿ
ಲೋಕಕಲ್ಯಾಣದ ದೃಷ್ಟಿಯಿದೆ. ಆ ಕಾರಣದಿಂದಲೇ ಕಾಡಿನ ಪರಿಸರವೂ ಪ್ರಶಾಂತವಾಗುತ್ತದೆ. ವನ್ಯಮೃಗಗಳು ಸಹಜ ಸ್ವಭಾವವನ್ನು ಮರೆತು ಶಾಂತವಾಗುತ್ತವೆ. ಎಲ್ಲೆಡೆ ಪ್ರೀತಿ, ವಾತ್ಸಲ್ಯ, ಕರುಣೆಯ ರಸಧಾರೆ ಉಕ್ಕಿ ಹರಿಯುತ್ತದೆ. ಪಾರ್ವತಿಯ ಸಾತ್ವಿಕ ತಪಸ್ಸಿನಿಂದ ಶಿವ ಸಂಪ್ರೀತಗೊಳ್ಳುತ್ತಾನೆ. ಆಕೆಯನ್ನು ಸಹಧರ್ಮಿಣಿಯಾಗಿ ಸ್ವೀಕರಿಸಲಯ ಒಪ್ಪುತ್ತಾನೆ. ಶಿವ ಪಾರ್ವತಿಯರ ಕಲ್ಯಾಣ ಮಹೋತ್ಸವಕ್ಕೆ ದೇವತೆಗಳು ಸಾಕ್ಷಿಯಾಗುತ್ತಾರೆ. ಲೋಕದಲ್ಲಿ ಶಿವ, ಪಾರ್ವತಿ ತನ್ನ ತಪಃಶಕ್ತಿಯ ಪ್ರಭಾವದಿಂದ ದೈವೀಪ್ರಜ್ಞೆಯಾಗಿ ಬದಲಾಗುತ್ತಾಳೆ. ಶಿವನ ಪಾರ್ವತಿಗೆ ವೇದ, ಯೋಗಶಾಸ್ತ್ರ, ತಂತ್ರ ಮತ್ತು ಆರಾಧನಾ ಕ್ರಮದ ರಹಸ್ಯವನ್ನು ಬೋಧಿಸುತ್ತಾನೆ. ಹೀಗೆ ಶಿವ, ಪಾರ್ವತಿಯರ ನಡುವಿನ ಸಂವಾದವೇ ಲೋಕಜ್ಞಾನಕ್ಕೆ ಕಾರಣವಾಗುತ್ತದೆ.
ಪ್ರಕೃತಿ ಮಾತೆ ವರದಾತೆ
ಭಾದ್ರಪದ ಮಾಸದ ಆರಂಭದೊಂದಿಗೆ ಗೌರಿ ಹಬ್ಬವೂ ಬರುತ್ತದೆ. ಈ ಸಂದರ್ಭದಲ್ಲಿ ಮಳೆಯಿಂದ ನೆಂದ ಧರೆ ಬಸಿರಾಗಿ ಹಸಿರು ಬೆಳೆಯನ್ನು ಹೊರತರುತ್ತದೆ. ಹಾಗೆಂದೇ ಗೌರಿ ಪ್ರಕೃತಿ ಮಾತೆಯ ಸಂಕೇತ. ಆ ಕಾರಣ ಗೌರಿಗೆ ಹಸಿರು ಸೀರೆಯನ್ನುಡಿಸಿ ಸಂತಾನದಾತೆಯೆಂದು ಪೂಜಿಸುತ್ತಾರೆ. ಪುರಾಣ ಕಥೆಯ ಪ್ರಕಾರ ಗೌರಿಯ ಸಂತಾನ ಸುಬ್ರಹ್ಮಣ್ಯ ಮತ್ತು ಗಣಪತಿ. ಶಿವನ ಗಣಗಳ ನಾಯಕನೇ ಗಣಪತಿ. ಅವನು ಇಚ್ಛಾಶಕ್ತಿಯ ಪ್ರತೀಕವಾಗಿದ್ದಾನೆ. ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದಾಗ, ಗೌರಿ-ಗಣೇಶರ ಆರಾಧನೆಯಿಂದ ನಮ್ಮೊಳಗಿನ ಒರಟು ಗುಣಗಳನ್ನು ಗೆಲ್ಲುವ ಇಚ್ಛಾಶಕ್ತಿ ವೃದ್ಧಿಯಾಗುತ್ತದೆ. ಸುಬ್ರಹ್ಮಣ್ಯ. ಅಂದರೆ ಬ್ರಹ್ಮಜ್ಞಾನಿಯ ಸ್ಥಿತಿಯನ್ನು ಪಡೆಯಲು ಅನುಕೂಲವಾಗುತ್ತದೆ.
(ವಿವಿಧ ಮೂಲಗಳಿಂದ)
Discussion about this post