ಕಲ್ಪ ಮೀಡಿಯಾ ಹೌಸ್ | ಹಾಸನ |
ಕಾಂಗ್ರೆಸ್‌ನವರಿಗೆ ಗೊತ್ತಿರುವುದು ರಾವಣ ಮಾತ್ರ. ಆದರೆ ಬಿಜೆಪಿಗೆ ಶ್ರೀರಾಮಚಂದ್ರನ ಆಡಳಿತ ತಿಳಿದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ Minister Sudhakar ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಶತಮಾನದ ಮಹಾತ್ಮ ಎಂದು ಕರೆಯಲಾಗುತ್ತಿದೆ. ಶ್ರೀ ರಾಮಚಂದ್ರ ರಾಮರಾಜ್ಯವನ್ನು ಕಟ್ಟಿದಂತೆಯೇ ಮೋದಿಯವರು ಆಡಳಿತ ನಡೆಸುತ್ತಿದ್ದಾರೆ. ಹಿಂದಿನ ಯುಪಿಎ ಸರ್ಕಾರ ಹೇಗೆ ಆಡಳಿತ ನಡೆಸಿತ್ತು, ಈಗ ಹೇಗೆ ಆಡಳಿತ ನಡೆಯುತ್ತಿದೆ ಎಂಬುದನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರೇ ತಿಳಿದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ Minister Ashwathnarayana ಅವರು ತಾತ್ವಿಕವಾಗಿ ಹಾಗೂ ಆಶಯದ ರೀತಿಯಲ್ಲಿ ಮಾತನಾಡಿದ್ದಾರೆಯೇ ಹೊರತು ನಿರ್ದಿಷ್ಟವಾಗಿ ಏನೂ ಹೇಳಿಲ್ಲ. ಹಾಗಾಗಿ ಅದರಲ್ಲಿ ಏನೂ ತಪ್ಪಿಲ್ಲ. ಬಿಜೆಪಿ ಪಕ್ಷ ರೌಡಿ ಶೀಟರ್ ಅಥವಾ ಕ್ರಿಮಿನಲ್ ಹಿನ್ನೆಲೆ ಇರುವವರನ್ನು ಪಕ್ಷಕ್ಕೆ ಸೇರಿಸುವುದಿಲ್ಲ. ಇದನ್ನು ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರೂ ಅದನ್ನು ಸ್ಪಷ್ಟಪಡಿಸಿದ್ದಾರೆ ಎಂದರು.
ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದರೆ ಅವರಿಗೆ ಮಾತ್ರ ಉಳಿಗಾಲವಾಗುತ್ತದೆ. ಆದರೆ ರಾಜ್ಯ ಸುಭಿಕ್ಷೆಯಿಂದಿದೆ. ನಾನು ಸೇರಿದಂತೆ ಯಾವುದೇ ವ್ಯಕ್ತಿ ವ್ಯವಸ್ಥೆಗೆ ಅನಿವಾರ್ಯವಲ್ಲ. ಯಾರೂ ಇಲ್ಲದಿದ್ದರೂ ವ್ಯವಸ್ಥೆ ಮುಂದುವರಿಯುತ್ತದೆ ಎಂದರು.
ಈ ದೇಶದಲ್ಲಿ ಬಹುಜನರು ಹಿಂದೂಗಳಾಗಿದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಹಿಂದೂಗಳಿಗೆ, ಹಿಂದೂ ಧರ್ಮಕ್ಕೆ ಅನ್ಯಾಯವಾಗಬಾರದು ಎಂಬ ಅರ್ಥದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಹೇಳಿಕೆ ನೀಡಿದ್ದಾರೆ. ಹಿರಿಯ ನಾಯಕರಾದ ರಮೇಶ್ ಜಾರಕಿಹೊಳಿಯವರಿಗೆ ಬಿಜೆಪಿ ಉತ್ತಮ ಅವಕಾಶಗಳನ್ನು ನೀಡಲಿದೆ. ಬೆಳಗಾವಿ ಭಾಗದಲ್ಲಿ ಅವರು ಶ್ರಮಿಸುತ್ತಿದ್ದಾರೆ ಎಂದರು.
ಚುನಾವಣೆ ವೇಳೆ ಎಲ್ಲಾ ಯಾತ್ರೆಗಳು ಆರಂಭವಾಗುತ್ತದೆ. ಭಾರತ್ ಜೋಡೋ, ಪಂಚರತ್ನ ಕೂಡ ನಡೆಯುತ್ತಿರುವುದು ಸಹಜ. ಬಿಜೆಪಿ ಆಡಳಿತ ಮಾಡುತ್ತಿರುವುದೇ ಅಭಿವೃದ್ಧಿ ಹೆಸರಿನಲ್ಲಿ. ಧರ್ಮ, ಜಾತಿಯ ಓಲೈಕೆ ಮಾಡುವುದು ಕಾಂಗ್ರೆಸ್ ಮಾತ್ರ. ಇದು ಇತಿಹಾಸದಲ್ಲೂ ಕಂಡುಬರುತ್ತದೆ ಎಂದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post