ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ನಮಗೆ ಈ ಮನುಷ್ಯ ಜನ್ಮ ಬಂದದ್ದು, ಈ ಜನ್ಮದಲ್ಲಿ ಸಾಧನೆ ಮಾಡಿಕೊಂಡು ಮೋಕ್ಷ ಪಡೆಯಲಿ ಎಂಬ ಕಾರಣಕ್ಕೋಸ್ಕರ. ಮೋಕ್ಷ ಎಂಬ ಮಹತ್ಫಲವು ದೊರೆಯಬೇಕಾದರೆ, ಅದಕ್ಕೆ ಹೇತುವಾದ ಭಗವಂತನ ಅನುಗ್ರಹಕ್ಕೆ ನಾವು ಪಾತ್ರರಾಗಬೇಕು. ಇದಕ್ಕೋಸ್ಕರವೇ ನಾವು ಪೂಜೆ, ಹೋಮ-ಹವನ ಮೊದಲಾದ ಅನೇಕ ಕರ್ಮಗಳನ್ನು ಮಾಡುತ್ತೇವೆ. ಆದರೆ ವಸ್ತುತಸ್ತು ಕರ್ಮ ನೇರವಾಗಿ ಮೋಕ್ಷಸಾಧನ ಅಲ್ಲ ಹಾಗಾದರೆ ನಾವು ಕರ್ಮಗಳನ್ನು ಮಾಡುವ ಉದ್ದೇಶವಾದರೂ ಏನು ಎಂಬುದನ್ನು ತಿಳಿಯೋಣ.
ಮೋಕ್ಷಕ್ಕೆ ನೇರ ಸಾಧನವಾದದ್ದು ಅಪರೋಕ್ಷಜ್ಞಾನ. ಈ ಅಪರೋಕ್ಷಜ್ಞಾನವು ನಮಗೆ ಶ್ರವಣ-ಮನನ-ನಿಧಿಧ್ಯಾಸನಗಳ ಮೂಲಕ ಬರುತ್ತದೆ. ಇದರಲ್ಲಿ ಮೊದಲನೆಯದಾಗಿ ಶ್ರವಣ ಎಂದರೆ, ನಾವು ಶ್ರದ್ಧೆಯಿಂದ ಭಗವಂತನನ್ನು ಶಾಸ್ತ್ರದ ಮೂಲಕ ಚೆನ್ನಾಗಿ ಕೇಳಿ ತಿಳಿಯುವುದು. ಮನನ ಎಂದರೆ, ಕೇಳಿದ ವಿಷಯವನ್ನು ಗೊಂದಲವಿಲ್ಲದಂತೆ ಹೆಚ್ಚು ಚಿಂತನೆ ಮಾಡುವುದು. ನಾವು ಹೆಚ್ಚು ಮನನ ಮಾಡುವುದರಿಂದ ಭಗವಂತನ ಬಗ್ಗೆ ಏನಾದರೂ ಗೊಂದಲಗಳಿದ್ದರೆ ಅವೆಲ್ಲವೂ ದೂರವಾಗುತ್ತದೆ. ಇನ್ನು ಶ್ರವಣ-ಮನನಾದಿಗಳ ನಂತರ ನಾವು ನಿಶ್ಚಲವಾದ ಮನಸ್ಸಿನಿಂದ ಭಗವಂತನ ಧ್ಯಾನವನ್ನು ಮಾಡಬಹುದು. ಇದನ್ನೇ ನಿಧಿಧ್ಯಾಸನ ಎಂಬುದಾಗಿ ಕರೆಯುತ್ತಾರೆ.
ಆದರೆ, ಮೇಲೆ ತಿಳಿಸಿದ ಶ್ರವಣ-ಮನನ-ನಿಧಿಧ್ಯಾಸನಗಳನ್ನು ಮಾಡುವಾಗ ಅಂತಃಕರಣ ನೈರ್ಮಲ್ಯ ಇಲ್ಲದಿದ್ದರೆ, ಕಲುಷಿತವಾದ ನಮ್ಮ ಮನಸ್ಸಿನಲ್ಲಿ ಭಗವಂತನು ನೆಲೆಸುವುದಿಲ್ಲ. ಹೀಗಾಗಿ ಆ ಅಂತಃಕರಣದ ಶುದ್ಧಿಯನ್ನು ಮಾಡುವುದೇ ಸತ್ಕರ್ಮಾನುಷ್ಠಾನ. ಕಲುಷಿತವಾದ ಮನಸ್ಸಿನಿಂದ ಧ್ಯಾನಿಸಿದರೆ, ಅಪರೋಕ್ಷಜ್ಞಾನವಾಗುವುದಿಲ್ಲ. ಹೀಗಾಗಿ ಕರ್ಮಾಚರಣೆಯು ನೇರವಾಗಿ ಮೋಕ್ಷಸಾಧನವಲ್ಲದಿದ್ದರೂ ಕೂಡ, ಪರೋಕ್ಷವಾಗಿ ಅಂದರೆ, ಸತ್ಕರ್ಮಾನುಷ್ಠನದಿಂದ ಶ್ರವಣ-ಮನನ-ನಿಧಿಧ್ಯಾಸನಗಳು, ಇದರಿಂದ ಅಪರೋಕ್ಷ ಜ್ಞಾನ, ಅಪರೋಕ್ಷಜ್ಞಾನದಿಂದ ಭಗವತ್ಪ್ರಸಾದ, ಪ್ರಸಾದದಿಂದ ಮೋಕ್ಷ. ಹೀಗಾಗಿ ಕರ್ಮಾನುಷ್ಠವೇ ಮೋಕ್ಷಕ್ಕೆ ಮೊದಲ ಮೆಟ್ಟಿಲು ಎಂದು ಹೇಳಿದರೆ ತಪ್ಪಾಗಲಾರದು.
(ಸಂಪನ್ನ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post