ಭಾರತ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ದೇಶ. ವಿಶ್ವಕ್ಕೆ ಭಾರತ ನೀಡಿದ ಕೊಡುಗೆ ಅಪಾರ. ವಿಜ್ಞಾನ(ದ್ವಿತಿ ಸಂಶ್ಲೇಷಣೆ) ಗಣಿತ(0) ವೈದ್ಯಕೀಯ ಶಾಸ್ತ್ರ(ಆಯುರ್ವೇದ) ಸೇರಿದಂತೆ ಎಲ್ಲಾ ರಂಗಗಳಲ್ಲಿ ಭಾರತ ವಿಶ್ವ ಮಟ್ಟಕ್ಕೆ ಅಗಣಿತ ಕೊಡುಗೆ ನೀಡಿದೆ. ಅದರಲ್ಲಿ ಯೋಗ ಕೂಡ ಪ್ರಮುಖ.
ಋಷಿಮುನಿಗಳಿಂದ ಅನ್ವೇಷಣೆ ಮಾಡಲ್ಪಟ್ಟ ಯೋಗ ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಮತ್ತು ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಲು ಸಹಾಯಕ.
ಆದರೆ ಆಧುನಿಕ ದಿನಮಾನಗಳಲ್ಲಿ ಯೋಗದ ಮಹತ್ವ ಕಳೆದುಕೊಳ್ಳುತ್ತದೆ ಎನ್ನಿಸುತ್ತದೆ. ಮತ್ತು ಯೋಗಕ್ಕೆ ಒಂದು ಧರ್ಮದ ಚೌಕಟ್ಟು ನಿರ್ಮಿಸುವ ಯತ್ನ ಸಹ ನಡೆಯುತ್ತಿದೆ. ಇಂತಹ ಸಾಧನೆ ಮಾಡಲು ಅವಿರತ ಪ್ರಯತ್ನ, ಅಗಾಧವಾದ ತಾಳ್ಮೆ ಬೇಕು ಎನ್ನುವುದು ಇತಿಹಾಸದ ನಿದರ್ಶನಗಳಿಂದ ಸಾಬೀತಾಗಿದೆ.
ಆದರೆ ನಮ್ಮ ದೇಶದ ಬಾಲಕಿಯೊಬ್ಬಳು ಯೋಗದ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿ ಯೋಗವನ್ನು ಇನ್ನೊಂದು ಸ್ಥರಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾಳೆ. ಆ ಪ್ರತಿಭೆಯ ಪರಿಚಯ ಹೊಸದಾಗಿ ಮಾಡಬೇಕಿಲ್ಲ ಎಂದು ಭಾವಿಸುತ್ತೇನೆ. ಇಂದು ಇಡೀ ಕರಾವಳಿ ಭಾಗದಲ್ಲಿ ಜನರ ಮನೆ ಮಗಳಾಗಿ ಜನರ ಮನಸ್ಸನಲ್ಲಿ ನೆಲೆ ನಿಂತಿರುವ ತನುಶ್ರೀ ಪಿತ್ರೋಡಿ.
ಈಕೆಯ ವಯಸ್ಸು ಕೇವಲ 10 ಆಗಿದ್ದರೂ ಈಕೆ ಸಾಧನೆಯಲ್ಲಿ ತುಂಬಾ ದೊಡ್ಡವಳಂತೆ ಕಾಣುತ್ತಾಳೆ. ಈಗಾಗಲೇ ಒಂದು ಗಿನ್ನಿಸ್ ವಲ್ಡರ್ ರೆಕಾರ್ಡ್ ಮತ್ತು ಮೂರು ಗೋಲ್ಡನ್ ಬುಕ್ ಆಫ್ ರೆಕಾರ್ಡ್’ಗಳನ್ನು ಯೋಗದ ಮೂಲಕ ಮಾಡಿದ್ದಾಳೆ. ಇದರಲ್ಲಿ ವಿಶೇಷ ಏನೆಂದರೆ ಈಕೆ ಯೋಗ ಆರಂಭಿಸಿದ್ದೇ ಕೇವಲ ಮೂರು ವರ್ಷಗಳ ಹಿಂದೆ..! ಯೋಗ ಪ್ರದರ್ಶನ ನೀಡಲು ಈಕೆ ಇಟಲಿಗೆ ಸಹ ಹೋಗಿದ್ದು ಭಾರತದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾನೆತ್ತರಕ್ಕೆ ಹಾರಿಸಿದ್ದಾಳೆ.
ಈಕೆಯ ಸಾಧನೆ ಇಷ್ಟಕ್ಕೆ ಸೀಮಿತವಾಗದೇ ನೃತ್ಯ ಯಕ್ಷಗಾನ ಮತ್ತು ಭರತನಾಟ್ಯ ಕ್ಷೇತ್ರದಲ್ಲಿ ತನುಶ್ರೀ ಪಿತ್ರೋಡಿ ಈಗಾಗಲೇ ಮುಂತಾದ ಕಲಾಕ್ಷೇತ್ರದಲ್ಲಿ ತನ್ನ ಪ್ರತಿಭೆಯನ್ನು ತೋರಿಸಿದ್ದಾಳೆ. ಒಟ್ಟಾರೆ ಈಕೆ 346 ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾಳೆ.
ಈಕೆಯ ಸಾಧನೆ ಗಮನಿಸಿ 108ಕ್ಕೂ ಹೆಚ್ಚಿನ ಸನ್ಮಾನಗಳನ್ನು ವಿವಿಧ ಸಂಘ ಸಂಸ್ಥೆಗಳು ಮಾಡಿವೆ. ಜೊತೆಗೆ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಮಜಾ ಟಾಕೀಸ್’ಗೂ ಈಕೆ ಅತಿಥಿಯಾಗಿ ಹೋಗಿದ್ದು ಸಹ ನಿಜಕ್ಕೂ ಈಕೆಯ ಸಾಧನೆಗೆ ಹಿಡಿದ ಸಣ್ಣ ಕೈಗನ್ನಡಿ ಎಂದರೂ ತಪ್ಪಾಗಲಾರದು.
ಇಷ್ಟೊಂದು ಸಾಧನೆ ಮಾಡಲು ಸ್ಪೂರ್ತಿ ಮತ್ತು ಬೆನ್ನೆಲುಬಾಗಿ ನಿಂತ ಪಾಲಕರ ಮತ್ತು ಎಲ್ಲ ಗುರುಗಳ ಪ್ರೋತ್ಸಾಹವನ್ನು ಈಕೆ ಸದಾ ನೆನೆಯುತ್ತಾಳೆ.
ಇಂದು ಈಕೆ ತನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಈಕೆಯ ಮುಂದಿನ ಶೈಕ್ಷಣಿಕ ಮತ್ತು ಕಲಾ ಜೀವನ ಯಶಸ್ಸು ಸಾಧಿಸಲಿ ಮತ್ತು ನಾಡಿಗೆ ಹಾಗೂ ದೇಶಕ್ಕೆ ಇನ್ನಷ್ಟು ಕೀರ್ತಿ ತರುವಂತಾಗಲಿ ಎಂದು ಹರಸೋಣ..
ಲೇಖನ: ರೋಹನ್ ಪಿಂಟೋ ಗೇರುಸೊಪ್ಪ
ಚಿತ್ರಕೃಪೆ ಮತ್ತು ವೀಡಿಯೊ ಕೃಪೆ/ಸತೀಶ್ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post