ಭಾರತೀಯ ಭೂವಿಜ್ಞಾನ ಇಲಾಖೆ, ಭಾರತ ಸರ್ಕಾರದಡಿಯಲ್ಲಿ ಬರುವ ನ್ಯಾಷನಲ್ ಸೆಂಟರ್ ಫಾರ್ ಅಂಟಾರ್ಟಿಕ್ ಓಷನ್ ಅಂಡ್ ರಿಸರ್ಚ್ (National center for Antarctic ocean and research) ಮೂಲಕ 1981ರಲ್ಲಿ ಭಾರತೀಯರು ಅಂಟಾರ್ಟಿಕಾಕ್ಕೆ ಡಾ. ಸೈಯದ್ ಜಹೂರ್ ಖಾದೀಮ್ ನೇತೃತ್ವದಲ್ಲಿ ಪ್ರಥಮ ಬಾರಿಗೆ ಅಂಟಾರ್ಟಿಕಾ ತಲುಪಿದರು.
ಬೇರೆ ಬೇರೆ ದೇಶಗಳು, ವಿಜ್ಞಾನಿಗಳು ಮತ್ತು ನಾವಿಕರು ಅಂಟಾರ್ಟಿಕಾಗೆ ತೆರಳುವ ಉದ್ದೇಶವೇ ಸಂಶೋಧನೆ. ಭಾರತೀಯರ ಉದ್ದೇಶವೂ ಸಹ ಅದೇ ಆಗಿತ್ತು. ಆಗಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಇಂತಹ ಪ್ರಯತ್ನಕ್ಕೆ ವಿಜ್ಞಾನಿಗಳನ್ನು ಹುರಿದುಂಬಿಸಿದ್ದರು. ಏಕೆಂದರೆ, ಹಿಮಪರ್ವತ ಗಳು ಹೆಪ್ಪುಗಟ್ಟಿದ ಸಾಗರ ಎಲ್ಲವನ್ನು ಜಯಿಸಿ ಅಂಟಾರ್ಟಿಕಾಗೆ ತಲುಪುವುದೇ ಒಂದು ದೊಡ್ಡ ಸಾಹಸ. ಅದನ್ನು ಮೀರಿ ಅಲ್ಲಿನ ರಕ್ತಹೆಪ್ಪುಗಟ್ಟಿಸುವ ವಾತಾವರಣದಲ್ಲಿ ಸಂಶೋಧನೆ ಕೈಗೊಳ್ಳುವುದು ಮತ್ತೊಂದು ರೀತಿಯ ಸಾಹಸ.
ಇಂಡಿಯನ್ ಅಂಟಾರ್ಟಿಕ್ ಪ್ರೋಗ್ರಾಮ್ ಹಾಗೆ ಸುಮ್ಮನೆ ಯಾವುದೋ ಸಂಶೋಧನೆ ಕೈಗೊಂಡಂತೆ ಆಗಿರಲಿಲ್ಲ. ಈ ಪ್ರೋಗ್ರಾಮ್ ಕಾರ್ಯಗತಗೊಳ್ಳಲು Antarctic Treaty Systemನ ನಿಬಂಧನೆ ಗೊಳಪಟ್ಟು ಜಾಗತಿಕವಾಗಿ ಹಲವು ರಾಷ್ಟ್ರಗಳು ಮಾನ್ಯತೆ ಬೇಕಾಗಿತ್ತು.
ಅಂಟಾರ್ಟಿಕ್ ಟ್ರೀಟಿ ಸಿಸ್ಟಮ್:
ಭೂಮಿಯ ಮೇಲಿನ ಮೂಲ ನಿವಾಸಿ ಮಾನವರಿಲ್ಲದ ಏಕೈಕ ಖಂಡ ಅಂಟಾರ್ಟಿಕಾ. ಹೀಗೆ ಮೂಲ ನಿವಾಸಿಗಳಿಲ್ಲದ ಹಕ್ಕು ಸಾಧಿಸಲು ಯಾರೂ ಇರದ, ಚಿಕ್ಕ ಚಿಕ್ಕ ಬದಲಾವಣೆಗಳು ಇಡೀ ಭೂಮಿಯ ಸಂಪೂರ್ಣ ವಾತಾವರಣದ ಮೇಲೆ ಪರಿಣಾಮ ಬೀರಬಲ್ಲ ಈ ಪ್ರದೇಶವನ್ನು ಸುರಕ್ಷಿತವಾಗಿರಿಸಲು 1959ರಲ್ಲಿ ಮಾಡಿದ ಹಲವು ಕಾನೂನು ಒಪ್ಪಂದಗಳೇ ಅಂಟಾರ್ಟಿಕಾ ಟ್ರೀಟಿ ಸಿಸ್ಟಮ್ (ATS).
ಶುರುವಾತಿನಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬೆಲ್ಜಿಯಂ, ಚಿಲಿ, ಫ್ರಾನ್‌ಸ್, ಜಪಾನ್, ನ್ಯೂಜಿಲ್ಯಾಂಡ್, ನಾರ್ವೆ, ಸೌತ್ ಆಫ್ರಿಕಾ, ಸೋವಿಯತ್, ಯೂನಿಯನ್, ಯುನೈಟೆಡ್ ಸ್ಟೇಟ್‌ಸ್ ಆಫ್ ಅಮೆರಿಕಾ ಮತ್ತು ಯುನೈಟೆಡ್ ಕಿಂಗ್‌ಡಮ್ 12 ರಾಷ್ಟ್ರಗಳು ಈ ಒಪ್ಪಂದವನ್ನು ಮಾಡಿಕೊಂಡಿದ್ದವು. ತದನಂತರ 2016ರವರೆಗೆ 53 ರಾಷ್ಟ್ರಗಳು ಈ ಒಪ್ಪಂದಕ್ಕೊಳಪಟ್ಟು ಅಂಟಾರ್ಟಿಕಾದಲ್ಲಿ ತಮ್ಮ ಸಂಶೋಧನೆ ಕೈಗೊಳ್ಳಲು ಮುಂದಾಗಿವೆ. ಮೇಲೆ ಹೇಳಿದ 12 ರಾಷ್ಟ್ರಗಳು ಕೇವಲ ಒಂದು ವರ್ಷದಲ್ಲಿ ಅಂಟಾರ್ಟಿಕಾದಲ್ಲಿ 50 ನೆಲೆಗಳನ್ನು ಸ್ಥಾಪಿಸಿದ್ದವು.
(ಮುಂದುವರೆಯುವುದು)
Discussion about this post